ಪುತ್ತೂರು ನಗರಸಭೆ: ಕೆಲ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗೆ ದೂರು
ಪುತ್ತೂರು, ಮೇ 25: ವರ್ಗಾವಣೆಗೊಂಡ ಬಳಿಕ ಪುತ್ತೂರು ನಗರ ಸಭೆಯ ಕಡತಗಳ ಪ್ರಭಾರವನ್ನು ಹಸ್ತಾಂತರಿಸದೇ ಇರುವ ಕೆಲ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪುತ್ತೂರು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಮತ್ತು ಸದಸ್ಯರು ಪುತ್ತೂರು ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪುತ್ತೂರು ಪುರಸಭೆ/ ಮೇಲ್ದರ್ಜೆಗೇರಿದ ನಗರ ಸಭೆಯ ಪ್ರಥಮ ದರ್ಜೆ ಸಹಾಯಕರಾಗಿದ್ದ ಜನಾರ್ದನ ನಾಯ್ಕ, ಯೋಗೀಶಪ್ಪ, ಕಿರಿಯ ಅಭಿಯಂತರ ಶಿವಕುಮಾರ್, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ರಾಮಚಂದ್ರ, ಕಂದಾಯ ನಿರೀಕ್ಷಕ ಚೆನ್ನಪ್ಪ ಗೌಡ, ದ್ವಿತೀಯ ದರ್ಜೆ ಸಹಾಯಕ ಮಂಜುನಾಥ್ ಕಡತ ಪ್ರಭಾರವನ್ನು ಕಚೇರಿಗೆ ನೀಡಿಲ್ಲ. ಇವರೆಲ್ಲ ಈಗಾಗಲೇ ವರ್ಗಾವಣೆಗೊಂಡಿದ್ದಾರೆ. ನಗರಸಭಾ ಕಚೇರಿಯಲ್ಲಿ ಕಟ್ಟಡ ಹಾಗೂ ಇನ್ನಿತರ ಪರವಾನಗಿ ನವೀಕರಣಕ್ಕೆ ಅರ್ಜಿ ಬಂದಾಗ ಮೂಲ ಕಡತಗಳು ಕಚೇರಿಯಲ್ಲಿ ಇಲ್ಲದೇ ಅರ್ಜಿದಾರರಿಗೆ ಪರವಾನಗಿ ನವೀಕರಣ ಮಾಡಲು ಸಮಸ್ಯೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಗರಸಭಾ ಕಚೇರಿಯಲ್ಲಿ ರೆಕಾರ್ಡ್ ರೂಂ ಇದ್ದರೂ, ಕಚೇರಿಯ ಕಡತಗಳನ್ನು ಕ್ರಮದಂತೆ ಜೋಡಿಸಿಲ್ಲ. ರೆಕಾರ್ಡ್ ರೂಂನ ಕಡತಗಳ ಬಗ್ಗೆ ರಿಜಿಸ್ಟ್ರಿ ವಹಿಯನ್ನು ನಿರ್ವಹಿಸುವುದಿಲ್ಲ. ನಗರಸಭಾ ಕಚೇರಿಯಲ್ಲಿ ವಿಷಯ ನಿರ್ವಾಹಕರು ನಿರ್ವಹಿಸುವ ಕಡತಗಳನ್ನು ತಮ್ಮ ವಶದಲ್ಲಿಯೇ ಇಟ್ಟುಕೊಂಡಿದ್ದು, ರೆಕಾರ್ಡ್ ರೂಂಗೆ ಕಡತ ನೀಡುವ ಕಾರ್ಯ ನಡೆಯುತ್ತಿಲ್ಲ ಎಂದು ಅವರು ಮನವಿಯಲ್ಲಿ ಆರೋಪಿಸಿದ್ದಾರೆ.
ದ್ವಿತೀಯ ದರ್ಜೆ ಸಹಾಯಕ ಮಂಜುನಾಥ್ ಮೂಡುಬಿದರೆ ಪುರಸಭೆಗೆ ನಿಯೋಜನೆಗೊಂಡು ವರ್ಗಾವಣೆಯಾಗಿದ್ದಾರೆ. ಆದರೆ ತನ್ನ ವಶದಲ್ಲಿದ್ದ ಕಡತದ ಪ್ರಭಾರವನ್ನು ಈವರೆಗೂ ಕಚೇರಿಗೆ ನೀಡಿರುವುದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳದ ಹಿಂದಿನ ಮುಖ್ಯಾಧಿಕಾರಿಯವರು ತಕ್ಷಣವೇ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿರುತ್ತಾರೆ. ಮಂಜುನಾಥ್ ಕರ್ತವ್ಯದಿಂದ ಬಿಡುಗಡೆಗೊಂಡು ಒಂದೂವರೆ ವರ್ಷ ಕಳೆದರೂ ಕಡತಗಳನ್ನು ನಗರಸಭೆಗೆ ಹಸ್ತಾಂತರಿಸಿಲ್ಲ. ಆದ್ದರಿಂದ ಕಡತ ನೀಡದ ಎಲ್ಲಾ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಿ ತಮ್ಮ ವಶದಲ್ಲಿದ್ದ ಕಡತವನ್ನು ನಗರಸಭೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳುವಂತೆ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.