ಮೇ 27ರಂದು ಎ.ಜೆ. ಆಸ್ಪತ್ರೆಯಲ್ಲಿ ಹೈ-ಎಂಡ್ ಪಿಇಟಿ (ಪೆಟ್) ಸಿಟಿ ಸ್ಕ್ಯಾನ್ ಆರಂಭ

Update: 2016-05-25 15:52 GMT

ಮಂಗಳೂರು,ಮೇ 25:ನಗರದ ಕುಂಟಿಕಾನದಲ್ಲಿರುವ ಎ.ಜೆ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲ್ಲಿ ಅಳವಡಿಸಲಾದ ಕರ್ನಾಟಕದ ಮೊತ್ತಮೊದಲ ಅತ್ಯಾಧುನಿಕ ಪಿಇಟಿ/ಸಿಟಿಯನ್ನು ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿಯವರು ಮೇ 27ರಂದು ಬೆಳಿಗ್ಗೆ 11.30ಕ್ಕೆ ಉದ್ಘಾಟಿಸಲಿದ್ದಾರೆ ಎಂದು ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ. ಶೆಟ್ಟಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹೈ-ಎಂಡ್ ಪಿಇಟಿ (ಪೆಟ್) ಸಿಟಿ ಸ್ಕ್ಯಾನ್‌ನ್ನು ಬಡವರಿಗೆ ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಕೆ. ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ದೇಶದಲ್ಲಿರುವ ಅತ್ಯುತ್ತಮ ಆರೋಗ್ಯ ಸೇವೆಗಳಿಗೆ ಹೊಂದುವಂತಹ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದರಲ್ಲಿ ಮುಂಚೂಣಿಯಲ್ಲಿದೆ. ಆಸ್ಪತ್ರೆಯು ರೋಗಿಯ ಆರೈಕೆ ಹಾಗೂ ನೂತನ ಉಪಕರಣಗಳನ್ನು ಪ್ರಪ್ರಥಮ ಬಾರಿಗೆ ಆಳವಡಿಸಿ, ಜನರಿಗೆ ಅತ್ಯುತ್ತಮ ಆರೋಗ್ಯ ಸೌಲಭ್ಯವನ್ನು ಕಲ್ಪಿಸುವ ಕೀರ್ತಿಯನ್ನು ಪಡೆದಿದೆ. 2013ರಲ್ಲಿ ಸಮಗ್ರ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡುವ ಎ.ಜೆ. ಕ್ಯಾನ್ಸರ್ ಇನ್ಸ್ಟಿಟ್ಯೂಟನ್ನು ಪ್ರಾರಂಭಿಸಿ ಕ್ಯಾನ್ಸರ್ ರೋಗದ ಚಿಕಿತ್ಸೆಯನ್ನು ನೀಡಲು ಬೇಕಾದಂತಹ ರೇಡಿಯೇಶನ್ (ಕಿರಣ) ಅಂಕೋಲಜಿ, ಮೆಡಿಕಲ್ ಅಂಕೋಲಜಿ, ಶಸ್ತ್ರಚಿಕಿತ್ಸಾ ಅಂಕೋಲಜಿ ಮತ್ತು ನ್ಯೂಕ್ಲಿಯರ್ ಮೆಡಿಸಿನ್‌ನಂತಹ ವಿಭಾಗಗಳನ್ನು ಒಂದೇ ಸೂರಿನಡಿ ಸ್ಥಾಪಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೊತ್ತಮೊದಲ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗ ಪಿ.ಇ.ಟಿ.(ಪೆಟ್)/ಸಿಟಿ ಸ್ಕ್ಯಾನ್ ಸೇರ್ಪಡೆಗೊಂಡಿದೆ ಎಂದು ಹೇಳಿದರು.

 ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ (ಪಿಇಟಿ) ಮತ್ತು ಕಂಪ್ಯೂಟರೀಕೃತ ಟೊಮೊಗ್ರಫಿ (ಸಿಟಿ)ಯು ವೈದರು ಚಿಕಿತ್ಸೆಗೆ ಶಿಫಾರಸು ಮಾಡುವ ಮೊದಲೇ ದೇಹದ ಯಾವ ಭಾಗದಲ್ಲಿ ಕ್ಯಾನ್ಸರ್ ರೋಗವಿದೆಯೆಂದು ಪತ್ತೆಹಚ್ಚಲು ಸಹಾಯ ಮಾಡುವ ಒಂದು ಅತ್ಯಾಧುನಿಕ ಉಪಕರಣವಾಗಿದೆ. ಅತೀ ಸೂಕ್ಷ್ಮ ಪಿಇಟಿ ಸ್ಕ್ಯಾನ್ ರೋಗದ (ಅಸ್ವಸ್ಥತೆಯ) ಜೀವಶಾಸ್ತ್ರದ ಚಿತ್ರವನ್ನು, ಸಿಟಿ ಸ್ಕ್ಯಾನ್ ದೇಹದ ಅಂತರಿಕ ಅಂಗರಚನಾಶಾಸ್ತ್ರದ ವಿವರವಾದ ಚಿತ್ರವನ್ನು ನೀಡುತ್ತದೆ. ಪಿಇಟಿ/ಸಿಟಿ ಸ್ಕ್ಯಾನ್ ಈ ಎರಡು ಸಾಮರ್ಥ್ಯಗಳನ್ನು ಸಂಯೋಜಿಸಿ ಒಂದು ಸುಸ್ಥಾಪಿತ ಚಿತ್ರಣವನ್ನು ನೀಡುವ ಸ್ಕ್ಯಾನ್ ಆಗಿದೆ ಎಂದು ಹೇಳಿದರು.

 ಬಹುತೇಕವಾಗಿ ಪಿಇಟಿ/ಸಿಟಿ ಸ್ಕಾನ್‌ಗಳನ್ನು ಕ್ಯಾನ್ಸರ್ ವಿಶ್ಲೇಷಣೆಗಾಗಿ ಬಳಸಲಾಗುತ್ತದೆ. ವೈದ್ಯರುಗಳು ತಮ್ಮ ಕ್ಯಾನ್ಸರ್ ಪೀಡಿತ ರೋಗಿಗಳ ರೋಗದ ವಿಶ್ಲೇಷಣೆ, ರೋಗದ ಹಂತ ಮತ್ತು ಚಿಕಿತ್ಸೆಯ ಮೌಲ್ಯಮಾಪನ ಮಾಡಲು ಬಳಸುತ್ತಾರೆ. ಪಿಇಟಿ ಸ್ಕ್ಯಾನ್ ವೈದ್ಯರುಗಳಿಗೆ ಜೀವಿತ ಮತ್ತು ಮೃತ ಅಂಗಾಂಶಗಳು ಅಥವಾ ಹಾನಿಕಾರವಲ್ಲದ ಮತ್ತು ಮಾರಕ ಕಾಯಿಲೆಗಳ ನಡುವಿನ ವ್ಯತ್ಯಾಸವನ್ನು ತಿಳಿಯಲು ಸಹಾಯ ಮಾಡುತ್ತದೆ. ಪಿಇಟಿ ಚಿತ್ರಣವು ಮಾರಕ ಅಥವಾ ಹಾನಿಕಾರಕವಲ್ಲದ ಪ್ರಶ್ನಾರ್ಹ ವಿಕೃತಿಯ ಕೋಶದ ಚಟುವಟಿಕೆಯ ಹೆಚ್ಚುವರಿ ಮಾಹಿತಿಯನ್ನು ವೈದ್ಯರುಗಳಿಗೆ ನೀಡುತ್ತದೆ. ಪಿಇಟಿ/ಸಿಟಿ ಸ್ಕ್ಯಾನ್ ರೋಗದ ವ್ಯಾಪ್ತಿಯನ್ನು ತೋರಿಸುತ್ತದೆ. ಪಿಇಟಿ/ಸಿಟಿ ಸ್ಕ್ಯಾನ್ ಉತ್ತಮ ಚಿಕಿತ್ಸೆ ನೀಡುವಲ್ಲಿ ವೈದ್ಯರುಗಳಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ಕ್ಯಾನ್ಸರ್ ಚಿಕಿತ್ಸೆ ಪೂರ್ಣಗೊಂಡ ನಂತರವು ಪಿಇಟಿ/ಸಿಟಿ ಸ್ಕ್ಯಾನ್ ವೈದ್ಯರುಗಳಿಗೆ ಕ್ಯಾನ್ಸರ್ ಮರುಕಳಿಸಿದೆಯೇ ಎಂಬ ಸಂಶಯದ ಮೇಲೆ ತನಿಖೆ, ಶಸ್ತ್ರಚಿಕಿತ್ಸೆ ಅಥವಾ ಕಿರಣ ಚಿಕಿತ್ಸೆಯಿಂದಾಗಿ ಹೋಗಲಾಡಿಸಲಾಗದ ಗಡ್ಡೆಗಳು ಅಥವಾ ಅಂಗಾಂಶಗಳ ಇರುವಿಕೆಯನ್ನು ಬಹಿರಂಗ ಪಡಿಸಲು ಸಹಾಯ ಮಾಡುತ್ತದೆ. ಹಿಂದಿನ ರೋಗದ ವಿವರ, ಹಾಗೂ ಹೆಚ್ಚು ನಿಖರವಾಗಿ ರೋಗದ ವ್ಯಾಪ್ತಿಯನ್ನು, ಹಂತವನ್ನು ಪತ್ತೆಹಚ್ಚಿ ಸರಿಯಾದ ಚಿಕಿತ್ಸೆಯನ್ನು ನೀಡುವುದಕ್ಕೆ ಪಿಇಟಿ/ಸಿಟಿ ಸ್ಕ್ಯಾನ್ ಸಹಾಯ ಮಾಡುವುದರೊಂದಿಗೆ ರೋಗವನ್ನು ಗುಣಪಡಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದರು.

ಸೀಮೆನ್ಸ್ ಬಯೋಗ್ರಪ್ ಎಂಸಿಟಿ 20 ಎಕ್ಸೆಲ್ ಒಂದು ಪ್ರಬಲ ಅಣ್ವಿಕ ಸಿಟಿಯಾಗಿದ್ದು, ಇದು ದೇಹದ ಯಾವ ಭಾಗಕ್ಕೂ ತಲುಪಿ ರೋಗವನ್ನು ಪತ್ತೆಹಚ್ಚಬಲ್ಲದಾಗಿದೆ. ಈ ಉಪಕರಣವು ಮುಂಚಿತವಾಗಿ ರೋಗವನ್ನು ಪತ್ತೆಹಚ್ಚಿ, ರೋಗವನ್ನು ನಿಖರವಾಗಿ ನಿರೂಪಿಸಿ ಅದಕ್ಕೆ ನೀಡಲಾಗುವ ಚಿಕಿತ್ಸೆಯ ವಿಧಾನದಲ್ಲಿ ಬೇಕಾಗುವ ಸುಧಾರಣೆಯನ್ನು ಮೇಲ್ವಿಚಾರಣೆ ಮಾಡಿ ಅದನ್ನು ದಾಖಲೆಮಾಡುತ್ತದೆ. ಅದಷ್ಟು ವೇಗವಾಗಿ ರೋಗವನ್ನು ಪತ್ತೆಹಚ್ಚುವುದು ಮತ್ತು ರೋಗದ ಪ್ರಗತಿಯನ್ನು ದಾಖಲೆಮಾಡಿ ಸರಿಯಾದ ಚಿತ್ರಣವನ್ನು ನೀಡುವುದು ಪಿಇಟಿ/ಸಿಟಿ ಸ್ಕ್ಯಾನ್‌ನ ಒಂದು ಪ್ರಮುಖ ಸಾಮರ್ಥ್ಯವಾಗಿದೆ. ಯಾವುದೇ ಅಂಗದಲ್ಲಿನ ಸಣ್ಣ ಪ್ರಮಾಣದ ರೋಗದ ವಿವರವನ್ನು ನೋಡಲು ಪರಿಮಾಣಾತ್ಮಕ ನಿಖರತೆಯುಳ್ಳ ಅತೀ ಹೆಚ್ಚಿನ ಗುಣಮಟ್ಟದ ಚಿತ್ರಣದ ಅವಶ್ಯಕತೆಯಿರುತ್ತದೆ.

ಪಿಇಟಿ/ಸಿಟಿ ಸ್ಕ್ಯಾನ್ ತನ್ನ ಅಸಾಧಾರಣ ಗುಣಮಟ್ಟದ ರೋಗ ಚಿತ್ರಣದಿಂದಾಗಿ ವೈದ್ಯರಿಗೆ ರೋಗದ ಚಿಕಿತ್ಸೆಗೆ ದೃಡವಾದ ನಿರ್ಣಯ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಬಯೋಗ್ರಾಫ್ ಎಂಸಿಟಿ 20 ಎಕ್ಸೆಲ್‌ವನ್ನು ಇಡೀ ದೇಹದ ಪಿಇಟಿ/ಸಿಟಿ ಟೊಮೋಗ್ರಾಪ್ ಚಿತ್ರಣವನ್ನು, ಪ್ರತ್ಯೇಕವಾಗಿ ಕ್ಯಾನ್ಸರಿನ, ನರವೈಜ್ಞಾನಿಕ ಮತ್ತು ಹೃದ್ರೋಗಕ್ಕೆ ಸಂಬಂಧಪಟ್ಟ ರೋಗ ನಿರ್ಣಯ ತೆಗೆದುಕೊಳ್ಳುವ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಬಯೋಗ್ರಾಫ್ ಒಂದು ಅಕ್ರಮಣಶೀಲವಲ್ಲದ ವಿಧಾನವಾಗಿದ್ದು, ಇದು ಗಮನಾರ್ಹ ಸಿಟಿ ಮತ್ತು ಅಣುವಿನ ಮಟ್ಟದಲ್ಲಿರುವ ಅಂಗರಚನಾಶಾಸ್ತ್ರ ಹಾಗೂ ಜೈವಿಕ ಪ್ರಕ್ರಿಯೆಗಳ ವಿವರವನ್ನು ಹೊಂದಿರುವ ಪಿಇಟಿ/ಸಿಟಿ ಚಿತ್ರಣಗಳನ್ನು ಉತ್ಪಾದಿಸುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News