ಲಾಯಿಲ ಗ್ರಾಪಂ ಕಚೇರಿಯಲ್ಲಿ ಬೆಂಕಿ: ದಾಖಲೆ ಪತ್ರಗಳು, ಕಂಪ್ಯೂಟರ್ ಭಸ್ಮ
ಬೆಳ್ತಂಗಡಿ, ಮೇ 25: ಲಾಯಿಲ ಗ್ರಾಮ ಪಂಚಾಯತ್‌ನಲ್ಲಿ ಬುಧವಾರ ಬೆಳಗ್ಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು ಕಚೇರಿಯಲ್ಲಿದ್ದ ಹಲವಾರು ದಾಖಲೆ ಪತ್ರಗಳು ಹಾಗೂ ಕಂಪ್ಯೂಟರ್‌ಗಳು ಬೆಂಕಿಗೆ ಸುಟ್ಟು ನಾಶವಾಗಿದೆ.
ಬೆಳಗ್ಗಿನ ಜಾವ ಆರು ಗಂಟೆಯ ಸುಮಾರಿಗೆ ಸ್ಥಳೀಯರು ಗ್ರಾಮ ಪಂಚಾಯತ್ ಕಟ್ಟಡದಿಂದ ಹೊಗೆಯೇಳುವುದನ್ನು ನೋಡಿ ಪಂಚಾಯತ್ ಉಪಾಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸಿದ್ದಾರೆ. ಕಂಪ್ಯೂಟರ್ ಕೊಠಡಿಗೆ ಬೆಂಕಿ ಹಿಡಿದಿದ್ದು ಕಂಪ್ಯೂಟರುಗಳು ಸುಟ್ಟು ಹೋಗಿವೆ. ಅಲ್ಲದೆ ಇದೇ ಕೊಠಡಿಯಲ್ಲಿ ಕೆಲವೊಂದು ದಾಖಲೆಪತ್ರಗಳು ಹಾಗೂ ಕಡತಗಳನ್ನು ಇಡಲಾಗಿತ್ತು. ಇವುಗಳಿಗೂ ಬೆಂಕಿ ತಗುಲಿದ್ದು ಒಂದಿಷ್ಟು ಕಡತಗಳು ಸುಟ್ಟುಹೋಗಿದೆ.
ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಗ್ರಾಮಪಂಚಾಯತ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಅಧಿಕಾರಿಗಳು ಮಾತ್ರ ಇದು ಇದು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಆಗಿದೆ ಎಂಬುದನ್ನು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಇದು ಘಟನೆಯ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಲು ಕಾರಣವಾಗಿದೆ.
ಈ ನಡುವೆ ಬುಧವಾರ ಲಾಯಿಲ ಗ್ರಾಮ ಪಂಚಾಯತ್‌ನ ಕಳೆದ ಎರಡು ವರ್ಷಗಳ ಲೆಕ್ಕಪರಿಶೋಧನೆ ನಡೆಯಲಿತ್ತು ಎಂಬ ಮಾಹಿತಿಯೂ ಲಭ್ಯವಾಗುತ್ತಿದ್ದು ಈ ಹಿನ್ನಲೆಯಲ್ಲಿ ಬೆಂಕಿ ಪ್ರಕರಣಕ್ಕೆ ಹೆಚ್ಚು ಮಹತ್ವ ಸಿಕ್ಕಿದಂತಾಗಿದೆ. ಪಂಚಾಯತು ಕಚೇರಿಯಲ್ಲಿರುವ ಸಿಸಿಟಿವಿ ಯಲ್ಲಿಯೂ ಯಾವುದೇ ದೃಶ್ಯಗಳು ದಾಖಲಾಗಿಲ್ಲ ಎನ್ನಲಾಗಿದೆ. ಘಟನಾಸ್ಥಳಕ್ಕೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಉಮೇಶ್ ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ನಡುವೆ ಲಾಯಿಲ ನಿವಾಸಿ ನಾಗರಾಜ್ ಎಂಬವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಗ್ರಾಮ ಪಂಚಾಯತಿನಲ್ಲಿ ನಡೆದಿರುವ ಬೆಂಕಿ ಆಕಸ್ಮಿಕವಲ್ಲ. ದಾಖಲೆಗಳನ್ನು ನಾಶ ಮಾಡುವ ಉದ್ದೇಶದಿಂದ ಬೆಂಕಿ ಹಾಕಲಾಗಿದೆ. ಲಾಯಿಲ ಗ್ರಾಮ ಪಂಚಾಯತ್ ವಿರುದ್ದ ಲೋಕಾಯುಕ್ತರಿಗೆ ಸೇರಿದಂತೆ ಹಲವೆಡೆ ದೂರುಗಳು ಇದ್ದು ಈ ಹಿನ್ನಲೆಯಲ್ಲಿ ಈ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸುವಂತೆ ವಿನಂತಿಸಿದ್ದಾರೆ.
ಕೆಡಿಪಿ ಸಭೆಯಲ್ಲಿಯೂ ಪ್ರಸ್ತಾಪ
ಲಾಯಿಲ ಗ್ರಾಮ ಪಂಚಾಯತು ಕಚೇರಿಗೆ ಬೆಂಕಿ ಬಿದ್ದ ಪ್ರಕರಣ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿಯೂ ಚರ್ಚೆಗೆ ಕಾರಣ ವಾಯಿತು. ಸಭೆಯಲ್ಲಿ ಧರಣೆಂದ್ರಕುಮಾರ್, ಶಾಹುಲ್ ಹಮೀದ್ ಹಾಗೂ ಶೇಖರ ಕುಕ್ಕೇಡಿ ವಿಷಯ ಪ್ರಸ್ತಾಪಿಸಿ ಗ್ರಾಮ ಪಂಚಾಯತ್ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಮಹತ್ವದ ದಾಖಲೆಗಳು ನಾಶವಾಗಿದೆ. ಈ ಘಟನೆ ಹೇಗೆ ನಡೆದಿದೆ ಎಂಬ ಬಗ್ಗೆ ಸರಿಯಾದ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಪ್ರಕರಣದ ಬಗ್ಗೆ ಸಮರ್ಪಕವಾದ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.