ಮೇ 28ರಂದು ಉಳ್ಳಾಲ ಖಾಝಿ ದರ್ಗಾಕ್ಕೆ ಭೇಟಿ
ಮಂಗಳೂರು, ಮೇ 25: ಉಳ್ಳಾಲ ದರ್ಗಾ ಅಧ್ಯಕ್ಷರ ಆಯ್ಕೆ ಕುರಿತ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಮೇ 26ರಂದು ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಲಿದ್ದ ಉಳ್ಳಾಲ ಖಾಝಿ ಕೂರತ್ ತಂಙಳ್ ತಮ್ಮ ಭೇಟಿಯನ್ನು ಮೇ 28ಕ್ಕೆ ಮುಂದೂಡಿದ್ದಾರೆ ಎಂದು ದರ್ಗಾ ಸಮಿತಿಯ ‘ಅಧ್ಯಕ್ಷ’ ಅಬ್ದುಲ್ ರಶೀದ್ ಹಾಜಿ ಉಳ್ಳಾಲ ತಿಳಿಸಿದ್ದಾರೆ.
ಅಂದು ಸಮಿತಿಯ ಸದಸ್ಯರು ಅವರನ್ನು ಮಾಸ್ತಿಕಟ್ಟೆ ಜಂಕ್ಷನ್‌ನಿಂದ ದಫ್ ಮೆರವಣಿಗೆಯ ಮೂಲಕ ಭವ್ಯ ಸ್ವಾಗತದೊಂದಿಗೆ ಉಳ್ಳಾಲ ದರ್ಗಾಕ್ಕೆ ಕರೆ ತರುವುದಾಗಿ ಅವರು ತಿಳಿಸಿದರು.
ದರ್ಗಾ ಅಧ್ಯಕ್ಷರ ವಿವಾದಕ್ಕೆ ಸಂಬಂಧಿಸಿ ಇತ್ತೀಚೆಗೆ ನಗರದ ಪಂಪ್‌ವೆಲ್‌ನ ತಖ್ವಾ ಮಸೀದಿಯಲ್ಲಿ ಎ.ಪಿ.ಉಸ್ತಾದ್ ಅವರ ನೇತೃತ್ವದಲ್ಲಿ ಕರೆದ ಸಭೆಯಲ್ಲಿ ಉಳ್ಳಾಲ ಖಾಝಿ ಕೂರತ್ ತಂಙಳ್ ಅವರು ಮೇ 26ರಂದು ಉಳ್ಳಾಲ ದರ್ಗಾಕ್ಕೆ ಭೇಟಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು.
ಆದರೆ ಖಾಝಿಯವರಿಗೆ ಅಂದು ಕೇರಳದ ಎಟ್ಟಿಕುಲಂನಲ್ಲಿ ವಾರ್ಷಿಕ ಸ್ವಲಾತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿರುವುದರಿಂದ ಅವರು ಭೇಟಿಯನ್ನು ಮೇ 28ಕ್ಕೆ ಮುಂದೂಡಿದ್ದಾರೆ ಎಂದು ಅಬ್ದುಲ್ ರಶೀದ್ ಉಳ್ಳಾಲ ತಿಳಿಸಿದ್ದಾರೆ.