×
Ad

ಸಮುದ್ರ ಅಲೆಗಳಲ್ಲಿ ಸಾಹಸ ಪ್ರದರ್ಶನಕ್ಕೆ ವೇದಿಕೆ ಸಜ್ಜು

Update: 2016-05-26 17:14 IST

ಮಂಗಳೂರು, ಮೇ 26: ದೂರದಿಂದ ಪ್ರಶಾಂತವಾಗಿ ತೋರುವ, ಹತ್ತಿರದಲ್ಲಿ ಬುಸುಗುಟ್ಟುವ ಅಲೆಗಳ ನರ್ತನದೊಂದಿಗೆ ಕಣ್ಮನ ಸೆಳೆಯುವ ಸಸಿಹಿತ್ಲು ಬೀಚ್‌ನಲ್ಲಿ ಮೇ 27ರಿಂದ ಮೂರು ದಿನಗಳ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಒಂದರ ಮೇಲೊಂದರಂತೆ ಪುಟಿದೇಳುವ ಸಮುದ್ರದಲೆಗಳಲ್ಲಿ ಹಲಗೆಯಾಕಾರದ ಬೋಟಿನಲ್ಲಿ ಅಪ್ಪಳಿಸುವ ಅಲೆಗಳಿಗೆ ಎದೆಯೊಡ್ಡಿ ಅಲೆಗಳ ಮೇಲೆ ಮೇಲೆ ಸಾಗುವ ಸರ್ಫಿಂಗ್ ಸ್ಪರ್ಧೆಗೆ ದೇಶ ವಿದೇಶಗಳಿಂದ ಸರ್ಫರ್‌ಗಳು ಈಗಾಗಲೇ ಆಗಮಿಸಿದ್ದಾರೆ.

ಇಂದು ಬೆಳಗ್ಗಿನ ಹೊತ್ತು ಕೆಲವು ಸರ್ಫಿಂಗ್ ಸ್ಪರ್ಧಿಗಳು ಹಾಗೂ ಆಸಕ್ತರು ತಮ್ಮ ಸರ್ಫಿಂಗ್ ಬೋಟ್‌ಗಳನ್ನು ಹಿಡಿದು ಸಮುದ್ರದ ಅಲೆಗಳಲ್ಲಿ ತೇಲಾಡುವುದನ್ನು ಅಭ್ಯಾಸ ಮಾಡುತ್ತಿದ್ದ ದೃಶ್ಯ ಕಂಡು ಬಂತು. ರಾಜ್ಯದ ಕೀಡಾ ಸಚಿವ ಅಭಯ ಚಂದ್ರ ಜೈನ್ ಇಂದು ಸ್ಪರ್ಧಾ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ಸಚಿವರ ಜತೆ ದ.ಕ. ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಹಾಗೂ ಪ್ರಸಕ್ತ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಉಪಸ್ಥಿತರಿದ್ದು, ಸರ್ಫರ್‌ಗಳಿಂದ ಸ್ಪರ್ಧಾ ಪೂರ್ವ ಅಭ್ಯಾಸವನ್ನು ವೀಕ್ಷಿಸಿದರು.

ಸ್ಪರ್ಧೆಗಾಗಿ ಸುಂದರಗೊಂಡಿದೆ ಸಸಿಹಿತ್ಲು ಬೀಚ್!

ಸುರತ್ಕಲ್‌ನ ಮುಕ್ಕದಿಂದ ಸಸಿಹಿತ್ಲು ಬೀಚ್‌ಗೆ ಸುಮಾರು 3 ಕಿ.ಮೀ. ದೂರವಿದ್ದು, ಸರ್ಫಿಂಗ್ ಸ್ಪರ್ಧೆಯ ಹಿನ್ನೆಲೆಯಲ್ಲಿ ಬೀಚ್‌ಗೆ ಸಾಗುವ ಒಳ ರಸ್ತೆಯ ಸುಮಾರು 500 ಮೀಟರ್‌ಗೂ ಅಧಿಕ ಉದ್ದಕ್ಕೆ ಸಮತಟ್ಟುಗೊಳಿಸಿ ವಾಹನಗಳು ಸರಾಗವಾಗಿ ಓಡಾಡಲು ಅವಕಾಶ ಕಲ್ಪಿಸಲಾಗಿದೆ. ಬೀಚ್‌ನ ಸುತ್ತಮುತ್ತಲಿನಲ್ಲಿದ್ದ ಪೊದೆಗಳನ್ನು ಕಡಿದು ಸ್ವಚ್ಛಗೊಳಿಸಿ ಬೀಚ್‌ನ ವಾತಾವರಣವನ್ನು ಆಹ್ಲಾದಕರಗೊಳಿಸಲಾಗಿದೆ.

ಇಂತಹ ರಾಷ್ಟ್ರೀಯ ಸ್ಪರ್ಧೆಗಳು ಪ್ರವಾಸೋದ್ಯಮಕ್ಕೂ ಒತ್ತು ನೀಡುತ್ತವೆ. ಸ್ಪರ್ಧೆಗಳ ಹಿನ್ನೆಲೆಯಲ್ಲಿ ಇಂತಹ ಪ್ರದೇಶಗಳಲ್ಲಿ ಅತ್ಯುತ್ತಮ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ. ಈ ಮೂಲಕ ಪ್ರವಾಸಿಗರನ್ನು ಆಕರ್ಷಿಸಬಹುದು.ಸಸಿಹಿತ್ಲು ಬೀಚ್ ಕೂಡಾ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯ ಹಿನ್ನೆಲೆಯಲ್ಲಿ ಸುಂದರವಾಗಿದೆ. ರಾಜ್ಯದ ಪ್ರವಾಸೋದ್ಯಮ ಸಚಿವರು, ಕ್ರೀಡಾ ಸಚಿವರು ಹಾಗೂ ಜಿಲ್ಲಾಡಳಿತ ಆಸಕ್ತಿ ವಹಿಸಿರುವುದು ಸ್ವಾಗತಾರ್ಹ ಸಂಗತಿ ಎಂದು ಕೆಸಿಸಿಐ ಅಧ್ಯಕ್ಷ ರಾಮ್‌ಮೋಹನ್ ಪೈ ಮಾರೂರು ಅಭಿಪ್ರಾಯಿಸಿದ್ದಾರೆ.

ಅಂತಾರಾಷ್ಟ್ರೀಯ ಸರ್ಫಿಂಗ್ ಅಸೋಸಿಯೇಶನ್ ಮತ್ತು ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಈ ಸ್ಪರ್ಧೆಯನ್ನು ಕೆನರಾ ಸರ್ಫಿಂಗ್ ಆ್ಯಂಡ್ ವಾಟರ್ ಸ್ಪೋರ್ಟ್ಸ್ ಪ್ರಮೋಶನ್ ಕೌನ್ಸಿಲ್‌ನ ಸಹಭಾಗಿತ್ವದಲ್ಲಿ ಮಂತ್ರ ಸರ್ಫ್ ಕ್ಲಬ್ ಸಹಭಾಗಿತ್ವದಲ್ಲಿ ಮೂರು ದಿನಗಳ ಕಾಲ ಸ್ಪರ್ಧೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News