ಬಿಜೆಪಿಯ ಅಚ್ಚೇ ದಿನ್ ಪೊಳ್ಳು ಭರವಸೆ

Update: 2016-05-26 15:27 GMT

ಮಂಗಳೂರು, ಮೇ 27: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರದ ಅಚ್ಛೇದಿನ್ ಭರವಸೆ ಎರಡು ವರ್ಷಗಳ ಆಡಳಿತಾವಧಿಯಲ್ಲಿ ಪೊಳ್ಳು ಭರವಸೆಯಾಗಿಯೇ ಉಳಿದುಬಿಟ್ಟಿದೆ ಎಂದು ಕಾಂಗ್ರೆಸ್ ಪಕ್ಷದ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷೆ ಶೋಭಾ ಓಝಾ ಟೀಕಿಸಿದ್ದಾರೆ.

ಮಂಗಳೂರಿಗೆ ಭೇಟಿ ನೀಡಿರುವ ಅವರು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಬ್ಬರದ ಪ್ರಚಾರ ಹಾಗೂ ವಿದೇಶ ಯಾತ್ರೆಗಳಿಗೆ ತೆರಿಗೆ ಹಣವನ್ನು ಖರ್ಚು ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ಚುನಾವಣಾ ಪೂರ್ವ ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಆಪಾದಿಸಿದರು.

2 ವರ್ಷಗಳಲ್ಲಿ 100 ದಿನಗಳ ಕಾಲ ವಿದೇಶ ಪ್ರಯಾಣದಲ್ಲೇ ಕಳೆದ ನರೇಂದ್ರ ಮೋದಿ ತಮ್ಮ ವಿದೇಶ ಯಾತ್ರೆಗಾಗಿ 567 ಕೋಟಿ ರೂ.ಗಳನ್ನು ವ್ಯಯಿಸಿದ್ದಾರೆ. ಎರಡು ವರ್ಷಗಳಲ್ಲಿ ಮಹಿಳಾ ಅತ್ಯಾಚಾರ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಬಿಜೆಪಿ ಪಕ್ಷದಲ್ಲಿರುವ ರಾಜಸ್ತಾನದ ಮಂತ್ರಿಯೊಬ್ಬರ ವಿರುದ್ಧ ಅತ್ಯಾಚಾರದ ಆರೋಪವಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದರೂ, ಆತ ಮಂತ್ರಿಯಾಗಿಯೇ ಮುಂದುವರಿದ್ದಾನೆ. ಇದು ಬಿಜೆಪಿ ಮಹಿಳೆಯರಿಗೆ ನೀಡುವ ಗೌರವ ಎಂದು ಶೋಭಾ ಓಝಾ ಟೀಕಿಸಿದರು.

ವರ್ಷದಲ್ಲಿ 2 ಕೋಟಿ ಯುವಕರಿಗೆ ಉದ್ಯೋಗ ಎಂದು ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಘೋಷಣೆ ಮಾಡಿಕೊಂಡಿದ್ದರೂ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಉದ್ಯೋಗ ದೊರಕಿದ್ದು, 1.34 ಲಕ್ಷ ಮಾತ್ರ. ಇದು ಹಿಂದಿನ ವರ್ಷಗಳಲ್ಲಿ ದೊರೆಯುತ್ತಿದ್ದ ಉದ್ಯೋಗಕ್ಕಿಂತಲೂ ಕಡಿಮೆಯಾಗಿದೆ. ದೇಶದ ಶೇ. 40ರಷ್ಟು ಭಾಗ ಬರಗಾಲದಿಂದ ಕೂಡಿದ್ದರೂ, ರೈತರು ಆತ್ಮಹತ್ಯೆಯಲ್ಲಿ ತೊಡಗಿಕೊಂಡಿದ್ದರೂ ಪ್ರಧಾನಿ ಮೋದಿ ಮಾತ್ರ ಆ ಬಗ್ಗೆ ಚಿಂತಿತರಾಗಿಲ್ಲ. ಆದರೆ ಬಿಜೆಪಿ ಆಡಳಿತದಲ್ಲಿ ಅಸಹಿಷ್ಣುತೆ ತೀವ್ರಗೊಂಡಿದೆ. ವಿಶ್ವವಿದ್ಯಾನಿಲಯಗಳಲ್ಲಿ ಆರೆಸ್ಸೆಸ್- ಬಿಜೆಪಿ ಸಿದ್ಧಾಂತಗಳಿಗೆ ವಿರುದ್ದವಾಗಿರುವವರನ್ನು ಯುನಿವರ್ಸಿಟಿಗಳಲ್ಲಿ ಹತ್ತಿಕ್ಕಲಾಗುತ್ತದೆ. ಇದಕ್ಕೆ ವೇಮುಲಾ ಪ್ರಕರಣವೊಂದು ಜ್ವಲಂತ ಸಾಕ್ಷಿಯಾಗಿದೆ. ಮನೆಯಲ್ಲಿ ದನದ ಮಾಂಸ ಇರಿಸಿದ್ದಾರೆಂಬ ನೆಪದಲ್ಲಿ ಬೀದಿಯಲ್ಲಿ ಕೊಲ್ಲಲಾಗುತ್ತದೆ. ತೆರಿಗೆ ಹೆಚ್ಚಳ, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗೆಟ್ಟಿದ್ದಾರೆ. ಅಂತಾರಾಷ್ಟ್ರೀಯವಾಗಿ ಕಚ್ಚಾತೈಲ ಬೆಲೆಯಲ್ಲಿ ಇಳಿಕೆಯಾಗಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆ ಮಾಡಲಾಗಿಲ್ಲ ಎಂದು ಅವರು ದೂರಿದರು.

ಯುಪಿಎ ಸರಕಾರ ಜಾರಿಗೆ ತಂದಿದ್ದ ಅತ್ಯುತ್ತಮ ಸಾಮಾಜಿಕ ಬದ್ಧತೆಯ ಯೋಜನೆಯಾದ ಎಂ ನರೇಗಾದ ಹಣವನ್ನು ಕಡಿತಗೊಳಿಸುವ ಮೂಲಕ ಗ್ರಾಮಾಂತರ ಪ್ರದೇಶಗಳ ಜನರ ಉದ್ಯೋಗ ಭರವಸೆಯನ್ನು ಕಸಿಯಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಮಸೂದೆ (ಜಿಎಸ್‌ಟಿ) ಮಸೂದೆಯನ್ನು ಅನುಷ್ಠಾನಕ್ಕೆ ತರುವುದು ಆರ್‌ಎಸ್‌ಎಸ್‌ಗೆ ಬೇಡವಾಗಿದ್ದರಿಂದ ಕಾಂಗ್ರೆಸ್ ಮೇಲೆ ವ್ಯರ್ಥ ಆರೋಪ ಮಾಡಲಾಗುತ್ತಿದೆ ಎಂದವರು ಮೋದಿ ಸರಕಾರವನ್ನು ಟೀಕಿಸಿದರು.

ಯುಪಿಎ ಸರಕಾರವಿದ್ದಾಗ ಗಡಿಯಲ್ಲಿ ಭಾರತೀಯ ಯೋಧರ ವೀರಮರಣದ ಸಂದರ್ಭ ಭಾವನಾತ್ಮಕವಾಗಿ ಹೇಳಿಕೆ ನೀಡುತ್ತಿದ್ದ ನರೇಂದ್ರ ಮೋದಿಯವರು, ಒಬ್ಬ ಯೋಧನ ತಲೆಗೆ ಪಾಕಿಸ್ತಾನದ 10 ಯೋಧರ ತಲೆಯನ್ನು ಚೆಂಡಾಡುವುದಾಗಿ ಹೇಳಿಕೊಂಡಿದ್ದರು. ಆದರೆ ಅಧಿಕಾರಕ್ಕೆ ಬಂದ ಗಡಿಯಲ್ಲಿ ಯೋಧರ ಹತ್ಯೆ, ಸಾವಿನ ಬಗ್ಗೆ ವೌನವಾಗಿದ್ದಾರೆ. ನೇಪಾಳದ ಜತೆ ಭಾರತದ ಸಂಬಂಧ ಉತ್ತಮವಾಗಿತ್ತು. ಇದೀಗ ಮೋದಿ ಸರಕಾರ ಬಂದ ಬಲಿಕ ಅಲ್ಲಿಯೂ ಹುಳಿ ಹಿಂಡಲಾಗಿದೆ ಎಂದು ಶೋಭಾ ಓಝಾ ಆರೋಪಿಸಿದರು.

ಗೋಷ್ಠಿಯಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್, ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ದಿವ್ಯಪ್ರಭಾ, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಶಾಲೆಟ್ ಪಿಂಟೋ, ದ.ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಗಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಅಪ್ಪಿಲತಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News