ಬೆಳ್ತಂಗಡಿ: ಸಂಘಪರಿವಾರದ ಕಾರ್ಯಕರ್ತರಿಂದ ಠಾಣೆಗೆ ಮುತ್ತಿಗೆ
ಬೆಳ್ತಂಗಡಿ, ಮೇ 26: ಬಜರಂಗದಳದ ಕಾರ್ಯಕರ್ತರಾದ ಚಂದ್ರಹಾಸ ದಾಸ್ ಹಾಗು ಅಶೋಕ್ ಆಚಾರ್ಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಗುರುವಾರ ಬೆಳ್ತಂಗಡಿ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿದರು.
ಮೇ 22 ರಂದು ಸಂಜೆ ಗುರುವಾಯನಕರೆ ಸನಿಹ ಪೊಟ್ಟುಕೆರೆ ಎಂಬಲ್ಲಿ ಅಶೋಕ ಆಚಾರ್ಯ ಹಾಗೂ ಹಸೈನಾರ್‌ರ ದ್ವಿಚಕ್ರ ವಾಹನಗಳು ಪರಸ್ಪರ ಢಿಕ್ಕಿಯಾಗಿದ್ದವು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಚಂದ್ರಹಾಸ್ ಮತ್ತು ಅಶೋಕ್ ಆಚಾರ್ಯರ ಮೇಲೆ ಗುಂಪು ಹಲ್ಲೆ ನಡೆಸಿದ್ದಾಗಿ ಆರೋಪಿಸಿ ಅಲ್ಲದೆ ಚಂದ್ರಹಾಸ ಅವರ ಬಳಿ ಇದ್ದ 40 ಸಾವಿರ ಹಾಗು ಚಿನ್ನದ ಸರವನ್ನು ದರೋಡೆ ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು.
ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಹಲ್ಲೆ ನಡೆಸಿದ ಆರೋಪಿಗಳಾದ ದದ್ದು ಯಾನೆ ಅಬ್ದುರ್ರಝಾಕ್, ನಜೀರ್, ಹಸೈನಾರ್, ರಜಾಕ್ ಹಾಗೂ ಇತರ 20 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಆದರೆ ನಾಲ್ಕು ದಿನಗಳು ಕಳೆದರೂ ಆರೋಪಿಗಳನ್ನು ಬಂಧಿಸುವಲ್ಲಿ ಬೆಳ್ತಂಗಡಿ ಪೋಲಿಸರು ವಿಫಲವಾಗಿದ್ದಾರೆಂದು ಆರೋಪಿಸಿ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದರು.
ಈ ಸಂದರ್ಭ ಠಾಣೆಯ ಎಎಸ್ಸೈಗಳಾದ ಕಲೈಮಾರ್ ಹಾಗೂ ಬಾಬು ಗೌಡ, 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ರಂಜನ್ ಜಿ. ಗೌಡ, ಬಜರಂಗದಳ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ, ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ಧರ್ಮಜಾಗರಣ ಜಿಲ್ಲಾ ನಿಧಿ ಪ್ರಮುಖ್ ಹರೀಶ್ ಪೂಂಜ, ದಿನಕರ ಆದೇಲು, ಬಿಜೆಪಿ ಮುಖಂಡ ನಾರಾಯಣ ಆಚಾರ್, ವಿ.ಹಿಂ.ಪ. ಅಧ್ಯಕ್ಷ ತಾರಾನಾಥ್, ಕಾರ್ಯದರ್ಶಿ ನವೀನ್ ನೆರಿಯ, ತಾ.ಪಂ. ಸದಸ್ಯ ಸುಧೀರ್ ಸುವರ್ಣ, ಶಶಿಧರ್ ಕಲ್ಮಂಜ, ಮಾಜಿ ಸದಸ್ಯ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಜಯಂತ ಕೋಟ್ಯಾನ್, ಹರೀಶ್ ಕುಮಾರ್ ಇಂದಬೆಟ್ಟು, ಹಿಂದೂ ಜಾಗರಣ ವೇದಿಕೆಯ ಶಾಂ ಸುಂದರ ನಡ ಮತ್ತಿತರರು ಇದ್ದರು.