ಮೂಡುಬಿದಿರೆ: ಈಜು ತರಬೇತಿ ಶಿಬಿರ ಸಮಾಪನ
ಮೂಡುಬಿದಿರೆ, ಮೇ 26: ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುವ ಮೂಲಕ ಮೂಡುಬಿದಿರೆಯು ಕ್ರೀಡಾ ಕೇಂದ್ರವಾಗಿ ಬೆಳೆಯುತ್ತಿದೆ. ಇದೀಗ ಕೇವಲ ಒಂದೇ ವರ್ಷದಲ್ಲಿ ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ಗುಣಮಟ್ಟದ ಈಜುಕೊಳ ಮೂಡುಬಿದಿರೆಯಲ್ಲಿ ನಿರ್ಮಾಣವಾಗಿದ್ದು ಇದರ ನಿರ್ವಹಣೆಯನ್ನು ಡಾ.ಎಂ.ಮೋಹನ ಆಳ್ವ ಅವರ ನೇತೃತ್ವದಲ್ಲಿ ಸಮರ್ಪಕವಾಗಿ ಮಾಡಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಸಮಿತಿ ರಚನೆ ಮಾಡಲಾಗುವುದು. ಈಜುಕೊಳ ಸಹಿತ ಸ್ವರಾಜ್ಯ ಮೈದಾನದ ಸುತ್ತಮುತ್ತ ನಾಲ್ಕು ಕಡೆ ಹೊನಲು ಬೆಳಕಿನ ವ್ಯವಸ್ಥೆಗೆ 20 ಲಕ್ಷ ರೂ. ಹಾಗೂ ಈಜುಕೊಳದ ಆವರಣ, ಶೀಟ್ ಅಳವಡಿಕೆಗೆ 20 ಲಕ್ಷ ರೂ.ಗಳನ್ನು ರಾಜ್ಯ ಸರಕಾರ ಬಿಡುಗಡೆಗೊಳಿಸಿದೆ ಎಂದು ಯುವಜನಸೇವೆ, ಕ್ರೀಡೆ, ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ತಿಳಿಸಿದರು.
ಮೂಡುಬಿದಿರೆಯಲ್ಲಿರುವ ಯುವಸಬಲೀಕರಣ, ಕ್ರೀಡಾ ಇಲಾಖೆಯ ಈಜುಕೊಳದಲ್ಲಿ 10 ದಿನಗಳ ಕಾಲ ನಡೆದ ಚೊಚ್ಚಲ ಈಜು ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅತ್ಯಾಧುನಿಕ ಗುಣಮಟ್ಟದ ಸಿಂಥೆಟಿಕ್ ಟ್ರ್ಯಾಕ್ ಮೂಡುಬಿದಿರೆಯಲ್ಲಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಕರ್ನಾಟಕ ಸರಕಾರದಿಂದ ವಿಶೇಷ ಪ್ರೋತ್ಸಾಹ ನೀಡಲಾಗುವುದು. ರಾಜ್ಯ ಸರಕಾರವು ಕ್ರೀಡೆ ಅಭಿವೃದ್ಧಿಗೆ ಸೂಕ್ತ ಯೋಜನೆಗಳನ್ನು ಜಾರಿಗೊಳಿಸಿರುವುದರಿಂದ ದೇಶದಲ್ಲೇ ಕರ್ನಾಟಕವು ಕ್ರೀಡಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದೆ ಎಂದು ಹೇಳಿದ ಅವರು ಈಜುಗಾರರು ಪಾವತಿಸುವ ಶುಲ್ಕವನ್ನು ಸಂಪೂರ್ಣವಾಗಿ ಈಜುಕೊಳ ಅಭಿವೃದ್ಧಿಗೆ ವಿನಿಯೋಗಿಸಲಾಗುವುದೆಂದು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಮಾತನಾಡಿ, ಮೂಡುಬಿದಿರೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಕೊಳ ನಿರ್ಮಾಣವಾಗಿದ್ದು, ಅದನ್ನು ಸಮರ್ಪವಾಗಿ ನಿರ್ವಹಣೆ ಮಾಡುತ್ತೇವೆ ಎನ್ನುವ ನಂಬಿಕೆ ಮೂಡುಬಿದಿರೆ ಜನತೆಗಿದೆ. ಪ್ರಸಕ್ತ ವರ್ಷದಲ್ಲಿ ರಾಷ್ಟ್ರಮಟ್ಟದ ಈಜುಗಾರರನ್ನು ಮೂಡುಬಿದಿರೆಯಿಂದಲೇ ನೀಡುವ ಭರವಸೆ ವ್ಯಕ್ತಪಡಿಸಿದರು.
ಪುರಸಬಾ ಸದಸ್ಯ ಪಿ.ಕೆ ಥೋಮಸ್ ಮಾತನಾಡಿ, ಮೂಡುಬಿದಿರೆಯಲ್ಲಿ ನಿರ್ಮಾಣಗೊಂಡಿರುವ ಈಜುಕೊಳಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಕಡಿಮೆ ನೀರು ಬಳಕೆ, ಸಮರ್ಪಕ ಶುದ್ಧೀಕರಣದಂತಹ ವ್ಯವಸ್ಥೆಯಿದೆ ಎಂದರು.
ಮೂಡುಬಿದಿರೆ ಪುರಸಬಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಥಮ ತರಬೇತಿ ಶಿಬಿರದಲ್ಲಿ ಒಟ್ಟು 92 ಮಂದಿ ಅ್ಯರ್ಥಿಗಳು ಭಾಗವಹಿಸಿದ್ದು, 10 ಮಂದಿ ಕಿರಿಯ ಈಜುಗಾರರಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರ ವಿತರಿಸಲಾಯಿತು.
ಮುಖ್ಯ ತರಬೇತುದಾರ ಮಧುಕರ್ ಹಾಗೂ ಸಹತರಬೇತುದಾರ ಕಿರಣರನ್ನು ಗೌರವಿಸಲಾಯಿತು. ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.