×
Ad

ಜಲಾಲುದ್ದೀನ್ ಮುಹಮ್ಮದ್ ವೌಲಾ ಹಿಫ್ಳುಳ್ ಕುರ್‌ಆನ್ ಹಾಗೂ ಅರೆಬಿಕ್ ಕಾಲೇಜಿನ 5ನೆ ಸನದುದಾನ ಕಾರ್ಯಕ್ರಮ

Update: 2016-05-26 22:08 IST

ಮಂಗಳೂರು, ಮೇ 26: ಕೇಂದ್ರ ಜುಮಾ ಮಸೀದಿ ಝೀನತ್ ಭಕ್ಷ್‌ಗೆ ಒಳಪಟ್ಟ ಜಲಾಲುದ್ದೀನ್ ಮುಹಮ್ಮದ್ ವೌಲಾ ಹಿಫ್ಳುಳ್ ಕುರ್‌ಆನ್ ಹಾಗೂ ಅರೆಬಿಕ್ ಕಾಲೇಜಿನ 5ನೆ ಸನದುದಾನ ಕಾರ್ಯಕ್ರಮವು ಇತ್ತೀಚೆಗೆ ಝೀನತ್ ಭಕ್ಷ್ ಜುಮಾ ಮಸೀದಿಯಲ್ಲಿ ಜರಗಿತು.

ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ದುಆ ನೆರವೇರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಿಫ್ಳುಳ್ ಕುರ್‌ಆನ್ ಕಂಠಪಾಠ ಮಾಡಿ ಹಾಫಿಝ್ ಆದ 5 ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು.

ಹಿಂದಿನ ಕಾಲದಲ್ಲಿ ಒಬ್ಬ ವಿದ್ಯಾರ್ಥಿಯು ಹಾಫಿಲ್ ಆದರೆ ಆತನನ್ನು ಒಂಟೆಯಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಿ ಸನ್ಮಾನಿಸುತ್ತಿದ್ದರು. ಹಾಫಿಲ್ ಆದ ವಿದ್ಯಾರ್ಥಿಗಳ ಹೆತ್ತವರಿಗೆ ಅಲ್ಲಾಹು ಸನ್ಮಾರ್ಗವನ್ನು ಕರುಣಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ಅಲ್ಲದೆ ಕುರ್‌ಆನ್‌ನ್ನು ಪ್ರತಿದಿನವೂ ಓದುವಂತೆ ಕರೆ ನೀಡಿದರು.

ಸ್ವಾಗತ ಭಾಷಣಗೈದ ಝೀನತ್ ಭಕ್ಷ್‌ನ ಕೋಶಾಧಿಕಾರಿ ಹಾಜಿ ಎಸ್.ಎಂ. ರಶೀದ್ ಹಾಜಿ ಮಾತನಾಡಿ, ಕಾಲೇಜಿನ ಐವರು ವಿದ್ಯಾರ್ಥಿಗಳು ಹಾಫಿಲ್ ಆಗಿರುವುದು ತುಂಬಾ ಸಂತಸ ತಂದಿದೆ. ಈ ಹಿಂದೆ ಹಿಫ್ಳುಳ್ ಕುರ್‌ಆನ್ ಪೂರ್ತಿಗೊಳಿಸಿದ 9 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಗೆ ನೇರವಾಗಿ ಹಾಜರಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದುವರೆಗೆ ಕಾಲೇಜಿನಲ್ಲಿ 25 ವಿದ್ಯಾರ್ಥಿಗಳು ಕುರ್‌ಆನ್ ಕಂಠಪಾಠ ಮಾಡಿ ಪಾಸಾಗಿದ್ದಾರೆ.

2016-17ನೆ ಸಾಲಿಗೆ 15 ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲಾಗಿದೆ. ವಿದ್ಯಾರ್ಥಿಗಳ ಸಕಲ ವೆಚ್ಚಗಳನ್ನು ಮಸೀದಿಯ ವತಿಯಿಂದಲೇ ಭರಿಸಲಾಗಿದೆ ಎಂದರು.ಈ ವರ್ಷ ಹಾಫಿಲ್ ಆದ ವಿದ್ಯಾರ್ಥಿಗಳಿಗೆ ಮುಂದಿನ ವರ್ಷ ಕುರ್‌ಆನ್ ದವುರಾ ಮಾಡಿದ ಬಳಿಕ ಸರ್ಟಿಫಿಕೇಟ್ ನೀಡಲಾಗುವುದು. ಕಳೆದ ವರ್ಷ ಪಾಸಾದ ವಿದ್ಯಾರ್ಥಿಗಳು ದವುರಾ ಮಾಡಿದ್ದು, ಸರ್ಟಿಫಿಕೇಟ್‌ಗಳನ್ನು ವಿತರಿಸಲಾಗುವುದು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಝೀನತ್ ಭಕ್ಷ್ ಹಾಗೂ ಈದ್ಗಾ ಮಸೀದಿಯ ಅಧ್ಯಕ್ಷ ಹಾಜಿ ವೈ. ಅಬ್ದುಲ್ಲಾ ಕುಂಞಿ, ದ.ಕ. ಜಿಲ್ಲಾ ಖಾಝಿಯವರ ನಿರ್ದೇಶನದಂತೆ ಎಸ್.ಎಂ. ರಶೀದ್ ಹಾಜಿ ನೇತೃತ್ವದಲ್ಲಿ ಕಾಲೇಜು ಮುನ್ನಡೆಯುತ್ತಿದ್ದು, ಉತ್ತಮ ಸಾಧನೆ ಮಾಡುತ್ತಿದೆ. ಹಾಫಿಲ್ ಆದ ವಿದ್ಯಾರ್ಥಿಗಳು ಪ್ರತಿದಿನವೂ ಕುರ್‌ಆನ್‌ನ್ನು ಓದಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಎಸೆಸೆಲ್ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿ ಇಲ್ಯಾಸ್ ಕಿರಾಅತ್ ಪಠಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಜುಮಾ ಮಸೀದಿಯ ಖತೀಬ್ ವಿ.ಕೆ. ಸ್ವದಕತುಲ್ಲಾ ಪೈಝಿ, ಟ್ರಸ್ಟಿಗಳಾದ ಹಾಜಿ ಸೈಯದ್ ಅಹ್ಮದ್ ಬಾಷಾ ತಂಙಳ್, ಹಿಫ್ಳುಳ್ ಕುರ್‌ಆನ್ ಕಾಲೇಜಿನ ಅಧ್ಯಾಪಕರಾದ ಮುಹಮ್ಮದ್ ಅಮೀನ್ ಹುದವಿ, ಅಹ್ಮದ್ ಇ.ಕೆ., ಅರ್ಶದ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

ಅಧ್ಯಾಪಕ ಮುಹಮ್ಮದ್ ಅಮೀನ್ ಹುದವಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News