ವಾರದೊಳಗೆ ಅತಿಕ್ರಮಣ ತೆರವುಗೊಳಿಸದಿದ್ದರೆ ಕ್ರಿಮಿನಲ್ ಕೇಸ್:ಎಸಿ ಎಚ್ಚರಿಕೆ
ಕಡಬ, ಮೇ 26: ಕೋಡಿಂಬಾಳ ಗ್ರಾಮದ ಪನ್ಯ ಗುರಿಯಡ್ಕ ಸರಕಾರಿ ಹಿ.ಪ್ರಾ.ಶಾಲೆಗೆ ಸೇರಿದ ಜಮೀನು ಅತಿಕ್ರಮಣಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಸ್ಥಳ ತನಿಖೆ ನಡೆಸಿದ ಪುತ್ತೂರು ಸಹಾಯಕ ಕಮೀಷನರ್ ಡಾ. ರಾಜೇಂದ್ರ ಕೆ.ವಿ., ವಾರದೊಳಗೆ ಅತಿಕ್ರಮಣ ತೆರವು ಮಾಡದಿದ್ದಲ್ಲಿ ಅತಿಕ್ರಮಣ ಮಾಡಿರುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.
ಕೋಡಿಂಬಾಳ ಗ್ರಾಮದ ಪನ್ಯದಲ್ಲಿ ಸರ್ವೆ ನಂ. 196/3 ರಲ್ಲಿ ಶಾಲೆಗೆ ಸೇರಿದ 60 ಸೆಂಟ್ಸ್ ಜಾಗದಲ್ಲಿ ಸುಮಾರು 9 ಜೋಪಡಿಗಳ ನಿರ್ಮಾಣವಾಗಿ ವರ್ಷವೇ ಕಳೆದಿತ್ತು. ಸದ್ರಿ ಅತಿಕ್ರಮಣವನ್ನು ತೆರವುಗೊಳಿಸುವಂತೆ ಶಿಕ್ಷಣ ಇಲಾಖೆಯಿಂದ ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಸದ್ರಿ ಜಾಗವು ಶಾಲೆಯಿಂದ ತುಂಬಾ ದೂರದಲ್ಲಿದ್ದು, ಶಾಲೆಯವರಿಗೆ ಪ್ರಸ್ತುತ ಶಾಲಾ ಕಟ್ಟಡ ಇರುವಲ್ಲಿ ಜಾಗವಿದೆ. ಅತಿಕ್ರಮಣಗೊಂಡಿರುವ ಜಾಗವನ್ನು ನಿವೇಶನ ರಹಿತರಾಗಿರುವ ನಮಗೆ ವಿಂಗಡಿಸಿ ಕೊಡಬೇಕಾಗಿ ಶಾಲೆಗೆ ಸಂಬಂಧಿಸಿದ ಜಾಗದಲ್ಲಿ ಗುಡಿಸಲು ನಿರ್ಮಿಸಿರುವ ಜನರು ಸಹಾಯಕ ಕಮೀಶನರ್‌ಗೆ ಮನವಿ ಮಾಡಿಕೊಂಡರು.
ಅದಕ್ಕೆ ಪ್ರತಿಕ್ರಿಯಿಸಿದ ಅವರು, ಸರಕಾರಿ ಉದ್ದೇಶಕ್ಕೆ ಮೀಸಲಾಗಿರುವ ಜಮೀನನ್ನು ಯಾವುದೇ ಕಾರಣಕ್ಕೂ ಇತರರಿಗೆ ಕೊಡಲು ಸಾಧ್ಯವಿಲ್ಲ. ನಿವೇಶನ ರಹಿತರಿಗೆ ನಿವೇಶನ ನೀಡಲು ಬೇರೆಯೇ ವ್ಯವಸ್ಥೆಗಳಿವೆ. ಅದನ್ನು ಬಿಟ್ಟು ಶಾಲೆಗೆ ಸಂಬಂಧಿಸಿದ ಜಾಗದಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿದರೆ ಅದು ಕಾನೂನು ಬಾಹಿರವಾಗುತ್ತದೆ. ಶಿಕ್ಷಣ ಇಲಾಖೆಯವರು ಕೂಡ ಸದ್ರಿ ಜಮೀನು ನಮ್ಮ ಬಳಕೆಗೆ ಅಗತ್ಯವಿದೆ ಎಂದು ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ. ಎಲ್ಲೆಡೆ ಸರಕಾರಿ ಉದ್ದೇಶಕ್ಕೆ ಬಳಸಲು ಜಮೀನಿನ ಕೊರತೆ ಇರುವಾಗ ಕಾದಿರಿಸಿರುವ ಜಮೀನನ್ನು ಬಿಟ್ಟುಕೊಡಲು ಯಾವುದೇ ಇಲಾಖೆ ಒಪ್ಪದು. ಆದುದರಿಂದ ಸಂಬಂಧಪಟ್ಟವರು ಕೂಡಲೇ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಬೇಕು ಎಂದು ತಾಕೀತು ಮಾಡಿದರು.
ಸ್ಥಳದಲ್ಲಿದ್ದ ದಸಂಸ ಮುಖಂಡ ಆನಂದ ಬೆಳ್ಳಾರೆ ಮಾತನಾಡಿ, ಪನ್ಯ ಗುರಿಯಡ್ಕ ಶಾಲೆಗೆ ಬೇಕಾದಷ್ಟು ಜಮೀನು ಈಗಾಗಲೇ ಇದೆ. ಶಾಲೆಯ ಪಕ್ಕದಲ್ಲಿ ಇನ್ನಷ್ಟು ಸರಕಾರಿ ಜಮೀನು ಇದೆ. ಈ ಹಿಂದೆ ಶಾಲೆಯ ಪಕ್ಕದ ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿದವರನ್ನು ಕೂಡ ಕಂದಾಯ ಇಲಾಖೆಯವರು ತೆರವುಗೊಳಿಸಿದ್ದರು. ಪ್ರಸ್ತುತ ಶಾಲೆಗೆ ಸೇರಿದ ಜಮೀನಿನಲ್ಲಿ ನಿರ್ಮಿಸಿರುವ ಗುಡಿಸಲುಗಳನ್ನು ತೆರವುಗೊಳಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಸದ್ರಿ ನಿವೇಶನರಹಿತರಿಗೆ ಎಲ್ಲಿಯೂ ನೆಲೆ ಇಲ್ಲ. ಅವರಿಗೆ ಸರಕಾರದಿಂದ ನಿವೇಶನ ಕೊಡಿಸಬೇಕೆಂದು ಎಸಿ ಗೆ ಮನವಿ ಮಾಡಿದರು. ಈ ಕುರಿತು ಪರಿಶೀಲಿಸುವುದಾಗಿ ಎಸಿ ಭರವಸೆ ನೀಡಿದರು.
ಕಡಬ ತಹಶೀಲ್ದಾರ್ ಬಿ.ಲಿಂಗಯ್ಯ, ಕಂದಾಯ ನಿರೀಕ್ಷಕ ಕೊರಗಪ್ಪಹೆಗ್ಡೆ, ಗ್ರಾಮ ಕರಣಿಕರಾದ ನೆಬಿ ಸಾಬ್, ವಿಜೇತ್, ಸರ್ವೆಯರ್ ನವೀನ್, ಗ್ರಾಮ ಸಹಾಯಕ ರಮೇಶ್ ರಾವ್ ಹೊಸಮನೆ, ಗ್ರಾ.ಪಂ.ಸದಸ್ಯೆ ವಿಜಯಲಕ್ಷೀ ಈ ಸಂದರ್ಭದಲ್ಲಿ ಹಾಜರಿದ್ದರು.
ಸರಕಾರಿ ಇಲಾಖೆಗಳಿಗೆ ಮೀಸಲಿರಿಸಿರುವ ಜಮೀನನ್ನು ಯಾರೂ ಅತಿಕ್ರಮಣ ಮಾಡುವಂತಿಲ್ಲ. ಅತಿಕ್ರಮಣ ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಆದೇಶಿಸಲಾಗಿದೆ. ತಪ್ಪಿದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ. ಅವರಿಗೆ ಬೇರೆ ಕಡೆ ನಿವೇಶನ ನೀಡಲು ಇರುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದು.
ಡಾ. ರಾಜೇಂದ್ರ ಕೆ.ವಿ., ಸಹಾಯಕ ಕಮೀಶನರ್, ಪುತ್ತೂರು.