×
Ad

60ರ ವಯಸ್ಸಿನಲ್ಲಿ ಪಿಯುಸಿ ಪಾಸ್!

Update: 2016-05-27 12:00 IST

ಉಡುಪಿ, ಮೇ 27: ಎಸೆಸೆಲ್ಸಿ ಮುಗಿಸಿದ 16ರ ಪ್ರಾಯಕ್ಕೆ ಮದುವೆಯಾದ ರೋಹಿಣಿ ಶೆಟ್ಟಿ ಅವರು ವೈದ್ಯ ಕುಟುಂಬವನ್ನು ಮುನ್ನಡೆಸಿ, ಕಲಿಯುವ ಹಂಬಲದಿಂದ ಈ ಬಾರಿ ತನ್ನ 60ನೆ ವಯಸ್ಸಿನಲ್ಲಿ ಪಿಯುಸಿ ಪರೀಕ್ಷೆ ಬರೆದು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 


ಉಡುಪಿಯ ಕಲ್ಸಂಕದ ಸ್ನೇಹ ಟ್ಯುಟೇರಿಯಲ್ ಕಾಲೇಜು ಮೂಲಕ ಖಾಸಗಿಯಾಗಿ ಪರೀಕ್ಷೆ ಬರೆದು ಪಿಯುಸಿಯಲ್ಲಿ 338 ಅಂಕ ಗಳಿಸಿದ್ದಾರೆ. 
44 ವರ್ಷಗಳ ಹಿಂದೆ ತಂದೆ ಹೃದಯ ರೋಗಿ ಯಾಗಿದ್ದರಿಂದ ಎಸೆಸೆಲ್ಸಿ ಪರೀಕ್ಷೆ ಮುಗಿಸಿದ ತಕ್ಷಣ ಕನ್ನರ್ಪಾಡಿಯ ಡಾ. ಡಿ.ಡಿ. ಶೆಟ್ಟಿ ಅವರನ್ನು ವಿವಾಹವಾದರು. ಪುಣೆಗೆ ತೆರಳಿ ಸಂಸಾರವನ್ನು ಯಶಸ್ವಿಯಾಗಿ ಮುನ್ನಡೆಸಿದರು. 
ಪತಿ ಡಿ.ಡಿ.ಶೆಟ್ಟಿ ಪುಣೆಯ ಕೆಇಎಂ ಜಹಾಂಗೀರ್ ನರ್ಸಿಂಗ್ ಹೋಮ್ ನಲ್ಲಿ ರೆಡಿಯೋಲಜಿಸ್ಟ್, ಪುತ್ರಿ ಡಾ. ನಂದಿತಾ ಹೆಗ್ಡೆ (ಸ್ತ್ರೀ ರೋಗ ತಜ್ಞೆ) ಹಾಗೂ ಅಳಿಯ ಡಾ. ಸುಮಂತ್ ಹೆಗ್ಡೆ (ಆಯುರ್ವೇದ) ಬೆಂಗಳೂರಿನ ಮಮತಾ ನರ್ಸಿಂಗ್ ಹೋಮ್ ಮುನ್ನಡೆಸುತ್ತಿದ್ದಾರೆ. 

ಕನ್ನಡಕ್ಕಿಂತ ಆಂಗ್ಲ ಭಾಷಾ ಸಂವಹನ ಸಲೀಸಾದ ರೋಹಿಣಿ ಶೆಟ್ಟಿ (60) ಇದು ಕಾಲೇಜಿಗೆ ಹೋಗುವ, ಪಿಯುಸಿ ಮಾಡುವ ಪ್ರಾಯವಾ ? ಎನ್ನುವ ಕೊಂಕು ಮಾತುಗಳನ್ನು ಲೆಕ್ಕಿಸದೆ 'ಮಮ್ಮಿ ಡು ಇಟ್' ಎಂದ ಮಗಳ ಪ್ರೋತ್ಸಾಹದಿಂದ 2015ರಲ್ಲಿ ಸ್ನೇಹ ಟ್ಯುಟೇರಿಯಲ್ ಕಾಲೇಜ್ ಸೇರಿದರು. 
ಮನೆ ಕೆಲಸ, ತೋಟದ ಕೆಲಸದ ನಡುವೆ ಸೋಮವಾರದಿಂದ ಶುಕ್ರವಾರದ ವರೆಗೆ  ಸಂಜೆ 4 ರಿಂದ 6.30 ತನಕ ಓದುತ್ತಿದ್ದರು.  ಬಿಪಿ, ಥೈರಾಯ್ಡ್ ಸಮಸ್ಯೆಯೂ ಸಾಧನೆಯ ಹಾದಿಗೆ ತೊಡಕಾಗಲಿಲ್ಲ. 

ಶಿಕ್ಷಣ, ಕಲಿಕೆಗೆ ವಯಸ್ಸಿಗಿಂತ ಛಲ, ಇಚ್ಛಾ ಶಕ್ತಿ, ಮನಸ್ಸು ಅತೀ ಮುಖ್ಯ. ಗಟ್ಟಿ ನಿರ್ಧಾರದಿಂದ ಗುರಿಯತ್ತ ಸಾಗಬೇಕು. ಪತಿ , ಮಗಳು, ಅಳಿಯ ವೈದ್ಯರಾಗಿರುವಾಗ ನಾನೇಕೆ ಕಲಿಯಬಾರದು ಎನ್ನುವ ನೆಲೆಯಲ್ಲಿ ಪಿಯುಸಿ ಮಾಡಿದೆ. ಬಿ.ಎ. ಮಾಡಬೇಕೆನ್ನುವ ಗುರಿ ಇದೆ ಎಂದು 60ರ ಹರೆಯದ ದ್ವಿತೀಯ ಪಿಯುಸಿ ಉತ್ತೀರ್ಣರಾದ ರೋಹಿಣಿ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News