ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಏರಿಕೆ
ವಿಟ್ಲ, ಮೇ 27 : ಬಂಟ್ವಾಳ ತಾಲೂಕಿನ ಜೀವನದಿ ನೇತ್ರಾವತಿಗೆ ಅಡ್ಡಲಾಗಿ ತುಂಬೆಯಲ್ಲಿ ನಿರ್ಮಿಸಲಾಗಿರುವ ಅಣೆಕಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಇದೇ ಮೊದಲ ಬಾರಿಗೆ ಎಂಬಂತೆ ಕನಿಷ್ಠ 3.9 ಅಡಿಗೆ ಇಳಿಮುಖ ಕಂಡಿದ್ದ ನೀರಿನ ಮಟ್ಟ ಕಳೆದೆರಡು ದಿನಗಳಿಂದ ನಿಧಾನಕ್ಕೆ ಏರಿಕೆಯಾಗತೊಡಗಿದ್ದು, ಅಧಿಕಾರಿ ವರ್ಗ ಹಾಗೂ ಸಾರ್ವಜನಿಕ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ.
ಕಳೆದ ವಾರ ಜಿಲ್ಲೆಯ ವಿವಿಧೆಡೆ ಮುಂಗಾರು ಪೂರ್ವ ಮಳೆ ಸುರಿದ ಪರಿಣಾಮ ಹಾಗೂ ದಿಶಾ ಮತ್ತು ನೆಕ್ಕಿಲಾಡಿ ಕಿರು ಜಲವಿದ್ಯುತ್ ಘಟಕದಿಂದಲೂ ನೀರನ್ನು ಹರಿಯ ಬಿಟ್ಟದ್ದರಿಂದಾಗಿ ನೀರಿನ ಒಳ ಹರಿವು ಹೆಚ್ಚಾಗಿದೆ ಎನ್ನಲಾಗಿದೆ.
ಕಳೆದ ಬೇಸಿಗೆಯಿಂದ ದಿನದಿಂದ ದಿನಕ್ಕೆ ಇಲ್ಲಿನ ಅಣೆಕಟ್ಟುವಿನಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾದುದರಿಂದ ಮಂಗಳೂರು ಮಹಾನಗರಕ್ಕೆ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುವ ಪರಿಸ್ಥಿತಿ ಒದಗಿ ಬಂದಿತ್ತು. ಇದೀಗ ಬುಧವಾರ ಸಂಜೆಯ ವೇಳೆಗೆ ನೀರಿನ ಮಟ್ಟ 8.5 ಅಡಿಗೆ ಏರಿಕೆ ಕಂಡಿರುವುದು ಮಂಗಳೂರು ಮಹಾನಗರ ಪಾಲಿಕೆ ಮತ್ತು ಇಲ್ಲಿನ ಪಂಪ್‌ಹೌಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಈ ಬಾರಿ ಏಪ್ರಿಲ್ ತಿಂಗಳ ಕೊನೆಗೆ ಮತ್ತು ಮೇ ತಿಂಗಳ ಆರಂಭದಲ್ಲಿ ಮಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದಂತೆ ಇಲ್ಲಿನ ಸಿಬ್ಬಂದಿ ನದಿಯುದ್ದಕ್ಕೂ ಬಂಡೆ ಕಲ್ಲುಗಳಂತಹ ನದಿಯಲ್ಲಿರುವ ಅಡತೆಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡುತ್ತಿದ್ದರಲ್ಲದೆ ಶಂಭೂರು ಎಎಂಆರ್, ಸರಪಾಡಿ ಎಂಆರ್‌ಪಿಎಲ್ ಘಟಕಗಳು ನೀರು ಮೇಲೆತ್ತದಂತೆ ಹದ್ದಿಗಣ್ಣಿಟ್ಟು ಕಾಯುತ್ತಿದ್ದರು.
ಕಳೆದ ವರ್ಷ ಮೇ ತಿಂಗಳಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆಗೆ ಇಲ್ಲಿನ ಅಣೆಕಟ್ಟು ಬಳಿಕ ಕೃತಕ ರಸ್ತೆ ಸಹಿತ ಪಂಪ್ ಮೊದಲಾದ ಪರಿಕರಗಳು ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿತ್ತು. ಈ ಬಾರಿ ಇಲ್ಲಿನ ಎತ್ತರಿಸಿದ ಅಣೆಕಟ್ಟಿನ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜುಗೊಂಡಿದೆ. ಕಳೆದ 2009ರಲ್ಲಿ ಏಳು ಮೀಟರ್ ಎತ್ತರದ ಎರಡನೇ ಅಣೆಕಟ್ಟು ನಿರ್ಮಾಣ ಕಾಮಗಾರಿ ಆರಂಭಗೊಳ್ಳುವ ವೇಳೆ ತಾಲೂಕಿನ ಕಳ್ಳಿಗೆ, ಬಿ ಮೂಡ, ನರಿಕೊಂಬು, ಪಾಣೆಮಂಗಳೂರು, ಸಜಿಪಮುನ್ನೂರು ಗ್ರಾಮಗಳಲ್ಲಿ 10.34 ಎಕರೆ ಸರಕಾರಿ ಹಾಗೂ 18.53 ಎಕರೆ ಖಾಸಗಿ ಜಮೀನು ಮುಳುಗಡೆಯಾಗುತ್ತದೆ ಎಂಬ ಮಾಹಿತಿ ಅಧಿಕಾರಿಗಳಿಂದ ದೊರೆತಿತ್ತು. ಆದರೆ ಮುಳುಗಡೆ ಭೀತಿ ಎದುರಿಸುತ್ತಿದ್ದ ಕೃಷಿಕರು ಹೋರಾಟಕ್ಕೆ ಮುಂದಾಗುತ್ತಿದ್ದಂತೆಯೇ ಒಟ್ಟು 250 ಎಕ್ರೆಗೂ ಹೆಚ್ಚಿನ ಕೃಷಿ ಜಮೀನು ಮುಳುಗಡೆಯಾಗುತ್ತಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಈ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ಮತ್ತು ಪರಿಹಾರ ನೀಡಿಲ್ಲ ಎಂಬ ಕಾರಣಕ್ಕಾಗಿ ಎರಡೆರಡು ಬಾರಿ ಸ್ಥಗಿತಗೊಂಡಿದ್ದ ಮುಳುಗಡೆ ಜಮೀನು ಸರ್ವೆ ಕಾರ್ಯ ಮತ್ತೆ ಕಳ್ಳಿಗೆ ಗ್ರಾಮದಲ್ಲಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.