ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ 7 ಅಡಿಗೆ ಇಳಿಕೆಯಾದಲ್ಲಿ ಕೈಗಾರಿಕೆಗಳಿಗೆ ಮತ್ತೆ ಸ್ಥಗಿತ: ಮೇಯರ್

Update: 2016-05-27 11:32 GMT

ಮಂಗಳೂರು, ಮೇ 27: ಕಳೆದ ಕೆಲವು ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿರುವುದರಿಂದ ತುಂಬೆ ಅಣೆಕಟ್ಟಿಗೆ ನೀರಿನ ಒಳ ಹರಿವು ಬಂದಿರುವುದರಿಂದ ಶುಕ್ರವಾರ ನೀರಿನ ಮಟ್ಟ 9.5 ಅಡಿಗಳಿಗೆ ಏರಿಕೆಯಾಗಿದೆ. ಒಂದು ವೇಳೆ ನೀರಿನ ಮಟ್ಟ ಮತ್ತೆ ಇಳಿಕೆಯಾಗಿ 7 ಅಡಿಗಳಿಗೆ ತಲುಪಿದಲ್ಲಿ ಮತ್ತೆ ಕೈಗಾರಿಕೆಗಳಿಗೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸುವುದು ಅನಿರ್ವಾಯವಾಗಲಿದೆ ಎಂದು ಮೇಯರ್ ಹರಿನಾಥ್ ತಿಳಿಸಿದ್ದಾರೆ.

ಶಾಸಕರಾದ ಜೆ.ಆರ್. ಲೋಬೊ ಹಾಗೂ ಮೊಯ್ದಿನ್ ಬಾವ ಸೇರಿದಂತೆ ಮನಪಾ ಸದಸ್ಯರು ಅಧಿಕಾರಿಗಳ ಜೊತೆ ತುಂಬೆ ಅಣೆಕಟ್ಟಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಳೆದ ಕೆಲವು ದಿನಗಳಿಂದ ನೀರಿನ ಕೊರತೆಯಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗಿ ಬಂದಿದ್ದು, ಪ್ರತಿದಿನ ತುಂಬೆ ಅಣೆಕಟ್ಟಿಗೆ ಬಂದು ನೀರಿನ ಪರಿಸ್ಥಿತಿ ಕಂಡು ಕಣ್ಣೀರು ಹಾಕಿದ ಘಟನೆಯೂ ನಡೆದಿದೆ. ಇದೀಗ ನೀರಿನ ಮಟ್ಟ ಏರಿಕೆಯಾಗಿರುವ ನಡುವೆಯೇ ಜಿಲ್ಲಾಧಿಕಾರಿಯವರು ಕೈಗಾರಿಕೆಗಳಿಗೆ ನೀರು ಬಿಡಲು ಆದೇಶಿಸಿರುವುದನ್ನು ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ. ನೀರಿನ ಕೊರತೆ ಸಂದರ್ಭ ಅಧಿಕಾರಿಗಳು ಹಾಗೂ ಮನಪಾ ಸದಸ್ಯರ ಸಹಕಾರದಲ್ಲಿ ಮನಪಾ ವ್ಯಾಪ್ತಿಯ ಜನರಿಗೆ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಶ್ರಮಿಸಲಾಗಿತ್ತು. ಸಾರ್ವಜನಿಕರೂ ಸಹಕರಿಸಿದ್ದು, ಇದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.

ಪ್ರಸ್ತುತ ದಿನಂಪ್ರತಿ ತುಂಬೆಯಿಂದ ಮನಪಾ ವಾರ್ಡ್‌ಗಳಿಗೆ ನೀರು ಪೂರೈಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದರು. ಕುಡಿಯುವ ನೀರಿನ ಕೊರತೆ ಹಿನ್ನೆಲೆಯಲ್ಲಿ ಕುದುರೆಮುಖದ ಲಕ್ಯಾ ಅಣೆಕಟ್ಟಿನಿಂದ ಅರ್ಧ ಎಂಜಿಡಿ ನೀರು ಪೂರೈಕೆಯಾಗುತ್ತಿದೆ. ಸುರತ್ಕಲ್ ಪ್ರದೇಶಕೆ ಕುದುರೆಮುಖದಿಂದ 5 ಎಂಜಿಡಿ ನೀರು ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದರು.

 ಕುದುರೆಮುಖದಿಂದ ನೀರು ಪಡೆಯಲು ಮೇ 31ರವರೆಗೆ ಅನುಮತಿ ದೊರೆತಿದೆ. ಇದರ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು. ಲಕ್ಯಾ ಡ್ಯಾಂನಲ್ಲಿ ಶುದ್ಧವಾದ ನೀರಿದೆ. ಮಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಲಕ್ಯಾದಿಂದ ನೀರು ಪೂರೈಕೆಗೆ ಅನುಮತಿ ನೀಡುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಲಾಗುವುದು. ಕೈಗಾರಿಕೆಗಳು ತಮ್ಮದೇ ಆದ ಹೊಸ ನೀರಿನ ಮೂಲ ಹುಡುಕಿಕೊಳ್ಳಬೇಕು ಎಂದರು.

ನಗರದಲ್ಲಿ ಮಳೆ ಕೊಯ್ಲು ಕಡ್ಡಾಯ

ನಗರದಲ್ಲಿ ಇನ್ನುಮುಂದೆ ಕೊಳವೆ ಬಾವಿ ಕೊರೆಯುವುದಕ್ಕೆ ಅವಕಾಶ ನೀಡುವುದಿಲ್ಲ. ಬದಲಾಗಿ ಇರುವ ಬೋರ್‌ವೆಲ್‌ಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು. ಗುಜ್ಜರಕೆರೆಗೆ ಚರಂಡಿ ನೀರು ಸೋರಿಕೆ ತಡೆಗಟ್ಟಲಾಗುವುದು. ಬೈರಾಡಿ ಕೆರೆ ಶುದ್ಧೀಕರಣ ಪ್ರಕ್ರಿಯೆ ನಡೆಯುತ್ತಿದೆ. ಕಾವೂರು ಕೆರೆ ಸೇರಿದಂತೆ ನಗರದ ಇತರ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು. ನಗರದ ಬಾವಿಗಳನ್ನು ಶುಚಿಗೊಳಿಸಲಾಗುವುದು. ನಗರ ಯೋಜನಾ ವಿಭಾಗದ ಮೂಲಕ ಮಳೆ ಕೊಯ್ಲು ಕಡ್ಡಾಯಗೊಳಿಸಲಾಗುವುದು ಎಂದು ಶಾಸಕ ಲೋಬೊ ಹೇಳಿದರು.

ಅಮೃತ್ ಯೋಜನೆ ಮತ್ತು ಎಡಿಬಿ ಎರಡನೆ ಹಂತದ ಯೋಜನೆಯಲ್ಲಿ ನಗರದ ಒಳಚರಂಡಿ ವ್ಯವಸ್ಥೆಯನ್ನು ಸಮಗ್ರವಾಗಿ ಪುನರ್‌ನಿರ್ಮಾಣ ಮಾಡಲಾಗುವುದು. ಜಪ್ಪಿನಮೊಗರು ಸೇರಿದಂತೆ ತ್ಯಾಜ್ಯ ಸಂಸ್ಕರಣಾ ಘಟಕಗಳಿಂದ ಪಡೆದ ನೀರನ್ನು ಕೈಗಾರಿಕೆಗಳಿಗೆ ಬಳಸಲಾಗುವುದು ಎಂದವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮನಪಾ ಸಚೇತಕ ಶಶಿಧರ ಹೆಗ್ಡೆ, ಕಾರ್ಪೊರೇಟರ್‌ಗಳಾದ ಮಹಾಬಲ ಮಾರ್ಲ, ಲ್ಯಾನ್ಸ್‌ಲೋಟ್ ಪಿಂಟೊ, ಪ್ರಕಾಶ್ ಸಾಲಿಯಾನ್, ಅಪ್ಪಿ, ನವೀನ್ ಡಿಸೋಜ, ಎ.ಸಿ. ವಿನಯರಾಜ್, ಮನಪಾ ಆಯುಕ್ತ ಡಾ. ಎಚ್.ಎನ್. ಗೋಪಾಲಕೃಷ್ಣ, ಎಇಇಗಳಾದ ಲಿಂಗೇಗೌಡ, ನರೇಶ್ ಶೆಣೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News