×
Ad

ತಂತ್ರಿಗಳಿಗೆ ನೋಟಿಸ್ ಪ್ರಕರಣ: ನೋಟಿಸ್ ಹಿಂಪಡೆಯಲು, ಬಹಿರಂಗ ಕ್ಷಮೆಯಾಚಿಸಲು ಆಗ್ರಹ

Update: 2016-05-27 18:20 IST

ಪುತ್ತೂರು, ಮೇ 27: ಪುತ್ತೂರಿನ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ತಂತ್ರಿಗಳಾಗಿರುವ ಕುಂಟಾರು ರವೀಶ ತಂತ್ರಿ ಅವರನ್ನು ತಂತ್ರಿ ಹುದ್ದೆಯಿಂದ ವಜಾಗೊಳಿಸುವ ಕುತಂತ್ರ ನಡೆದಿದ್ದು, ತಂತ್ರಿ ಅವರಿಗೆ ಶೋಕಾಸು ನೋಟಿಸ್ ನೀಡಿರುವ ದೇವಾಲಯದ ಆಡಳಿತಾಧಿಕಾರಿಯನ್ನು ತಕ್ಷಣವೇ ಅಮಾನತಿನಲ್ಲಿರಿಸಿ ಇಲಾಖಾ ತನಿಖೆಗೆ ಆದೇಶಿಸಬೇಕು. ತಂತ್ರಿ ಅವರನ್ನು ಅವಮಾನಿಸಿದ್ದಕ್ಕಾಗಿ ತಕ್ಷಣ ಅವರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು, ಜೊತೆಗೆ ಶೋಕಾಸ್ ನೋಟಿಸನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಪುತ್ತೂರಿನ ಹಾರಾಡಿಯ ರಾಮಕೃಷ್ಣ ನಿಲಯದ ಆರ್.ಕೆ. ಪಾಂಗಣ್ಣಾಯ ಎಂಬವರು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ಇಲಾಖೆಯ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ದೇವಾಲಯದ ಸಮಸ್ತ ಭಕ್ತಾಧಿಗಳ ಪರವಾಗಿ ಸಲ್ಲಿಸಿರುವ ಈ ದೂರಿಗೆ ಸಂಬಂಧಿಸಿ ತೆಗೆದುಕೊಂಡಿರುವ ಕ್ರಮಗಳ ಕುರಿತು ತಕ್ಷಣ ಹಿಂಬರಹ ನೀಡದಿದ್ದಲ್ಲಿ ಈ ಕುರಿತು ಸಮಗ್ರ ತನಿಖೆ ನಡೆಸಲು ಭ್ರಷ್ಟಾಚಾರ ನಿಗ್ರಹದಳ, ಲೋಕಾಯುಕ್ತ ಹಾಗೂ ಸಂಬಂಧಪಟ್ಟ ನ್ಯಾಯಾಲಯಗಳಲ್ಲಿ ದೂರು ದಾಖಲಿಸಲಾಗುವುದು. ಇದಕ್ಕೆ ಸಂಬಂಧಪಟ್ಟ ಎಲ್ಲಾ ಖರ್ಚುಗಳನ್ನು ಧಾರ್ಮಿಕ ದತ್ತಿ ಇಲಾಖೆಯಿಂದಲೇ ವಸೂಲು ಮಾಡಲಾಗುವುದು ಎಂದು ಎಚ್ಚರಿಸಿರುವ ಅವರು ಈ ತಂತ್ರಿಗಳಿಗೆ ಶೋಕಾಸು ನೋಟಿಸು ನೀಡಿರುವ ವಿಚಾರದಲ್ಲಿ ನಡೆಯಬಹುದಾದ ಪ್ರತಿಭಟನೆ, ಹಾಗೂ ಇತರ ಎಲ್ಲಾ ನಷ್ಟಗಳಿಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯೇ ಜವಾಬ್ದಾರಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೇವಾಲಯದ ಆಡಳಿತ ಮಂಡಳಿಯವರು ದೇವಾಲಯದ ತಂತ್ರ ವಿಭಾಗವನ್ನು ನಡೆಸುವಂತೆ ಕುಂಟಾರು ರವೀಶ ತಂತ್ರಿ ಅವರ ಮನೆ ಬಾಗಿಲಿಗೆ ಹೋಗಿ ವಿನಂತಿಸಿಕೊಂಡಿರುವ ಮೇರೆಗೆ ಅವರು ದೇವಾಲಯದ ತಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಹೊರತು ಅವರಾಗಿ ಬಂದು ತಂತ್ರ ನಿರ್ವಹಿಸಲು ಅವಕಾಶ ನೀಡಬೇಕೆಂದು ಅರ್ಜಿ ನೀಡಿ ಸೇರಿಕೊಂಡಿಲ್ಲ. ಅವರು ದೇವಾಲಯದ ಸಂಬಳ ಪಡೆಯುವ ನೌಕರನೂ ಅಲ್ಲ, ಹಾಗೊಂದು ವೇಳೆ ತಂತ್ರಿಗಳು ರಾಜಕೀಯ ಪ್ರವೇಶ ಮಾಡಿ ಶಾಸಕ ಅ್ಯರ್ಥಿ ಸ್ಥಾನಕ್ಕೆ ಉಮೇದ್ವಾರರಾಗಿ ಸ್ಪರ್ಧಿಸಬಾರದು ಎಂದು ಕಾನೂನು ಇದ್ದಲ್ಲಿ ದೂರು ನೀಡಿದ ವ್ಯಕ್ತಿಯು ಚುನಾವಣಾ ಆಯೋಗಕ್ಕೆ ದೂರು ನೀಡಬೇಕಿತ್ತು.

ಈ ದೂರು ದುರುದ್ದೇಶದಿಂದ ಕೂಡಿದ್ದಾಗಿದ್ದು, ದೂರು ಸ್ವೀಕರಿಸಿದ ಆಡಳಿತಾಧಿಕಾರಿ ಅರ್ಜಿಯ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆದು ಅವರ ನಿರ್ದೇಶನದಂತೆ ಕ್ರಮಕೈಗೊಳ್ಳಬೇಕಿತ್ತು ಎಂದು ದೂರಿನಲ್ಲಿ ತಿಳಿಸಿರುವ ಪಾಂಗಣ್ಣಾಯ ಅವರು ಆಡಳಿತಾಧಿಕಾರಿಯವರು ಅಭಿಪ್ರಾಯ ಪಡೆಯದೆ ರವೀಶ ತಂತ್ರಿಗಳಿಗೆ ಶೋಕಾಸು ನೋಟೀಸು ನೀಡಿ ಅವಮಾನಿಸುವ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ದೇವಾಲಯದ ತಂತ್ರಿಗಳ ಹುದ್ದೆಯಿಂದ ರವೀಶ ತಂತ್ರಿಯವರನ್ನು ಹೊರಗಿಟ್ಟು, ಆಡಳಿತಾಧಿಕಾರಿಗೆ ಸಂಬಂಧಪಟ್ಟ ಯಾರನ್ನೋ ಆ ಹುದ್ದೆಗೆ ನೇಮಿಸಿಕೊಳ್ಳುವ ದುರುದ್ದೇಶದಿಂದ ಈ ಕುತಂತ್ರ ನಡೆಸಲಾಗಿದೆ ಎಂದು ಆರೋಪಿಸಿರುವ ಅವರು ಈ ನೀತಿಯನ್ನು ವಿರೋಧಿಸಿ ಪ್ರತಿಭಟಿಸುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News