×
Ad

ಟೌನ್‌ಹಾಲ್‌ನ ಗೇಟ್‌ವಾಲ್‌ನಿಂದ ನೀರು ಪೋಲು: ಜನರ ಆಕ್ರೋಶ

Update: 2016-05-27 18:31 IST

ಮಂಗಳೂರು, ಮೇ 27: ಜಿಲ್ಲೆಯಲ್ಲಿ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆಗೆ ಇನ್ನೂ ಮುಂದುವರಿದಿರುವಾಗಲೇ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಇಂದು ಟೌನ್‌ಹಾಲ್‌ನ ಕಾಂಪೌಂಡ್ ಒಳಗಿನ ಗೇಟ್‌ವಾಲ್‌ನಿಂದ ಸುಮಾರು 7 ತಾಸುಗಳ ಕಾಲ ನೀರು ಪೋಲಾಗಿರುವ ಘಟನೆ ನಡೆದಿದೆ.ಇದನ್ನರಿತ ಪೋರ್ಟ್ ವಾರ್ಡ್ 45ರ ಕಂದುಕ ಪ್ರದೇಶದ ನಿವಾಸಿಗಳು ಟೌನ್‌ಹಾಲ್‌ಗೆ ಬಂದು ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕಳೆದ ಡಿಸೆಂಬರ್‌ನಿಂದ ಕಂದುಕ ಪ್ರದೇಶದ ನಿವಾಸಿಗಳು ನೀರಿನ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಈವರೆಗೂ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ನಗರದಲ್ಲಿ ಕುಡಿಯುವ ನೀರಿನ ಕೊರತೆ ಇರುವಾಗ ಟೌನ್‌ಹಾಲ್‌ನ ಪಂಪ್‌ಹೌಸ್‌ನಿಂದ ಬೆಳಗ್ಗೆ 11 ಗಂಟೆಯಿಂದ ಸಂಜೆಯವರೆಗೆ ನೀರು ಪೋಲು ಆಗುತ್ತಿರುವ ಬಗ್ಗೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ನಿವಾಸಿ ಸತೀಶ್ ಕಂದುಕ ಮಾತನಾಡಿ, ಕಳೆದ ಕೆಲವು ತಿಂಗಳುಗಳಿಂದ ನಮಗೆ 3ರಿಂದ ನಾಲ್ಕು ಕೊಡ ಕುಡಿಯುವ ನೀರು ಸಿಗುತ್ತಿದೆ. ಅದರಲ್ಲೂ ಕಳೆದ ನಾಲ್ಕು ದಿನಗಳಿಂದ ನೀರಿನ ಪೂರೈಕೆಯಾಗದೆ ಕಂಗಾಲಾಗಿರುವ ಕಂದುಕ ಪ್ರದೇಶದ ಜನರು ಗುರುವಾರ ಬೆಳಗ್ಗೆ ಟೌನ್‌ಹಾಲ್‌ನ ಪಂಪ್‌ಗೆ ಬಂದು ನಮ್ಮ ಪ್ರದೇಶಕ್ಕೆ ನೀರು ಪೂರೈಕೆಯಾಗದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದೆವು. ಈ ಬಗ್ಗೆ ರಾತ್ರಿ 10 ಗಂಟೆಯವರೆಗೂ ಟೌನ್‌ಹಾಲ್ ಕಾಂಪೌಂಡ್‌ನಲ್ಲಿದ್ದು, ಸಂಬಂಧಪಟ್ಟವರನ್ನು ಸಂಪರ್ಕಿಸಿ ಸಮರ್ಪಕ ನೀರು ಪೂರೈಕೆಗೆ ಒತ್ತಾಯಿಸಿದ್ದೆವು. ಈ ಒತ್ತಾಯಕ್ಕೆ ಮಣಿದು ಗೇಟ್‌ವಾಲ್‌ನ ಸಿಬ್ಬಂದಿ ರಾತ್ರಿ ಸುಮಾರು 2 ಗಂಟೆ ಹೊತ್ತಿಗೆ ನೀರು ಬಿಟ್ಟಿದ್ದಾರೆ. ಅದು ಕೂಡ ಕೇವಲ ಅರ್ಧ ಗಂಟೆಯಲ್ಲೇ ನೀರು ಸ್ಥಗಿತಗೊಂಡಿದೆ. ರಾತ್ರಿ ನೀರು ಪೂರೈಕೆ ಮಾಡಿದರೆ ಯಾರಿಗೆ ಉಪಯೋಗಕ್ಕೆ ಬರುತ್ತದೆ ಎಂದವರು ಪ್ರಶ್ನಿಸಿದ್ದಾರೆ.

ಕಂದುಕ ಪ್ರದೇಶದ ಜನರು ಕುಡಿಯುವ ನೀರಿಗಾಗಿ ಅನುಭವಿಸುತ್ತಿರುವ ಬವಣೆಯ ಬಗ್ಗೆ ಯಾರೂ ಗಮನ ಹರಿಸಿಲ್ಲ. ಮೀನು ಮಾರುಕಟ್ಟೆ ಬಳಿ ಇರುವ ಸುಮಾರು 50 ಚಿಕ್ಕ ಪುಟ್ಟ ಹೋಟೆಲ್‌ಗಳಿಗೆ ಹಣಕ್ಕಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ನಮ್ಮ ಪ್ರದೇಶವನ್ನು ಕಡೆಗಣಿಸಿದ್ದಾರೆ ಎಂದು ಸತೀಶ್ ಆರೋಪ ಮಾಡಿದರು.

ಟೌನ್‌ಹಾಲ್‌ನ ಪಂಪ್‌ಗೆ ದಿನ ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಲಾಗಿದೆ. ಆದರೆ ಇಲ್ಲಿ ಬೆಳಗ್ಗೆ ಸುಮಾರು 11 ಗಂಟೆಯಿಂದ ನೀರು ಪೋಲು ಆಗುತ್ತಲೇ ಇದೆ. ಈ ವರೆಗೂ ಯಾವ ಸಿಬ್ಬಂದಿಯೂ ಇಲ್ಲಿ ಬಂದು ಗೇಟ್‌ವಾಲ್‌ನ್ನು ಬಂದ್ ಮಾಡಿಲ್ಲ. ನಗರದಲ್ಲಿ ನೀರಿನ ಸಮಸ್ಯೆಯು ತೀವ್ರವಾಗಿ ಕಾಡುತ್ತಿರುವ ಈ ಅವಧಿಯಲ್ಲಿ ಹೀಗೆ ನೀರು ಪೋಲಾದರೆ ಯಾರು ಹೊಣೆಗಾರರು. ಇಂತಹ ಕನಿಷ್ಠ ಜ್ಞಾನ ಇಲ್ಲದ ಸಿಬ್ಬಂದಿಗೆ ಯಾಕೆ ಈ ಜವಾಬ್ದಾರಿ ನೀಡಬೇಕು ಎಂದವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News