×
Ad

ಮೂಡುಬಿದಿರೆ: ಭಜರಂಗದಳದ ಕಾರ್ಯಕರ್ತ ಸಮಿತ್‌ರಾಜ್ ಬಂಧನ

Update: 2016-05-27 18:58 IST

ಮೂಡುಬಿದಿರೆ, ಮೇ 27: ಮೇ 18ರಂದು ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಬಳಿ ವ್ಯಕ್ತಿಯೊಬ್ಬರ ಕೊಲೆ ಯತ್ನಕ್ಕೆ ಸಂಚು ರೂಪಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಜರಂಗದಳದ ಕಾರ್ಯಕರ್ತ ಸಮಿತ್‌ರಾಜ್ ದರೆಗುಡ್ಡೆ ಎಂಬಾತನನ್ನು ಮೂಡುಬಿದಿರೆ ಪೊಲೀಸರು ಧರೆಗುಡ್ಡೆಯಲ್ಲಿ ಬಂಧಿಸಿದ್ದಾರೆ.

ಸ್ವರಾಜ್ಯ ಮೈದಾನದಲ್ಲಿ ಕೊಲೆಗೆ ಸಂಚು ರೂಪಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್‌ಸ್ಪೆಕ್ಟರ್ ವೆಲೈಂಟೆನ್ ಡಿಸೋಜ ನೇತೃತ್ವದ ತಂಡ ಕುಂಜತ್ತಬೈಲಿನ ನಟರಾಜ್ (25), ರವಿರಾಜ್ (29) ಹಾಗೂ ಕಾವೂರಿನ ಸುಬಾಸ್ ಎಂಬವರನ್ನು ಬಂಧಿಸಿದ್ದರು. ಈ ಸಂದರ್ಭ ಆರೋಪಿಗಳ ಬಳಿಯಿದ್ದ ಮಾರುತಿ ಓಮ್ನಿ, 2 ತಲವಾರು, ಡ್ರ್ಯಾಗರನ್ನು ಪೊಲೀಸರು ವಶಪಡಿಸಿದ್ದರು.

ವಿಚಾರಣೆ ನಡೆಸಿದಾಗ ಮೈಸೂರಿನ ಜೈಲಿನಲ್ಲಿರುವ ಪಡುಮಾರ್ನಾಡಿನ ನಿವಾಸಿ ಬಾಂಬೆ ಕಿರಣ್ ಶೆಟ್ಟಿ ಸೂಚನೆಯಂತೆ ಮೂಡುಬಿದಿರೆಯಲ್ಲಿ ವ್ಯಕ್ತಿಯೊಬ್ಬರ ಕೊಲೆಗೆ ಸಂಚು ರೂಪಿಸಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದರು.

ವಶಪಡಿಸಿಕೊಂಡ ಕಾರು ಸಮಿತ್‌ರಾಜ್‌ಗೆ ಸೇರಿದ್ದು ಪ್ರಕರಣದ ಬಳಿಕ ಈತ ನಾಪತ್ತೆಯಾಗಿದ್ದ. ತನ್ನ ಕಾರನ್ನು ಸುಜಿತ್ ಶೆಟ್ಟಿಗೆ ಬಾಡಿಗೆಗೆ ನೀಡಿರುವುದಾಗಿ ಸಮಿತ್‌ರಾಜ್ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಸುಜಿತ್ ಶೆಟ್ಟಿ ತಲೆಮರೆಸಿಕೊಂಡಿದ್ದಾನೆ.

ಸಮಿತ್‌ರಾಜ್ ಈ ಹಿಂದೆ ಮೂಡುಬಿದಿರೆಯಲ್ಲಿ ನಡೆದ ಪ್ರಶಾಂತ್ ಪೂಜಾರಿ ಹತ್ಯೆ ಸಂದಭರ್ ನಡೆದ ಗಲಭೆ, ಇತ್ತೀಚಿಗೆ ಮೀನು ಮಾರಾಟದ ವಿಷಯದಲ್ಲಿ ನಡೆದ ಗಲಾಟೆಯಲ್ಲಿ ಹಾಗೂ ಗಂಟಾಲ್‌ಕಟ್ಟೆ ದನಸಾಗಾಟಗಾರರೊಂದಿಗೆ ನಡೆದ ಹಲ್ಲೆ ಪ್ರಕರಣಗಳಲ್ಲೂ ಆರೋಪಿಯಾಗಿದ್ದಾನೆ.


  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News