ತೊಕ್ಕೊಟ್ಟಿನ ಆಟೊ ಚಾಲಕ ಕಬೀರ್‌ರ ಕಾಳಜಿಯಿಂದಾಗಿ ಮರಳಿ ಮನೆ ಸೇರಿದ ವೃದ್ಧರು
ಉಳ್ಳಾಲ, ಮೇ 27: ಒಂದೂವರೆ ವರ್ಷದಿಂದ ಮನೆ ಬಿಟ್ಟು ಊರೂರು ತಿರುಗಾಡುತ್ತಿದ್ದ ವಯೋವೃದ್ಧರೋರ್ವರು ತೊಕ್ಕೊಟ್ಟು ಆಟೋರಿಕ್ಷಾ ಚಾಲಕರ ಮಾನವೀಯ ಸಹಕಾರದೊಂದಿಗೆ ಮರಳಿ ಮನೆ ಸೇರುವಂತಾಗಿದೆ.
ಕೇರಳ ರಾಜ್ಯದ ಕ್ಯಾಲಿಕಟ್ ಕುಟ್ಟಿಕಾಟೂರು ನಿವಾಸಿ ಮೊಯ್ದೀನ್ (66) ಎಂಬವರು ಒಂದೂವರೆ ವರ್ಷದ ಹಿಂದೆ ಮನೆ ಬಿಟ್ಟು ಬಂದಿದ್ದರು. ಕಳೆದ ಏಳು ತಿಂಗಳುಗಳಿಂದ ತೊಕ್ಕೊಟ್ಟಿನಲ್ಲಿ ಕೊಳಕು ಬಟ್ಟೆ ಧರಿಸಿ ಭಿಕ್ಷೆ ಬೇಡಿ ಮದ್ಯಪಾನ ಮಾಡುತ್ತಾ ತಿರುಗಾಡುತ್ತಿದ್ದುದನ್ನು ಒಳಪೇಟೆಯ ಆಟೋ ಚಾಲಕರು ಗಮನಿಸಿದ್ದರು.
ಅವರ ಮೇಲೆ ಕಣ್ಣಿಟ್ಟು ಸ್ನೇಹ ಸಂಪಾದಿಸಿದ ಚಾಲಕರು ಅನ್ನ ನೀಡುತ್ತಾ ಒಂದು ವಾರದಿಂದ ಮನೆ ವಿಳಾಸ ತಿಳಿಸುವಂತೆ ಬೆನ್ನು ಬಿದ್ದಿದ್ದರು. ಇದೇ ವೇಳೆ ವ್ಯಕ್ತಿ ಮನೆಯ ದೂರವಾಣಿ ಸಂಖ್ಯೆಯೊಂದನ್ನು ತಿಳಿಸಿದ್ದು ಹಲವು ಸಲ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಗುರುವಾರ ಸಂಪರ್ಕ ಸಿಕ್ಕಿದ್ದು ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ಮನೆಯಿಂದ ಹೊರಟ ಮೊಯ್ದೀನ್‌ರ ಪುತ್ರ ಮುಜೀಬ್ ಹಾಗೂ ಅಳಿಯ ಸಜು ಮಧ್ಯಾಹ್ನ ತೊಕ್ಕೊಟ್ಟು ತಲುಪಿದ್ದಾರೆ. ಮನೆಗೆ ತೆರಳುವ ವೇಳೆ ವೃದ್ಧರಿಗೆ ತೊಡಲು ವಸ್ತ್ರ ನೀಡಿ ಮನೆಯವರ ಜೊತೆ ಕಳುಹಿಸುವ ಮೂಲಕ ಆಟೊ ಚಾಲಕ ಕಬೀರ್ ಮಾನವೀಯತೆ ಮೆರೆದಿದ್ದಾರೆ.
ಚಾಲಕ ಕಬೀರ್ ಮಲಾರ್ ಅವರ ಕಾಳಜಿಯುತ ಕಾರ್ಯಕ್ಕೆ ಚಾಲಕರಾದ ರಾಶಿದ್ ಕೆ.ಪಿ.ಕೆ, ಸಯೀರ್ ಅಳೇಕಲ, ಇರ್ಷಾದ್ ಮಾರ್ಗತಲೆ ಸಹಿತ ಇತರ ಒಳಪೇಟೆಯ ಆಟೊ ಚಾಲಕರು ಸಹಕರಿಸಿದ್ದರು.