×
Ad

ದೇಶಾದ್ಯಂತ ಪ್ರಮುಖ ಜಲಾಶಯಗಳಲ್ಲಿ ತಗ್ಗಿದ ನೀರಿನ ಮಟ್ಟ

Update: 2016-05-27 19:51 IST

ಹೊಸದಿಲ್ಲಿ,ಮೇ 27: ದೇಶಾದ್ಯಂತದ 91 ಪ್ರಮುಖ ಜಲಾಶಯಗಳಲ್ಲಿಯ ನೀರಿನ ಮಟ್ಟ ಅವುಗಳ ಒಟ್ಟೂ ಸಾಮರ್ಥ್ಯದ ಶೇ.17ಕ್ಕೆ ಕುಸಿದಿದೆ ಎಂದು ಕೇಂದ್ರ ಜಲ ಸಂಪನ್ಮೂಲಗಳ ಸಚಿವಾಲಯವು ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಜಲಾಶಯಗಳ ಒಟ್ಟೂ ಸಾಮರ್ಥ್ಯ 157.799 ಶತಕೋಟಿ ಘನ ಮೀಟರ್(ಬಿಸಿಎಂ)ಗಳಾಗಿದ್ದು, ಮೇ 26ಕ್ಕೆ ಕೊನೆಗೊಂಡ ವಾರದಲ್ಲಿ ಈ ಜಲಾಶಯಗಳಲ್ಲಿ ಲಭ್ಯವಿದ್ದ ನೀರಿನ ಪ್ರಮಾಣ 26.816 ಬಿಸಿಎಂ ಮಾತ್ರ ಎಂದು ಅದು ಹೇಳಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೀರಿನ ಸಂಗ್ರಹ ಶೇ.45ರಷ್ಟು ಕುಸಿದಿದೆ ಮತ್ತು ಹತ್ತು ವರ್ಷಗಳ ಸರಾಸರಿ ಸಂಗ್ರಹಕ್ಕೆ ಹೋಲಿಸಿದರೆ ಶೇ.21ರಷ್ಟು ಕಡಿಮೆಯಿದೆ.

 ಹಿಮಾಚಲ ಪ್ರದೇಶ, ತೆಲಂಗಾಣ, ಪಂಜಾಬ್, ಪ.ಬಂಗಾಲ, ಒಡಿಶಾ, ಜಾರ್ಖಂಡ್, ಮಹಾರಾಷ್ಟ್ರ, ಗುಜರಾತ್,ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಛತ್ತೀಸ್‌ಗಡ, ತಮಿಳುನಾಡು, ಕರ್ನಾಟಕ ಮತ್ತು ಕೇರಳಗಳಲ್ಲಿಯ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಳೆದ ವರ್ಷಕ್ಕಿಂತ ಕಡಿಮೆಯಿದೆ.

 ಆಂಧ್ರಪ್ರದೇಶ,ತ್ರಿಪುರಾ ಮತ್ತು ರಾಜಸ್ಥಾನಗಳಲ್ಲಿ ಮಾತ್ರ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಪ್ರಮಾಣ ಉತ್ತಮವಾಗಿದೆ.

ದೇಶದಲ್ಲಿಯ ಎಲ್ಲ ಜಲಾಶಯಗಳ ಅಂದಾಜು ನೀರು ಸಂಗ್ರಹ ಸಾಮರ್ಥ್ಯ 253.88 ಬಿಸಿಎಂನಷ್ಟಿದೆ. 37 ಪ್ರಮುಖ ಜಲಾಶಯಗಳು 60 ಮೆ.ವ್ಯಾ.ಗೂ ಅಧಿಕ ವಿದ್ಯುತ್‌ನ್ನು ಉತ್ಪಾದಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News