ಎನ್‌ಎಂಪಿಟಿ ಖಾಸಗೀಕರಣಕ್ಕೆ ಕೇಂದ್ರ ಸಂಚು: ಸಚಿವ ರೈ
ಮಂಗಳೂರು, ಮೇ 28: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಎರಡು ವರ್ಷಗಳ ಅಭಿವೃದ್ದಿ ಶೂನ್ಯವಾಗಿದ್ದು, ಜಿಲ್ಲೆಯ ಪ್ರಮುಖ ಬಂದರು ಮಂಡಳಿಯಾದ ಎನ್‌ಎಂಪಿಟಿಯನ್ನು ಅದಾನಿಗೆ ನೀಡುವ ಮೂಲಕ ಖಾಸಗೀಕರಣಕ್ಕೆ ಸಂಚು ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಆರೋಪಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಎರಡು ವರ್ಷಗಳನ್ನು ಪೂರೈಸಿದ ಕುರಿತಂತೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೆ ಪಡುಬಿದ್ರೆ ಉಷ್ಣ ವಿದ್ಯುತ್ ಸ್ಥಾವರವನ್ನು ವಿರೋಧಿಸಿದವರು ಇಂದು ಅದಾನಿ ಕೈಗೆ ಕೊಟ್ಟು ವಿಸ್ತರಣೆ ಮಾಡುತ್ತಿದ್ದಾರೆ. ಅದರ ಜತೆಯಲ್ಲೇ ಎನ್‌ಎಂಪಿಟಿಯನ್ನೂ ಅದಾನಿಗೆ ನೀಡಲು ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದರು.
ಯುಪಿಎ ಸರಕಾರ ಆಧಾರ್ ಕಾರ್ಡ್ ಜಾರಿ, ಪೆಟ್ರೋಲ್- ಡೀಸೆಲ್ ದರ ಹೆಚ್ಚಳ ಸಂದರ್ಭ ಟೀಕಿಸಿ, ಪ್ರತಿಭಟನೆ ಮಾಡಿ ಜನರನ್ನು ಭಾವನಾತ್ಮಕವಾಗಿ ಮೋಸಗೊಳಿಸಿದ್ದ ಬಿಜೆಪಿ, ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಾಗ ಅದನ್ನು ಸಮರ್ಥಿಸಿ ಅನುಷ್ಠಾನಕ್ಕೆ ತರುವ ಮೂಲಕ ಯು ಟರ್ನ್ ಸರಕಾರ ಎಂಬುದನ್ನು ಸಾಬೀತುಪಡಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಟೀಕಿಸಿದರು.
ಚುನಾವಣೆ ಪ್ರಚಾರ ಸಂದರ್ಭದಲ್ಲಿ ಅಂಗೈಯಲ್ಲಿ ಆಕಾಶ ತೋರಿಸಿದ್ದ ಬಿಜೆಪಿ, ಎರಡು ವರ್ಷದಲ್ಲಿ ಯಾವುದೇ ಸಾಧನೆ ಮಾಡಿಲ್ಲ. ಅಧಿಕಾರಕ್ಕೆ ಬಂದು 100 ದಿನದಲ್ಲಿ ಕಪ್ಪು ಹಣ ತರುತ್ತೇವೆ, ಪ್ರತಿಯೊಬ್ಬ ವ್ಯಕ್ತಿಯ ಖಾತೆಗೆ 15 ಲಕ್ಷ ರೂ. ಜಮಾ ಮಾಡುತ್ತೇವೆ ಎಂದು ಆಮಿಷ ತೋರಿಸಿ ಜನರನ್ನು ವಂಚಿಸಿದೆ ಎಂದವರು ಆಪಾದಿಸಿದರು.
ಪ್ರಭಾವಿ ಸಮಾಜಕ್ಕೆ ನೆರವು- ದುರ್ಬಲರಿಗೆ ಮೋಸ ಕೇಂದ್ರದ ಸಾಧನೆ
ಪ್ರಭಾವಿ ಸಮಾಜಕ್ಕೆ ನೆರವು ನೀಡುವ ಮೂಲಕ ಅವರನ್ನು ಮತ್ತಷ್ಟು ಶಕ್ತಿವಂತರನ್ನಾಗಿಸಿ, ದುರ್ಬಲರನ್ನು ಮೋಸ ಮಾಡುವುದು ಬಿಜೆಪಿಯ ಅಜೆಂಡಾ ಎಂದು ಟೀಕಿಸಿದ ರೈ, ಯುಪಿಎ ಸರಕಾರ ಅವಧಿಯಲ್ಲಿ ಪೆಟ್ರೋಲ್- ಡೀಸೆಲ್ ದರ ಹೆಚ್ಚಳ ಆಗುತ್ತಿದ್ದಾಗ ಬಿಜೆಪಿಯವರು ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದರು. ಆಗ ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 147 ಡಾಲರ್ ತನಕ ಹೋಗಿತ್ತು. ಈಗ 40 ಡಾಲರ್‌ಗೆ ಇಳಿಕೆಯಾದರೂ ದರ ಕಡಿಮೆ ಆಗಿಲ್ಲ. ಈಗ ಯಾರೂ ಪ್ರತಿಭಟಿಸುತ್ತಿಲ್ಲ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದವರು ಹೇಳಿದರು.
ಕೇಂದ್ರ ಸರಕಾರದಿಂದ ಕೇವಲ ಪ್ರಚಾರ ಮಾತ್ರ
ದೇಶಕ್ಕಾಗಿ ಯೌವನದಲ್ಲೇ ಜೈಲಿಗೆ ಹೋಗಿದ್ದ, ಪ್ರಧಾನಿಯಾಗಿ ಅಲಿಪ್ತ ಕೂಟ ರಚಿಸಿ, ವಿಶ್ವ ಮಾನ್ಯತೆ ಪಡೆದಿದ್ದ ಜವಾಹರಲಾಲ ನೆಹರು ಈಗ ಅಸಹಿಷ್ಣುತೆಯ ಭಾಗವಾಗಿದ್ದಾರೆ. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಸಾಮಾಜಿಕ ಅಸಮತೋಲನ ನಿವಾರಿಸಿದ್ದರು. ರಾಜೀವ ಗಾಂಧಿ ತಾಂತ್ರಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಡಿದ್ದಾರೆ. ಹೀಗಿದ್ದರೂ 60 ವರ್ಷದಲ್ಲಿ ಏನೂ ಆಗಿಲ್ಲ ಎನ್ನುವ ಮೋದಿ ಸರಕಾರ, ಕೇವಲ ಪ್ರಚಾರಕ್ಕಾಗಿ ಒಂದು ಸಾವಿರ ಕೋಟಿ ರೂ.ಗಳನ್ನು ವ್ಯಯಿಸಿರುವುದಲ್ಲದೆ, ಪ್ರಚಾರದಲ್ಲೇ ಎಲ್ಲಾ ಅಭಿವೃದ್ಧಿ ಎಂಬಂತೆ ಬಿಂಬಿಸುತ್ತಿದೆ.
ನೆಹರು ಸರಕಾರದ ಸಂಸದರಾಗಿದ್ದ ಶ್ರೀನಿವಾವಾಸ ಮಲ್ಯ ಅವರ ದೂರದೃಷ್ಟಿಯಿಂದ ಎನ್‌ಎಂಪಿಟಿ, ರಾಷ್ಟ್ರೀಯ ಹೆದ್ದಾರಿ ವಿಮಾನ ನಿಲ್ದಾಣ, ಸೇತುವೆಗಳು ಬಂದಿದೆ. ಮುಂದೆ ಪೂಜಾರಿ, ಆಸ್ಕರ್, ಮೊಯ್ಲಿ ಅವಧಿಯಲ್ಲಿ ಮಂಗಳೂರು ವಿವಿ, ಎಂಸಿಎ್, ಎಂಆರ್‌ಪಿಎಲ್, ವಿಶೇಷ ವಿತ್ತ ವಲಯ ಆರಂಭಗೊಂಡಿವೆ. ಆಸ್ಕರ್ ಮಂಜೂರು ಮಾಡಿಸಿದ್ದ ಶಿರಾಡಿ ಕಾಂಕ್ರಿಟ್ ಕಾಮಗಾರಿಯನ್ನು ತನ್ನದೆಂದು ಪ್ರಚಾರ ಮಾಡಿದ ಸಂಸದರಿಗೆ ಎರಡನೇ ಹಂತದ ಕಾಮಗಾರಿ ಯಾಕೆ ಮಾಡಲಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಮುಡಾ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎಸ್.ಮುಹಮ್ಮದ್, ಶಾಹುಲ್ ಹಮೀದ್, ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ಮಹಾಬಲ ಮಾರ್ಲ, ಅಪ್ಪಿ, ಎ.ಸಿ.ವಿನಯರಾಜ್, ಬಂಟ್ವಾಳ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಕಾಂಗ್ರೆಸ್ ಮುಖಂಡರಾದ ಎ.ಸಿ.ಭಂಡಾರಿ, ಸದಾಶಿವ ಉಳ್ಳಾಲ್, ಪದ್ಮನಾಭ ನರಿಂಗಾನ, ಬಾಲಕೃಷ್ಣ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಸಕ್ತ ನಾಯಕರಿಗೆ ಬೆಲೆ
ಕಾಂಗ್ರೆಸ್ ನಾಯಕತ್ವ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಕುರಿತು ಪಕ್ಷದ ವರ್ತಮಾನ ಕಾಲದ ಸಕ್ರಿಯ ನಾಯಕರು ಏನಾದರೂ ಹೇಳಿದರೆ ಮಾತ್ರ ಅದಕ್ಕೆ ಬೆಲೆ ಎಂದು ಸಚಿವ ಬಿ.ರಮಾನಾಥ ರೈ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್, ಬಿ.ಜನಾರ್ದನ ಪೂಜಾರಿ ಮೊದಲಾದವರು ನಾಯಕತ್ವ ಬದಲಾವಣೆ ಕುರಿತು ದನಿ ಎತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆಲ್ಲಾ ಮಹತ್ವ ಇಲ್ಲ. ಪಕ್ಷದಲ್ಲಿ ನಾಯಕತ್ವದ ಕೊರತೆಯೂ ಇಲ್ಲ. ಸಿಎಂ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕೆಳವರ್ಗದ ವಿರೋಧಿಯಾಗಿರುವ ಬಿಜೆಪಿ ಮಾತ್ರ ಸಿಎಂ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದರು.