ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸ್ತ್ರೀ ಶಕ್ತಿ ಒಕ್ಕೂಟ: ಸಚಿವೆ ಉಮಾಶ್ರೀ
ಮಂಗಳೂರು, ಮೇ 28: ರಾಜ್ಯದ ಸ್ತ್ರೀ ಶಕ್ತಿ ಗುಂಪುಗಳು ಸ್ವಾವಲಂಬನೆಯ ಹಾದಿಯಲ್ಲಿ ದೇಶದಲ್ಲೇ ಮಾದರಿಯಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸ್ತ್ರೀ ಶಕ್ತಿ ಒಕ್ಕೂಟಗಳನ್ನು ಒಗ್ಗೂಡಿಸಿ ಜಿಲ್ಲಾ ಮಟ್ಟದ ಸ್ತ್ರೀ ಶಕ್ತಿ ಒಕ್ಕೂಟಗಳನ್ನು ಸ್ಥಾಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಉಮಾಶ್ರೀ ಹೇಳಿದ್ದಾರೆ.
ನಗರದ ಪುರಭವನದಲ್ಲಿ ಇಂದು ಸ್ತ್ರೀಶಕ್ತಿ ಸಮಾವೇಶ, ಮಾಹಿತಿ ಕಾರ್ಯಾಗಾರ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ತಾಲೂಕು ಸ್ತ್ರೀ ಶಕ್ತಿ ಮಹಿಳಾ ವಿವಿದೋದ್ದೇಶ ಸಹಕಾರ ಸಂಘಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಸಮಾವೇಶ ಹಾಗೂ ಕಾರ್ಯಾಗಾರಕ್ಕೆ ಅವರು ಚಾಲನೆ ನೀಡಿದರು.
ತಾಲೂಕು ಸ್ತ್ರೀಶಕ್ತಿ ಮಹಿಳಾ ವಿವಿದೋದ್ದೇಶ ಸಹಕಾರ ಸಂಘಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಸ್ತರಿಸುವ ಜತೆಗೆ ಜಿಲ್ಲಾ ಮಟ್ಟದ ಒಕ್ಕೂಟಕ್ಕೆ 1 ಲಕ್ಷ ರೂ. ಅನುದಾನವನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
ಸ್ತ್ರೀಶಕ್ತಿ ಗುಂಪುಗಳು ಮಹಿಳೆಯರಿಗೆ ಹೊಸ ಚೈತನ್ಯವನ್ನು ನೀಡಿರುವುದಲ್ಲದೆ, ಆರ್ಥಿಕ ಸಬಲೀಕರಣ ಹಾಗೂ ಸಾಮಾಜಿಕ ಬದಲಾವಣೆಗೂ ಕಾರಣವಾಗಿದೆ.ದ.ಕ. ಜಿಲ್ಲೆಯಲ್ಲಿ 3935 ಸ್ತ್ರೀ ಶಕ್ತಿ ಗುಂಪುಗಳಲ್ಲಿ 56000 ಸದಸ್ಯರಿದ್ದಾರೆ. ಈ ಗುಂಪುಗಳು 221 ಕೋಟಿ ರೂ. ಆಂತರಿಕ ಸಾಲ ಪಡೆದುಕೊಂಡು 67.36 ಕೋಟಿ ರೂ. ಉಳಿತಾಯ ಮಾಡಿದ್ದಾರೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಥೈರ್ಯ ನಿಧಿ ಮೂಲಕ ಸಾಂತ್ವಾನ
ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ನೆರವು, ದೂರು ದಾಖಲು ಮಾಡುವ, ಚಿಕಿತ್ಸೆ ಒದಗಿಸುವ ಮೂಲಕ ದೇಶದಲ್ಲೇ ಪ್ರಥಮ ಹೆಜ್ಜೆ ಇರಿಸಿದ ರಾಜ್ಯ ಕರ್ನಾಟಕವಾಗಿದ್ದು, ಸ್ಥೆರ್ಯ ನಿಧಿ ಸ್ಥಾಪಿಸುವ ಮೂಲಕ ಜಿಲ್ಲಾಧಿಕಾರಿ ನೇತೃತ್ವದ ಸಮಿತ್ಲಿ ಮೂಲಕ 25,000 ರೂ.ಗಳಿಂದ 1 ಲಕ್ಷ ರೂ.ವರಗೆ ನೆರವು ನೀಡುವ ಕಾರ್ಯವೂ ನಡೆಯುತ್ತಿದೆ. ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಸಂದರ್ಭ ಒದಗಿಸಲಾಗುವ ಪರಿಹಾರ ರಾಜ್ಯ ಮಟ್ಟದ ಶಿಫಾರಸಿನ ಮೂಲಕ ನಡೆಯುತ್ತಿದೆ. ಆಸಿಡ್ ದಾಳಿಗೊಳಗಾದವರಿಗೆ ಆಸರೆಯಾಗಿ ಮಾಸಿಕ 3000 ರೂ. ಪಿಂಚಣಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 20 ಲಕ್ಷ ರೂ.ವರೆಗಿನ ಚಿಕಿತ್ಸೆಗೆ ನೆರವು, ಲೈಂಗಿಕ ಅಲ್ಪಸಂಖ್ಯಾತರಿಗೆ ಪಿಂಚಣಿ ಯೋಜನೆ, ಮಹಿಳಾ ಅಭಿವೃದ್ಧಿ ನಿಗಮದ 10 ಕೋಟಿ ರೂ. ಸಾಲ ಮನ್ನಾ, ವಿಕಲಚೇನತರ 11 ಕೋಟಿ ರೂ. ಸಾಲ ಮನ್ನಾದಂತಹ ಜನಪರ ಯೋಜನೆಗಳನ್ನು ರಾಜ್ಯ ಸರಕಾರ ಜಾರಿಗೊಳಿಸಿದೆ.
ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಮಹಿಳಾ ಸಬಲೀಕರಣದ ದೃಷ್ಟಿಯಿಂದ ಸ್ತ್ರೀ ಶಕ್ತಿ ಗುಂಪುಗಳು ಪ್ರೇರಣಾದಾಯಕವಾಗಿವೆ. ಸ್ತ್ರೀಶಕ್ತಿ ಸಂಘಟನೆಗಳಿಂದಾಗಿ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಮಹಿಳೆಯರು ಎಲ್ಲಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಅಂಗನವಾಡಿ ಪರಿಕಲ್ಪನೆ ಈ ಎಲ್ಲಾ ಕಾರ್ಯಕ್ರಮಗಳಿಗೆ ಮೂಲಾಧಾರ ಎಂದವರು ಅಭಿಪ್ರಾಯಿಸಿದರು.
ವೇದಿಕೆಯಲ್ಲಿ ಕ್ರೀಡಾ ಸಚಿವ ಅಭಯಚಂದ್ರ ಜೈನ್, ಶಾಸರಾದ ಐವನ್ ಡಿಸೋಜಾ, ಜೆ.ಆರ್. ಲೋಬೋ, ಶಕುಂತಳಾ ಶೆಟ್ಟಿ, ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ರಾಜ್ಯ ಮಹಿಳಾ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ. ಕೃಪಾ ಅಮರ್ ಆಳ್ವ, ಮೂಡಾ ಅಧ್ಯಕ, ಇಬ್ರಾಹೀಂ ಕೋಡಿಜಾಲ್, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಮಹಿಳಾ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎನ್. ವಿಜಯ ಪ್ರಕಾಶ್, ಸಹಕಾರ ಸಂಘಗಳ ಉಪ ನಿಬಂಧಕ ಸಲೀಂ, ಚಿಕ್ಕಮಗಳೂರುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜಯ್ಯ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಲಾಲಿಮಣಿ ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿಅತ್ಯುತ್ತಮ ಸ್ತ್ರೀ ಶಕ್ತಿ ಗುಂಪು ಮತ್ತು ಒಕ್ಕೂಟಗಳಿಗೆ ಸನ್ಮಾನ, ರಾಜ್ಯ ಮಟ್ಟದ ಕಲಾಶರೀ ಪ್ರಶಸ್ತಿ ವಿಜೇತ ಮಕ್ಕಳಿಗೆ ಸನ್ಮಾನ, ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮ ನಡೆಯಿತು.
ಪುರಭವನದ ಹೊರಗೆ ಸ್ತ್ರೀಶಕ್ತಿ ಗುಂಪುಗಳಿಂದ ತಯಾರಿಸಿದ ಗೃಹೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿತ್ತು.
ಈ ವರ್ಷದಿಂದ ಧನಶ್ರೀ- ಸಮೃದ್ಧಿ ಯೋಜನೆ ಜಾರಿ
ಎಚ್‌ಐವಿ ಬಾಧಿತ ಹೆಣ್ಣು ಮಕ್ಕಳನ್ನು ಕುಟುಂಬದವರು ದೂರು ಮಾಡುವುದಲ್ಲದೆ, ಸಮಾಜದಿಂದಲೂ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಅವರು ಸ್ವಾಭಿಮಾನದ ಬದುಕು ಸಾಗಿಸಲು ಅನುಕೂಲವಾಗುವಂತೆ ರಾಜ್ಯ ಸರಕಾರ ಧನಶ್ರೀ ಯೋಜನೆಯನ್ನು ಈ ವರ್ಷದಿಂದ ಜಾರಿಗೊಳಿಸಲಿದೆ. ಈ ಯೋಜನೆಯಡಿ ಎಚ್‌ಐವಿ ಬಾಧಿತ ಮಹಿಳೆಯರು ಸ್ವ ಉದ್ಯೋಗಕ್ಕಾಗಿ 50000 ರೂ. ಸಾಲವನ್ನು 10,000 ರೂ.ಗಳ ಸಬ್ಸಿಡಿಯೊಂದಿಗೆ ನೀಡಲಾಗುವುದು. ಸಮಾಜದ ಕಟ್ಟಕಡೆಯ ಮಹಿಳೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸಲು ಮುಂದಾಗುವುದಾದಲ್ಲಿ ತಲಾ10,000 ರೂ.ನಂತೆ 10000 ಮಹಿಳೆಯರಿಗೆ ಈ ವರ್ಷದಿಂದ ಸಮೃದ್ಧಿ ಯೋಜನೆಯನ್ನೂ ಸರಕಾರ ಜಾರಿಗೊಳಿಸಲಿದೆ ಎಂದು ಸಚಿವೆ ಉಮಾಶ್ರೀ ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ವಿವಿದೋದ್ದೇಶ ಸಹಕಾರ ಸಂಘ ಸ್ಥಾಪನೆ: ಮಹಾದೇವ ಪ್ರಸಾದ್
ತಾಲೂಕು ಮಟ್ಟದ ಸ್ತ್ರೀ ಶಕ್ತಿ ಮಹಿಳಾ ವಿವಿದೋದ್ದೇಶ ಸಹಕಾರ ಸಂಘಗಳ ಮಾದರಿಯಲ್ಲಿ ರಾಜ್ಯದತ 30 ಇಲ್ಲೆಗಳಲ್ಲೂ ಸಂಘ ಸ್ಥಾಪಿಸುವ ಕಾರ್ಯಕ್ರಮವನ್ನು ಮಹಿಳಾ ಮತ್ತು ಸಹಕಾರ ಇಲಾಖೆಗಳ ಜಂಟಿ ಸಹಕಾರದೊಂದಿಗೆ ರೂಪಿಸಲಾಗುವುದು ಎಂದು ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್. ಮಹಾದೇವ ಪ್ರಸಾದ್ ತಿಳಿಸಿದರು.
ಸ್ತ್ರೀಶಕ್ತಿ ಮಹಿಳಾ ವಿವಿದೋದ್ದೇಶ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿವಿದೋದ್ದೇಶ ಸಹಕಾರ ಸಂಘ ಸ್ಥಾಪಿಸಲು ಸ್ತ್ರೀ ಶಕ್ತಿ ಸಂಘಗಳು ಮೂಲ ಕಾರಣವಾಗಿದೆ ಎಂದರು.