ಜಿಲ್ಲೆಯಲ್ಲಿ ನಾಲ್ವರು ಸಚಿವರಿದ್ದರೂ ಅಭಿವೃದ್ಧಿ ಶೂನ್ಯ: ಪ್ರತಾಪಸಿಂಹ ನಾಯಕ್
ಮಂಗಳೂರು, ಮೇ 28: ಜಿಲ್ಲೆಯಲ್ಲಿ ನಾಲ್ವರು ಸಚಿವರಿದ್ದರೂ ಅಭಿವೃದ್ಧಿ ಶೂನ್ಯ ಎಂದು ಬಿಜೆಪಿಯ ದ.ಕ. ಜಿಲ್ಲಾಧ್ಯಕ್ಷ ಪ್ರತಾಪ ಸಿಂಹ ನಾಯಕ್ ಟೀಕಿಸಿದ್ದಾರೆ.
ಶನಿವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ನಾಲ್ವರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದಾಗ ಜಿಲ್ಲೆಯ ಜನತೆ ಸಹಜವಾಗಿಯೇ ಅಭಿವೃದ್ಧಿಯ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಮೂರು ವರ್ಷ ಕಳೆದರೂ ಅಭಿವೃದ್ಧಿ ಮಾತ್ರ ಏನೂ ಇಲ್ಲ ಎಂದರು.
ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಹಗರಣದಲ್ಲಿ ಸಿಲುಕುವ ಮೂಲಕ ಕಾಂಗ್ರೆಸ್ ಕಾರ್ಯವೈಖರಿ ಬಯಲಾಗಿದೆ. ಸಚಿವರ ನಡೆಯಿಂದ ಜಿಲ್ಲೆಯ ಜನತೆ ಅವಮಾನ ಪಡುವಂತಾಗಿದೆ ಎಂದವರು ಹೇಳಿದರು.
ಜಿಲ್ಲೆಯಲ್ಲಿ ಮರಳು ದಂಧೆಗೆ ಕಡಿವಾಣ ಬಿದ್ದಿಲ್ಲ. ಅಕ್ರಮಗಳಿಗೆ ತಡೆಯಾಗಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ‘ಎಲ್ಲರೂ ದಂಧೆ ಮಾಡುತ್ತಿದ್ದಾರೆ’ ಎಂಬ ಬಾಲಿಶ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದು ಸರಕಾರದ ಮನಸ್ಥಿತಿಯನ್ನು ಸೂಚಿಸುತ್ತದೆ. ಅಕ್ರಮ ಚಟುವಟಿಕೆ ನಡೆಸುವವರಿಗೆ ರಕ್ಷಣೆ ನೀಡುವ ಸರಕಾರ ಇದಾಗಿದೆ. ರಬ್ಬರ್, ಅಡಿಕೆ ಬೆಳೆಗಾರರ ಸಮಸ್ಯೆ ಹೀಗೆ ಯಾವೊಂದು ಸಮಸ್ಯೆಗಳೂ ಬಗೆಹರಿದಿಲ್ಲ. ರಕ್ಷಣೆ ನೀಡುವ ಪೊಲೀಸ್ ಇಲಾಖೆಯ ಸಮಸ್ಯೆಯೇ ಬಗೆಹರಿದಿಲ್ಲ. ಪೊಲೀಸರೇ ಮುಷ್ಕರ ನಡೆಸುವ ಹಂತಕ್ಕೆ ತಲುಪಿದ್ದಾರೆ. ರಾಜ್ಯ ಸರಕಾರ ಸಂಪೂರ್ಣ ವೈಲ್ಯ ಕಂಡಿದೆ. ಜನತೆ ಸರಕಾರದ ಮೇಲೆ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ ಎಂದು ದೂರಿದರು.
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಒಂದೆಡೆಯಿಂದ ಮಾತುಕತೆ ಮಾಡುತ್ತೇವೆ ಎಂದೂ, ಇನ್ನೊಂದೆಡೆಯಿಂದ ಯೋಜನೆ ಮಾಡುವುದು ಶತಸ್ಸಿದ್ಧ ಎಂದೂ ಹೇಳುತ್ತಾರೆ. ಯಾವುದು ನಿಜ? ಎತ್ತಿನಹೊಳೆ ಯೋಜನೆಯಲ್ಲಿ ಜನಾಭಿಪ್ರಾಯ ಪಡೆಯಲು ಮೂರು ವರ್ಷಗಳಾದರೂ ಸಾಧ್ಯವಾಗಿಲ್ಲ. ದ.ಕ.ದಲ್ಲಿ ಇಷ್ಟೆಲ್ಲ ಹೋರಾಟಗಳು ನಡೆಯುತ್ತಿದ್ದರೂ ದಿವ್ಯ ನಿರ್ಲಕ್ಷ್ಯ ವಹಿಸಿ ರಾಜಕೀಯ ಪಕ್ಷಗಳು, ಹೋರಾಟಗಾರರು, ಎನ್‌ಜಿಒಗಳನ್ನು ಕರೆಸಿ ಮಾತನಾಡುವ ವ್ಯವಧಾನ ಸರಕಾರಕ್ಕಿಲ್ಲ ಎಂದರು.
ಸುದ್ದಿಗೋಷ್ಠಿಯ್ಲಿಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಘಿ.ಗಣೇಶ್ ಕಾರ್ಣಿಕ್, ಬಿಜೆಪಿ ಪ್ರಮುಖರಾದ ನಿತಿನ್ ಕುಮಾರ್, ಸಂಜೀವ ಮಠಂದೂರು, ರವಿಶಂಕರ ಮಿಜಾರು, ದಿವಾಕರ ಸಾಮಾನಿ, ಸಂಜಯ ಪ್ರಭು ಉಪಸ್ಥಿತರಿದ್ದರು.