×
Ad

ಇಂಗ್ಲಿಷ್ ಕಲಿಕೆಗೆ ವಿನೂತನ ವಿಧಾನ ‘ಕರಡಿ ಪಾಥ್’

Update: 2016-05-28 15:56 IST

ಸುಳ್ಯ: ಸುಳ್ಯದ ಕೆ.ವಿ.ಜಿ.ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಇದೇ 2016-17 ರ ಶೈಕ್ಷಣಿಕ ವರ್ಷದಲ್ಲಿ ಕೆ.ಜಿ.ತರಗತಿಯಿಂದ 1ನೇ ತರಗತಿಯ ಮಕ್ಕಳಿಗೆ "ಕರಡಿ ಪಾಥ್" ಎಂಬ ವಿನೂತನ ಇಂಗ್ಲಿಷ್ ಕಲಿಕಾ ವಿಧಾನವನ್ನು ಹೊಸದಾಗಿ ಆರಂಭಿಸಲಾಗಿದೆ. ಇಂಗ್ಲಿಷ್ ಕಲಿಕೆಯನ್ನು ಸರಳ ಹಾಗೂ ಸುಲಭವಾಗಿಸಬೇಕೆಂಬ ಸದುದ್ದೇಶದ ಜೊತೆಗೆ ಆ ಭಾಷೆಯ ಮೇಲೆ ನಮ್ಮ ವಿದ್ಯಾರ್ಥಿಗಳು ಪ್ರಭುತ್ವ ಸಾಧಿಸಬೇಕೆಂಬ ಸದಾಶಯ ಈ ಕಲಿಕಾ ವಿಧಾನದಲ್ಲಿದೆ.

‘ಪವರ್ ಇಂಗ್ಲಿಷ್’ ಎಂಬ ಹೆಸರಿನಲ್ಲಿ ಅಭಿನಯ, ಸಂಗೀತ, ಕಥೆ ಹಾಗೂ ಓದು ಎಂಬ 4 ಹಂತಗಳನ್ನೊಳಗೊಂಡ ಕಲಿಕಾ ವಿಧಾನ ಇದಾಗಿದೆ. ಮಾತೃಭಾಷೆಯನ್ನು ಮಕ್ಕಳು ಹೇಗೆ ಸಹಜವಾಗಿ ಕಲಿಯುತ್ತಾರೋ ಹಾಗೇ ಆಂಗ್ಲಭಾಷೆಯನ್ನೂ ಕಲಿಯಲು ಅನುಕೂಲವಾಗುವಂತಹ ಪರಿಸರವನ್ನು ನಿರ್ಮಿಸುವುದು ಇಲ್ಲಿನ ಗಮನಾರ್ಹ ಅಂಶ. ಪ್ರತಿಯೊಂದು ಅಕ್ಷರವನ್ನೂ ಹೇಗೆ ಉಚ್ಚಾರ ಮಾಡಬೇಕೆಂಬುದನ್ನು ಮೊದಲನೆಯ ಹಂತದಲ್ಲಿ ಹೇಳಿಕೊಡಲಾಗುತ್ತದೆ. ‘ಅಮರ ಚಿತ್ರ ಕಥಾ’ ‘ಟಿಂಕಲ್’ ಮೊದಲಾದ ಬಾಲ ಚಿತ್ರಕಥೆಗಳ ಪುಸ್ತಕಗಳನ್ನಾಧರಿಸಿ ಮಕ್ಕಳಿಗೆ ಅರ್ಥವಾಗುವಂತೆ ಭಾರತೀಯ ಸಂಗೀತದ ಹಿನ್ನೆಲೆ ಧ್ವನಿಯನ್ನು ಅಳವಡಿಸಿ ಸರಳ ಶಿಶುಗೀತೆಗಳನ್ನು ರಚಿಸಲಾಗಿದ್ದು ದೃಶ್ಯಾವಳಿಗಳ ಮೂಲಕ ಮಕ್ಕಳು ನೋಡುತ್ತಾ,ಸಂಗೀತವನ್ನು ಆಲಿಸುತ್ತಾ, ಶಿಕ್ಷಕರ ಮಾರ್ಗದರ್ಶನದಂತೆ ತಮ್ಮ ಕೈಯಲ್ಲಿರುವ ಪುಸ್ತಕವನ್ನು ಗಮನಿಸುತ್ತಾ ಆನಂದದಿಂದ ಕಲಿಯುತ್ತಾರೆ. ಇದು ಎರಡನೆಯ ಹಂತ. ಮೂರನೆಯ ಹಂತದಲ್ಲಿ ಕಥೆಗಳನ್ನು ಪರಿಣಾಮಕಾರಿಯಾಗಿ ಹೇಳುವ ವಿಧಾನವನ್ನು ಅಳವಡಿಸಲಾಗಿದೆ. ಸ್ವರಭಾರ ಸಹಿತವಾಗಿ, ಧ್ವನಿಯ ಏರಿಳಿತ ಮಾಡುತ್ತಾ, ದೃಶ್ಯಾವಳಿಗಳ ಮೂಲಕ ಮಕ್ಕಳು ನೋಡುತ್ತಾ, ಶಿಕ್ಷಕರ ಮಾರ್ಗದರ್ಶನದಂತೆ ತಮ್ಮ ಕೈಯಲ್ಲಿರುವ ಪುಸ್ತಕದಲ್ಲಿ ಕಾಣುವ ಬಣ್ಣಬಣ್ಣದ ಚಿತ್ರಗಳನ್ನು ಗಮನಿಸುತ್ತಾ ಆನಂದದಿಂದ ಕಲಿಯುತ್ತಾರೆ. ನಂತರ ನಾಲ್ಕನೆಯ ಹಂತದಲ್ಲಿ ಪರಿಣಾಮಕಾರಿ ಓದುಗಾರಿಕೆಗೆ ಮಕ್ಕಳನ್ನು ಹೇಗೆ ತಯಾರಿಮಾಡಬೇಕೆಂಬುದರ ಕುರಿತು ತರಬೇತಿ ನೀಡುತ್ತಾರೆ. ಹೀಗೆ ಬಾಲ್ಯದಲ್ಲಿ ಇಂಗ್ಲಿಷ್ ಕಲಿಕೆಗೆ ಭದ್ರ ಬುನಾದಿ ಹಾಕುವುದರ ಮೂಲಕ ಭವಿಷ್ಯದಲ್ಲಿ ಅವರು ಆತ್ಮವಿಶ್ವಾಸದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಂತೆ ಮಕ್ಕಳಿಗೆ ತರಬೇತಿ ನೀಡಲಾಗುವುದು.

ಚೆನ್ನೈನಲ್ಲಿ ಸ್ಥಾಪಿತವಾದ ಸಂಸ್ಥೆ ಇಂದು ಭಾರತದಾದ್ಯಂತ 1500 ಶಾಲೆಗಳಲ್ಲಿ ಇಂಗ್ಲಿಷನ್ನು ಪರಿಣಾಮಕಾರಿಯಾಗಿ ಕಲಿಸುತ್ತಿದೆ ಈ ಸಂಸ್ಥೆಯಲ್ಲಿ ನುರಿತ ಅನುಭವೀ ಅಧ್ಯಾಪಕರ ವೃಂದವಿದ್ದು ಅದರಲ್ಲಿ ನಿಯೋಜಿಸಲಾದ ಓರ್ವ ಶಿಕ್ಷಕರು ಸಂಸ್ಥೆಯ ‘ಕರಡಿ ಪಾಥ್’ ಸಂಯೋಜಕರ ಜೊತೆ ಸತತವಾಗಿ ಸಂಪರ್ಕದಲ್ಲಿದ್ದು ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರುತ್ತಾರೆ. ಮಕ್ಕಳ ಕಲಿಕಾ ಮಟ್ಟವನ್ನಾಧರಿಸಿ ರಚಿಸಲಾದ ಸಿ.ಡಿ. ಹಾಗೂ ಡಿ.ವಿ.ಡಿಗಳನ್ನು ಹಾಗೂ ಇತರೆ ಕಲಿಕಾ ಉಪಕರಣಗಳನ್ನು ಪ್ರತಿಯೊಂದು ಮಗುವಿಗೂ ವಿತರಿಸಲಾಗುತ್ತದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ಆ ವಿಭಾಗದ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನಿಂದ ಆರ್.ಉದಯಕುಮಾರ್ ಅವರು ಆಗಮಿಸಿ ಈ ವಿನೂತನ ಪರಿಣಾಮಕಾರೀ ಕಲಿಕಾ ವಿಧಾನದ ಕುರಿತು ಮಾಹಿತಿ ಹಾಗೂ ತರಬೇತಿ ನೀಡಿದರು. ಶಾಲಾ ಪ್ರಾಂಶುಪಾಲ ಪಿ.ಭುಜಂಗಶೆಟ್ಟಿ ಅವರನ್ನೊಳಗೊಂಡಂತೆ ಶಾಲೆಯ ಎಲ್ಲಾ ಅಧ್ಯಾಪಕ ವೃಂದದವರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News