ಸುಳ್ಯ: ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ
ಸುಳ್ಯ: ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ರಾಜ್ಯ ಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ಜೂನ್ 4ರಂದು ನಡೆಯಲಿದೆ ಎಂದು ಕಾಲೇಜಿನ ವೈದ್ಯಕೀಯ ನಿರ್ದೆಶಕ ಡಾ.ಕೆ.ವಿ.ಚಿದಾನಂದ ಹೇಳಿದ್ದಾರೆ.
ವೈದ್ಯರಿಗೆ, ವೈದ್ಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ರಂಗದಲ್ಲಿ ನಿರಂತರ ನಡೆಯುತ್ತಿರುವ ಹೊಸ ಆವಿಷ್ಕಾರಗಳ, ವೈದ್ಯಕೀಯ ವಿಧಿವಿಜ್ಞಾನಗಳ ಬಗ್ಗೆ ಇತ್ತೀಚಿನ ಬೆಳವಣಿಗೆಗಳ ಅರಿವು ಮೂಡಿಸುವ ಉದ್ದೇಶದಿಂದ ಕಾಲೇಜಿನಲ್ಲಿ ಪ್ರತಿ ತಿಂಗಳು ಕಾರ್ಯಾಗಾರಗಳು ನಡೆಯುತ್ತಿವೆ. ಕಾಲೇಜಿನ ಫೆಥಾಲಜಿ ವಿಭಾಗದ ವತಿಯಿಂದ ರಕ್ತದಾನದಲ್ಲಿ ರಕ್ತಕಣಗಳ ವರ್ಗಾವಣೆಯ ಪಾತ್ರ, ಮೂಳೆಮಚ್ಚೆಯ ಕಸಿಯಲ್ಲಿನ ಇತ್ತೀಚಿನ ಬೆಳವಣಿಗೆ, ವೈದ್ಯಕೀಯ ಪ್ರಯೋಗಾಲಯಗಳ ಪರೀಕ್ಷಾ ವಿಧಾನಗಳ ಹೊಸ ಆವಿಷ್ಕಾರಗಳು ಹಾಗೂ ಪಿತ್ತಜನಕಾಂಗದ ರೋಗಳ ಕುರಿತು ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನ ವೀಕ್ಷಕರ ಸಮ್ಮುಖ ಕಾರ್ಯಾಗಾರ ನಡೆಯಲಿದೆ. ಕರ್ನಾಟಕ ಹಾಗೂ ಕೇರಳದ ಪ್ರಮುಖ ವೈದ್ಯರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.