ಉಪ್ಪಿನಂಗಡಿ: ಬಾವಿಗೆ ಹಾರಿದ ದಂಪತಿ - ಪತಿ ಸಾವು, ಪತ್ನಿ ಪಾರು
ಉಪ್ಪಿನಂಗಡಿ: ಪತಿ ಮತ್ತು ಪತ್ನಿಯ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿ ಇಬ್ಬರೂ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ಪತಿ ಮೃತಪಟ್ಟು ಪತ್ನಿ ಜೀವಾಪಾಯದಿಂದ ಪಾರಾದ ಘಟನೆ ಶನಿವಾರ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ಎಂಬಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ 34ನೇ ನೆಕ್ಕಿಲಾಡಿಯ ನಿವಾಸಿ, ಪುತ್ತೂರಿನ ಜಿಡೆಕಲ್ಲು ಮಹಿಳಾ ಕಾಲೇಜಿನ ಉಪನ್ಯಾಸಕ ಪ್ರಕಾಶ್ ಕೆ. (32) ಮೃತಪಟ್ಟವರು. ಅವರ ಪತ್ನಿ ಆಶಾಶ್ರೀ (26) ಅವರು ಬಾವಿಗೆ ಬಿದ್ದಿದ್ದರೂ, ಬಾವಿಗೆ ಅಳವಡಿಸಿದ ಪೈಪ್ ಅನ್ನು ಹಿಡಿದುಕೊಂಡು ಜೀವವುಳಿಸಿಕೊಂಡಿದ್ದಾರೆ.
ಪ್ರಕಾಶ್ ಅವರಿಗೆ ಮುಂಗೋಪದ ಸ್ವಭಾವವಿದ್ದು, ಕೆಲವೊಮ್ಮೆ ಪತಿ ಮತ್ತು ಪತ್ನಿಯ ನಡುವೆ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದ್ದು, ಶುಕ್ರವಾರ ರಾತ್ರಿ ಪ್ರಕಾಶ್ ಮತ್ತು ಆಶಾಶ್ರೀ ಕ್ಷುಲ್ಲಕ ವಿಚಾರದಲ್ಲಿ ಜಗಳ ನಡೆದು ಪ್ರಕಾಶ್ ಬಾವಿಗೆ ಹಾರಿದ್ದು, ಪತಿ ಬಾವಿಗೆ ಬಿದ್ದಿರುವುದರಿಂದ ಪತ್ನಿಯೂ ಬಾವಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಬಾವಿಗೆ ಬಿದ್ದ ಪ್ರಕಾಶ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರೆ, ಅವರ ಪತ್ನಿ ಆಶಾಶ್ರೀ ಬಾವಿಯೊಳಗಿದ್ದ ಪೈಪ್ ಸಹಾಯದಿಂದ ಜೀವವುಳಿಸಿಕೊಂಡಿದ್ದಾರೆ. ಪ್ರಕಾಶ್ ಅವರ ಮನೆಯ ಮತ್ತೊಂದು ಬದಿಯಲ್ಲಿರುವ ಬಾಡಿಗೆದಾರ ಬೆಳಗ್ಗೆ ಆರರ ಸುಮಾರಿಗೆ ಎದ್ದು ಬಾಗಿಲು ತೆಗೆಯುವಾಗ ಬಾವಿಯಿಂದ ಬೊಬ್ಬೆ ಕೇಳಿದ್ದು, ಅವರು ಬಂದು ನೋಡಿದಾಗ ಆಶಾಶ್ರೀ ಬಾವಿಯಲ್ಲಿ ಪೈಪ್ ಅನ್ನು ಹಿಡಿದುಕೊಂಡು ರಕ್ಷಣೆಗಾಗಿ ಮೊರೆ ಇಡುತ್ತಿದ್ದರು. ಕೂಡಲೇ ಸ್ಥಳೀಯರ ಸಹಾಯದಿಂದ ಆಶಾಶ್ರೀಯನ್ನು ಬಾವಿಯಿಂದ ರಕ್ಷಿಸಿಸಲಾಗಿದೆ. ಘಟನೆಯಿಂದಾಗಿ ದಿಘ್ಬ್ರಮೆಗೊಂಡಿರುವ ಆಶಾಶ್ರೀ ಅವರಲ್ಲಿ ಪತಿ ಪ್ರಕಾಶ್ ಅವರ ಬಗ್ಗೆ ವಿಚಾರಿಸಿದಾಗ ಅವರಿಂದ ಗೊಂದಲಮಯ ಹೇಳಿಕೆ ನೀಡಿರುವುದರಿಂದ ಸರಿಯಾದ ಮಾಹಿತಿ ಲಭ್ಯವಾಗಿರಲಿಲ್ಲ. ಪ್ರಕಾಶ್‌ಗಾಗಿ ಅವರು ಕೆಲ ಕಾಲ ಹುಡುಕಾಡಿದರಾದರೂ, ಸಿಗದಿದ್ದಾಗ ಅನುಮಾನ ಬಂದು ಇವರು ಬಾವಿಯಲ್ಲಿದ್ದ ನೀರನ್ನು ಸ್ವಲ್ಪ ಖಾಲಿ ಮಾಡಿ ನೋಡಿದಾಗ ಪ್ರಕಾಶ್ ಅವರ ಮೃತದೇಹ ಬಾವಿಯಲ್ಲಿ ಕಂಡು ಬಂದಿದೆ. ಅಗ್ನಿಶಾಮಕದಳದವರು ಬಂದು ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ.
ಸ್ಥಳಕ್ಕಾಗಮಿಸಿದ ಪುತ್ತೂರು ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ ಪರಿಶೀಲನೆ ನಡೆಸಿದ್ದು, ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.