×
Ad

ಎಕ್ಸ್‌ಪರ್ಟ್ ಪಿಯು ಕಾಲೇಜಿಗೆ ಮಕ್ಕಳ ಹಕ್ಕುಗಳ ಆಯೋಗದಿಂದ ದಂಡ

Update: 2016-05-28 17:45 IST

ಮಂಗಳೂರು, ಮೇ 28: ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿ ನೀಡಲಾದ ದೂರಿನ ಹಿನ್ನೆಲೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿಗೆ ಮಕ್ಕಳ ಹಕ್ಕುಗಳ ಆಯೋಗವು ದಂಡ ವಿಧಿಸಿದ ಪ್ರಸಂಗ ನಡೆದಿದೆ.

ಕಾಲೇಜಿನಲ್ಲಿ ಟ್ಯೂಶನ್ ನೆಪದಲ್ಲಿ ಮಕ್ಕಳಿಗೆ ಮಾನಸಿಕವಾಗಿ ಹಿಂಸೆ ನೀಡಲಾಗುತ್ತದೆ, ಅಧಿಕ ಶುಲ್ಕ ವಿಧಿಸಲಾಗುತ್ತದೆ ಎಂದು ಆರೋಪಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಮಕ್ಕಳ ಹಕ್ಕುಗಳ ಆಯೋಗಕ್ಕೆ ಕಳೆದ ಎಪ್ರಿಲ್ 24ರಂದು ದೂರು ನೀಡಲಾಗಿತ್ತು. ಈ ಸಂಬಂಧ ಮೇ 27ರಂದು ಆಯೋಗದ ನ್ಯಾಯಾಲಯದಲ್ಲಿ ವಿಚಾರಣೆಯ ಸಂದರ್ಭ ಎಕ್ಸ್‌ಪರ್ಟ್ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿರಲಿಲ್ಲ. ಆಯೋಗದ ಸಮಯ ಹಾಗೂ ದೂರುದಾರರ ಸಮಯವನ್ನು ವಿನಾಕಾರಣ ಹಾಳು ಮಾಡಿದ ವಾದದ ಹಿನ್ನೆಲೆಯಲ್ಲಿ ಆಯೋಗವು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಗೆ 900 ರೂ.ಗಳ ದಂಡವನ್ನು ವಿಧಿಸಿದೆ.

ಜೂನ್ 1ರಂದು ಪ್ರಕರಣದ ವಿಚಾರಣೆ ನಡೆಯಲಿದ್ದು, ಈ ದಿನ ದಂಡವನ್ನು ಕಟ್ಟುವಂತೆ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ ಎಂದು ದೂರುದಾರರಲ್ಲಿ ಓರ್ವರಾದ ಹಾಗೂ ಎಸ್‌ಎಫ್‌ಐನ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ‘ವಾರ್ತಾಭಾರತಿ’ ಪತ್ರಿಕೆಗೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯು, ಎಕ್ಸ್‌ಪರ್ಟ್ ಪಿಯು ಕಾಲೇಜಿನ ಮುಖ್ಯಸ್ಥರು, ಪ್ರಾಂಶುಪಾಲರನ್ನು ಮೊಬೈಲ್ ಹಾಗೂ ಸ್ಥಿರ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದು, ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News