ಭಟ್ಕಳ: ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಎಸ್.ಎಸ್.ಎಲ್.ಸಿ ಫಲಿತಾಂಶ ಅವಲೋಕನ ಸಭೆ
ಭಡ್ಕಳ: ಕಳೆದ ಬಾರಿಗಿಂತ ಈ ಬಾರಿ ಭಟ್ಕಳ ತಾಲೂಕು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಇಳಿಕೆಯಾಗಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿರುವ ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ 2016-17 ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಹಾಗೂ ಕಲಿಕೆ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಈಗಿಂದಲೆ ಕ್ರಿಯಾಯೋಜನೆ ಸಿದ್ದಗೊಳಿಸಕೊಳ್ಳಬೇಕೆಂದು ತಾಲೂಕಿನ ಸರಕಾರಿ, ಅನುದಾನಿತ ಹಾಗು ಅನುದಾನ ರಹಿತ ಪ್ರೌಢಶಾಲಾ ಮುಖ್ಯಸ್ಥರಿಗೆ ಕಿವಿ ಮಾತು ಹೇಳಿದರು.
ಅವರು ಶನಿವಾರ ಇಲ್ಲಿನ ಸಾಗರ ರಸ್ತೆಯಲ್ಲಿರುವ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಲಯದಲ್ಲಿ ತಾಲೂಕಿನ ಸರ್ವ ಪ್ರೌಢಶಾಲೆಗಳ ಮುಖ್ಯಾದ್ಯಾಪಕರ ಅವಲೋಕನ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಶೇ.100ಫಲಿತಾಂಶ ನೀಡಿದ ಸರ್ಕಾರಿ ಶಾಲೆ ಹಾಗೂ ಅನುದಾನರಹಿತ ಶಾಲೆಗಳ ಮುಖಸ್ಥರನ್ನು ಅಭಿನಂದಿಸಿದ ಅವರು ನಮ್ಮ ಗುರಿಯಂತೆ ಫಲಿತಾಂಶ ಬರದಿದ್ದರೂ ಗುಣಮಟ್ಟದಲ್ಲಿ ನಮ್ಮ ತಾಲೂಕು ಮುಂದಿದೆ. ಕೆಲವು ಅನುದಾನಿ ಪ್ರೌಢಶಾಲೆಗಳಲ್ಲಿನ ಕಳಪೆ ಫಲಿತಾಂಶದಿಂದ ತಾಲೂಕಿನ ಫಲಿತಾಂಶ ಹಿಂಬೀಳಲು ಕಾರಣವಾಗಿದ್ದು ಮುಂಬುರುವ ಶೈಕ್ಷಣಿಕ ವರ್ಷದಿಂದಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಗೊಳಿಸಿಕೊಳ್ಳಲು ಕ್ರಿಯಾಯೋಜನೆ ರೂಪಿಸಿಕೊಂಡು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಸೇರಿದಂತೆ ಹಲವಾರು ಯೋಜನೆಗಳನ್ನು ರೂಪಿಸಿಕೊಳ್ಳುವಂತೆ ಮುಖ್ಯೋಪಾದ್ಯಾಯರುಗಳಿಗೆ ತಿಳಿ ಹೇಳಿದರು.
ಶಾಲೆಗಲ್ಲಿ ಲೈಂಗಿಕ ದೌರ್ಜನ್ಯ ತಡೆಗಟ್ಟುವಲ್ಲಿ ಸಮಿತಿಗಳನ್ನು ಮಾಡಿಕೊಂಡು ಹೆಣ್ಣುಮಕ್ಕಳ ಸುರಕ್ಷತೆಯಡೆ ಹೆಚ್ಚಿನ ಗಮನ ಹರಿಸಬೇಕು, ಸ್ವಚ್ಚತೆ, ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿ ಎಲ್ಲಿ ಕುಡಿಯುವ ನೀರಿನ ಅಭಾವ ಇದೆಯೋ ಅಲ್ಲಿನ ಗ್ರಾ.ಪಂ. ಗಮನಕ್ಕೆ ತಂದು ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಮುಖ್ಯೋಪಾಧ್ಯಾಯರ ಕರ್ತವ್ಯವಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.