×
Ad

ಇಂಜಿನಿಯರಿಂಗ್ 2ನೆ ರ್ಯಾಂಕ್ ಪಡೆದ ನಿರಂಜನ್‌ಗೆ ಸಂಶೋಧನೆಯಲ್ಲಿ ಆಸಕ್ತಿ

Update: 2016-05-28 18:55 IST

ಮಂಗಳೂರು, ಮೇ 28: ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ 2ನೆ ರ್ಯಾಂಕ್ ಪಡೆದಿರುವ ನಿರಂಜನ್ ಕಾಮತ್ ಎಂಎಸ್ಸಿ ಮಾಡಿ, ಪಿಎಚ್‌ಡಿ ಪದವಿ ಪಡೆದು ಭೌತಶಾಸ್ತ್ರ ಕ್ಷೇತ್ರದಲ್ಲಿ ಸಂಶೋಧನೆ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಎಕ್ಸ್‌ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಹಾಗೂ ಗುಜರಾತ್‌ನ ಟಾಟಾ ಕೆಮಿಕಲ್‌ನಲ್ಲಿ ಉದ್ಯೋಗಿಯಾಗಿರುವ ನರಸಿಂಹ ಕಾಮತ್ ಪುತ್ರನಾಗಿರುವ ನಿರಂಜನ ಕಾಮತ್, ತನ್ನ ಈ ಸಾಧನೆಗೆ ತನ್ನ ಸ್ವಂತ ಶ್ರಮ ಹಾಗೂ ಪೋಷಕರ ಬೆಂಬಲ ಶೇ. 50ರಷ್ಟು ಪ್ರಮುಖ ಕಾರಣವಾಗಿದ್ದರೆ, ಉಳಿದಂತೆ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ವ್ಯವಸ್ಥೆ ಕಾರಣ ಎಂದು ಅಭಿಪ್ರಾಯಿಸಿದ್ದಾರೆ.

‘‘ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಿಯುವ ಬಯಕೆ ಇರುವುದರಿಂದ ಇಂಜಿನಿಯರಿಂಗ್ ಕಾಲೇಜಿಗೆ ನಾನು ಸೇರುವುದಿಲ್ಲ. ಕಳೆದ ಎರಡು ವರ್ಷದಿಂದ ದಿನವೊಂದಕ್ಕೆ ಕೇವಲ 6-7 ಗಂಟೆ ನಿದ್ದೆ ಮಾಡಿ, ಪರಿಶ್ರಮ ಪಟ್ಟಿದ್ದರ ಫಲ ದೊರಕಿದೆ  ಎನ್ನುತ್ತಾರೆ ನಿರಂಜನ ಕಾಮತ್.

ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ದೃಷ್ಟಿಯಿಂದ ತಾಯಿ ರಂಜನಿ ಕಾಮತ್ ಜತೆ ಮಂಗಳೂರಿಗೆ ಬಂದು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿಗೆ ಸೇರಿದೆ. ಎರಡು ವರ್ಷಗಳ ಹಿಂದಿನ ತೀರ್ಮಾನ ಈಗ ತೃಪ್ತಿ ನೀಡಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

‘‘ಮಗ ಒಂದನೇ ರ್ಯಾಂಕ್ ಬರಬಹುದು ಎಂದು ಹೇಳುತ್ತಿದ್ದ. ಆದರೆ ನಾವು 5ನೇ ರ್ಯಾಂಕ್‌ನೊಳಗೆ ಬರಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಎರಡನೇ ರ್ಯಾಂಕ್ ದೊರೆತಿದೆ. ಮೂಲ ವಿಜ್ಞಾನದಲ್ಲಿ ಶಿಕ್ಷಣ ಮುಂದುವರಿಸಬೇಕು ಎಂಬುದು ಆತನ ಕನಸು. ಆ ಕನಸಿಗೆ ಪೂರಕವಾಗಿ ನಾವು ನಿಲ್ಲುತ್ತೇವೆ’’ ಎನ್ನುತ್ತಾರೆ ನಿರಂಜನ್ ಕಾಮತ್ ತಾಯಿ ರಂಜನಿ ಕಾಮತ್.

ಮೂಲತ: ಮಂಗಳೂರಿನ ಕೊಡಿಯಾಲ್‌ಗುತ್ತು ನಿವಾಸಿಯಾದ ನರಸಿಂಹ ಕಾಮತ್ ಹಾಗೂ ರಂಜನಿ ಕಾಮತ್ ದಂಪತಿ ಪುತ್ರ ನಿರಂಜನ ಕಾಮತ್ ಹುಟ್ಟಿರುವುದು ಮಂಗಳೂರಿನಲ್ಲಾದರೂ ಶಿಕ್ಷಣ ಪಡೆದಿರುವುದು ಗುಜರಾತ್‌ನಲ್ಲಿ. ಇವರು ಎಸೆಸೆಲ್ಸಿಯಲ್ಲಿ ಶೇ. 95 ಅಂಕಗಳನ್ನು ಪಡೆದಿದ್ದರು.

                                                              ನೇಹಾಗೆ ವೈದ್ಯೆಯಾಗುವಾಸೆ

                                                         

‘‘ವೈದ್ಯೆಯಾಗಬೇಕೆಂಬುದು ನನ್ನ ಕನಸಾಗಿದೆ. ಅದಕ್ಕಾಗಿ ನಿರಂತರವಾಗಿ ಪ್ರಯತ್ನ ಪಡುತ್ತಿದ್ದೆ. ಸಿಇಟಿಯಲ್ಲಿ 15 ರ್ಯಾಂಕ್‌ನೊಳಗೆ ಬರಬಹುದೆಂಬ ನಿರೀಕ್ಷೆ ಇತ್ತು. 10ನೆ ರ್ಯಾಂಕ್ ಬಂದಿರುವುದು ತುಂಬಾ ಖುಷಿ ನೀಡಿದೆ’’ ಎನ್ನುತ್ತಾರೆ ಸಿಇಟಿ ವೈದ್ಯಕೀಯದಲ್ಲಿ 10ನೇ ರ್ಯಾಂಕ್ ಪಡೆದ ನೇಹಾ ಎಸ್.ಸಿ.

ಕಾಲೇಜಿನ ಪಠ್ಯದೊಂದಿಗೆ ತಾನು ಪಡೆದುಕೊಂಡ ಎಕ್ಸ್‌ಪರ್ಟ್ ಪೋಸ್ಟಲ್ ಕೋಚಿಂಗ್‌ನ ಅಧ್ಯಯನ ಸಾಧನಗಳು ನನಗೆ ಪೂರಕವಾಯಿತು. ಬೆಂಗಳೂರಿನ ಬಿಎಂಸಿ ಅಥವಾ ಎಂಎಂಸಿಯಲ್ಲಿ ಎಂಬಿಬಿಇಎಸ್ ಮಾಡಬೇಕು ಎಂಬ ಗುರಿ ಇದೆ ಎನ್ನುವ ನೇಹಾ ಮೂಲತ: ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರು. ತಂದೆ ಡಾ. ಛಾಯಾಪತಿ ಎಸ್.ಟಿ. ಹಾಗೂ ತಾಯಿ ಸುಧಾ.

                                            ಮೆದುಳಿನ ಕಾರ್ಯಾಚರಣೆ ಬಗ್ಗೆ ಅರಿಯುವಾಸೆ: ವೈಷ್ಣವಿ ಬಲ್ಲಾಳ್

                                                     

‘‘ನನಗೆ ಬಾಲ್ಯದಿಂದಲೇ ಮೆದುಳಿನ ಕಾರ್ಯಾಚರಣೆ ಬಗ್ಗೆ ಸಾಕಷ್ಟು ಕುತೂಹಲ ಆಸಕ್ತಿ. ಹಾಗಾಗಿ ನಾನು ನ್ಯೂರೋ ಸರ್ಜನ್ ಆಗಬೇಕು ಎಂಬ ಕನಸು ಹೊಂದಿದ್ದೇನೆ. ಮುಂದೆ ಎಂಬಿಬಿಎಸ್ ಮಾಡಿ ನ್ಯೂರೋ ಸರ್ಜನ್ ಆಗುವ ಗುರಿಯೊಂದಿಗೆ ನಿರಂತರ ಶ್ರಮ ಪಡುತ್ತಿದ್ದೇನೆ. ಇದೀಗ ನೀಟ್ 2 ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದೇನೆ. ದೇಶದ ಅತ್ಯುತ್ತಮ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಅಧ್ಯಯನ ನಡೆಸುವ ಗುರಿಯನ್ನು ಹೊಂದಿದ್ದೇನೆ ಎನ್ನುತ್ತಾರೆ ಐಎಸ್‌ಎಂಎಚ್‌ನಲ್ಲಿ 7, ಮೆಡಿಕಲ್‌ನಲ್ಲಿ 22, ಎಂಜಿನಿಯರಿಂಗ್‌ನಲ್ಲಿ 19ನೇ ರ್ಯಾಂಕ್ ಪಡೆದ ವೈಷ್ಣವಿ ಬಲ್ಲಾಳ್.

ಜನರಲ್ ಸರ್ಜನ್ ಡಾ. ರಾಜೇಶ್ ಬಳ್ಳಾಲ್ ಮತ್ತು ಕಲಾವಿದೆ ವಸುಂಧರಾ ಬಲ್ಲಾಳ್‌ರವರ ಪುತ್ರಿಯಾಗಿರುವ ವೈಷ್ಣವಿ ಬಲ್ಲಾಳ್, ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಡ್ರಮ್ಸ್, ಸ್ಕೇಟಿಂಗ್ ಹಾಗೂ ಚಿತ್ರಕಲೆಯ ಹವ್ಯಾಸವನ್ನೂ ಹೊಂದಿದ್ದಾರೆ.

ವೈಷ್ಣವಿ ಬಲ್ಲಾಳ್ ಪಿಯುಸಿ ಪರೀಕ್ಷೆಯಲ್ಲಿ ಪಿಸಿಎಂಬಿ ಹಾಗೂ ಸಂಸ್ಕೃತದಲ್ಲಿ ಹೀಗೆ ಐದು ವಿಷಯಗಳಲ್ಲಿ ತಲಾ 100 ಅಂಕಗಳನ್ನು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News