ಬೆಳ್ತಂಗಡಿ : 13 ವರ್ಷದ ಬಾಲಕಿಗೆ ಅತ್ಯಾಚಾರ ಎಸಗಿದ ಮಂತ್ರವಾದಿ
ಬೆಳ್ತಂಗಡಿ,ಮೇ 28 : ತಂದೆ ತಾಯಿ ಸೇರಿ ಮಗಳನ್ನು ಚಿಕಿತ್ಸೆಗೆಂದು ಮಂತ್ರವಾದಿ ಹಾಗೂ ನಾಟಿ ವೈಧ್ಯನಾಗಿರುವ ವ್ಯಕ್ತಿಯಲ್ಲಿಗೆ ಕರೆದೊಯ್ದ ವೇಳೆ ಅವರನ್ನು ಮನೆಯ ಹೊರಗೆ ನಿಲ್ಲಿಸಿ 13 ವರ್ಷದ ಬಾಲಕಿಯನ್ನು ಮನೆಯೊಳಗೆ ಕರೆದೊಯ್ದು ಅತ್ಯಾಚಾರವೆಸಗಿದ ಅಮಾನುಷ ಘಟನೆ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ನಡೆದಿದೆ. ಆರೋಪಿಯ ವಿರುದ್ದ ಫೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಶನಿವಾರ ಬೆಳಿಗ್ಗೆ ಅನಾರೋಗ್ಯದ ಕಾರಣ ಬಾಲಕಿಯನ್ನು ಕರೆದುಕೊಂಡು ಮದ್ದು ಕೊಡಿಸಲು ತಂದೆ ತಾಯಿಯರು ನಿಡ್ಲೆ ಗ್ರಾಮದ ಗಾತ್ರಾಂಡ ನಿವಾಸಿ ಶೇಖರ ನಲ್ಕೆ ಎಂಬವರ ಮನೆಗೆ ಹೋಗಿದ್ದಾರೆ. ಈತ ನಾಟಿ ವೈಧ್ಯ ಹಾಗೂ ಮಂತ್ರವಾದಿಯಾಗಿ ಇಲ್ಲಿ ಪರಿಚಿತನಾಗಿದ್ದಾನೆ. ಮದ್ದಿಗಾಗಿ ಬಂದ ಬಾಲಕಿಯನ್ನು ಮದ್ದು ಕೊಡುವ ಹಾಗೂ ನೂಲು ಕಟ್ಟುವ ನೆಪದಲ್ಲಿ ಶೇಖರ ಮನೆಯೊಳಗೆ ಕರೆದೊಯ್ದಿದ್ದಾನೆ ತಂದೆ ತಾಯಿಯರನ್ನು ಹೊರಗೆಯೆ ನಿಲ್ಲಿಸಿದ್ದಾನೆ. ನೇರವಾಗಿ ಬಾಲಕಿಯನ್ನು ಮನೆಯ ಹಿಂದುಗಡೆಯಿರುವ ಬಾತ್ ರೂಮಿಗೆ ಕರೆದೊಯ್ದಿರುವ ಆರೋಪಿ ಅಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಹಾಗೂ ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ಬಾಲಕಿ ಅಳುತ್ತಾ ಮನೆಯ ಹಿಂಭಾಗದಿಂದ ಬರುತ್ತಿರುವುದನ್ನು ನೋಡಿ ತಂದೆ ತಾಯಿ ವಿಚಾರಿಸಿದಾಗ ಆಕೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ ಕೂಡಲೆ ಬಾಲಕಿಯನ್ನು ಧರ್ಮಸ್ಥಳ ಠಾಣೆಗೆ ಕರೆತರಲಾಗಿದೆ. ಎಂದು ಧರ್ಮಸ್ಥಳ ಪೋಲೀಸರಿಗೆ ನೀಡಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ. ಬಾಲಕಿಯ ವೈಧ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದ್ದು ಪ್ರಕರಣ ದಾಖಲಿಸಲಾಗಿದೆ.
ಶೇಖರ ನಲ್ಕೆ ಮಂತ್ರವಾದಿಯಾಗಿದ್ದು ತನ್ನ ಬಳಿ ಬರುವವರಿಗೆ ಕುಡಿತದ ಚಟ ಬಿಡಿಸುವುದಕ್ಕೆ ಹಾಗೂ ಇತರೇ ರೋಗಗಳಿಗೆ ನೂಲು ಕಟ್ಟುತ್ತಿದ್ದ ಕೆಲವು ನಾಟಿ ಮದ್ದುಗಳೂ ಈತನಿಗೆ ತಿಳಿದಿದೆ ಎನ್ನಲಾಗಿದೆ. ತಾನು ಮಂತ್ರವಾದಿಯೆಂದು ಜನರನ್ನು ವಂಚಿಸುತ್ತಾ ಬರುತ್ತಿದ್ದ ಎನ್ನಲಾಗಿದೆ. ಆರೋಪಿಗೆ ಮದುವೆಯಾಗಿದ್ದು ಒಂದು ಮಗುವು ಇದೆ. ಘಟನೆ ನಡೆದ ಸಂದರ್ಭ ಈತನ ಪತ್ನಿ ಮನೆಯಲ್ಲಿರಲಿಲ್ಲ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪೋಲೀಸರು ಆರೋಪಿ ಶೇಖರ ನಲ್ಕೆಯನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. ಹಿರಿಯ ಪೋಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.