×
Ad

ಕರ್ನಾಟಕ ಲೋಕ ಸೇವಾ ಅಯೋಗಕ್ಕೆ ಶ್ಯಾಮ್ ಭಟ್ ಹೆಸರು ಶಿಫಾರಸು ಸಮಂಜಸವಲ್ಲ :ಜನಾರ್ದನ ಪೂಜಾರಿ

Update: 2016-05-28 21:21 IST

ಮಂಗಳೂರು.ಮೆ.28:ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಹುದ್ದೆಗೆ ಸರಕಾರ ಭೃಷ್ಟಾಚಾರದ ಆರೋಪ ಹೊತ್ತಿರುವ ಬಿಡಿಎ ಆಯುಕ್ತ ಶ್ಯಾಮ್ ಭಟ್‌ರವರನ್ನು ಶಿಫಾರಸು ಮಾಡಿರುವುದು ಸಮಂಜಸವಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಸುದ್ದಿಗೋಷ್ಠಿಯಲ್ಲಿಂದು ಟೀಕಿಸಿದ್ದಾರೆ.

   ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಬಳಿಕ ತಮ್ಮ ಬದ್ಧತೆಯನ್ನು ಮರೆತಂತೆ ಕಾಣುತ್ತದೆ.ಸರಕಾರಕ್ಕೆ ಮುಜುಗರವಾಗುವುದನ್ನು ತಪ್ಪಿಸಬೇಕಾದರೆ ತಕ್ಷಣ ಕರ್ನಾಟಕ ಲೋಕ ಸೇವಾ ಆಯೋಗಕ್ಕೆ ಶ್ಯಾಮ್ ಭಟ್‌ರನ್ನು ನೇಮಕಮಾಡಲು ನೀಡಿರುವ ಶಿಫಾರಸು ಪತ್ರವನ್ನು ಹಿಂದಕ್ಕೆ ಪಡೆಯಬೇಕು ಎಂದು ಜನಾರ್ದನ ಪೂಜಾರಿ ಸಲಹೆ ನೀಡಿದ್ದಾರೆ.

         ಸರಕಾರ ಎತ್ತಿನ ಹೊಳೆ ಯೋಜನೆಯನ್ನು ಕೈ ಬಿಡದೆ ಕಾಮಗಾರಿಯನ್ನು ಮುಂದುವರಿಸುತ್ತಿದೆ.ಅಲ್ಲಿ ಕಿಂಡಿ ಅಣೆ ಕಟ್ಟು ನಿರ್ಮಿಸುವ ಬದಲು ತಡೆಗೋಡೆ ನಿರ್ಮಿಸುತ್ತಿದೆ.ಹಸಿರು ಪೀಠದಲ್ಲಿ ನಡೆಯುತ್ತಿರುವ ಕಾನೂನು ಹೋರಾಟ ಒಂದು ಕಡೆ ನಡೆಯುತ್ತಿದೆ.ಹಸಿರು ಪೀಠದಲ್ಲಿ ಹಿಂದಿನ ತಜ್ಞ ರಾಜಿನಾಮೆ ನೀಡಿರುವ ಕಾರಣ ಈಗಿನ ತಜ್ಞರಾಗಿ ಪಿ.ಎಸ್.ರಾವ್ ನೇಮಕ ಗೊಂಡಿದ್ದಾರೆ.ಒಂದು ಬಾರಿ ಹಸಿರು ಪೀಠದಲ್ಲಿ ವಾದ ಮಂಡನೆ ಮುಕ್ತಾಯಗೊಂಡಿದ್ದರೂ ಹೊಸ ತಜ್ಞರನ್ನು ಪೀಠಕ್ಕೆ ನೇಮಕ ಮಾಡಿರುವ ಕಾರಣ ಮಗದೊಮ್ಮೆ ಪೀಠದಲ್ಲಿ ವಾದ ಮಂಡನೆಯಾಗಬೇಕಾಗುತ್ತದೆ.ಇದಕ್ಕೆ ಸಾಕಷ್ಟು ಸಮಯ ಮತ್ತು ವೆಚ್ಚವೂ ತಗುಲುತ್ತದೆ.ಸರಕಾರ ಈ ಬಗ್ಗೆ ಹಸಿರು ಪೀಠದಲ್ಲಿ ಪ್ರಕರಣ ದಾಖಲಿಸಲು ಸರಕಾರ ಎಲ್ಲಾ ಸವಲತ್ತುಗಳನ್ನು ನೀಡಬೇಕು ಎಂದು ಜನಾರ್ದನ ಪೂಜಾರಿ ತಿಳಿಸಿದರು.

         ಬಜೆಪಿ ಇಬ್ಬಗೆಯ ನೀತಿ:-ದೇಶದಲ್ಲಿ ಮಾಜಿ ಪ್ರಧಾನಿ ನರಸಿಂಹರಾಯರು ಪ್ರಧಾನಿಯಾಗಿದ್ದಾಗ ಸರಕಾರದ ಯೋಜನೆಗಳ ಜೊತೆ ಪ್ರಧಾನಿಯವರ ಪೋಟೊ ಹಾಕುವುದನ್ನು ಟೀಕಿಸುತ್ತಿದ್ದ ಬಿಜೆಪಿ,ಆರ್‌ಎಸ್‌ಎಸ್ ಈಗ ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ಯೋಜನೆಗಳಲ್ಲಿಯೂ ತಮ್ಮ ಪೋಟೊ ಹಾಕಿಕೊಳ್ಳುತ್ತಿರುವ ಬಗ್ಗೆ ವೌನವಹಿಸಿದ್ದಾರೆ.ಪ್ರಧಾನ ಮಂತ್ರಿ ತಮ್ಮ ಸಚಿವ ಸಂಪುಟದ ಮೇಲೆ ನಿಯಂತ್ರಣ ಹೊಂದಿಲ್ಲ .ಬಿಜೆಪಿ ಯ ಮುಸ್ಲಿಮ್ ದ್ವೇಷದ ಚಟುವಟಿಕೆಗಳನ್ನು ನಿಯಂತ್ರಿಸಲು ಪ್ರಧಾನಿಗೆ ಸಾಧ್ಯವಾಗುತ್ತಿಲ್ಲ.ಬಿಜೆಪಿ,ಸಂಘಪರಿವಾರದ ಮುಸ್ಲಿಂ ದ್ವೇಷದ ವಿರುದ್ಧ ಪ್ರಧಾನಿ ವೌನವಹಿಸಿದ್ದಾರೆ.ದೇಶದ ಉನ್ನತ ಮಟ್ಟದ ತನಿಖಾ ಸಂಸ್ಥೆಯಾದ ಎನ್‌ಐಎಯನ್ನು ಕೇಂದ್ರದ ಪ್ರಧಾನಿ ದುರ್ಬಲಗೊಳಿಸಲು ಹೊರಟಿದ್ದಾರೆ.ದೇಶದ್ರೋಹದ ಆರೋಪ ಹೊತ್ತಿರುವವರನ್ನು ಬಿಡುಗಡೆಗೊಳಿಸುವ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.

          ಪೊಲೀಸರ ಬೇಡಿಕೆಗಳನ್ನು ಮಾನವೀಯತೆಯಿಂದ ಪರಿಗಣಿಸಿ:-ರಾಜ್ಯದಲ್ಲಿ ಪೊಲೀಸರು ಪಡೆಯುತ್ತಿರುವ ವೇತನ ಆಂಧ್ರ,ತೆಲಂಗಾಣ ರಾಜ್ಯಗಳಿಗೆ ಹೊಲಿಸಿದರೆ ಕಡಿಮೆ (ಈ ರಾಜ್ಯಗಳಲ್ಲಿ ಪೊಲೀಸರಿಗೆ ಮಾಸಿಕ 35ಸಾವಿರ ಸಂಬಳ ದೊರೆಯುತ್ತಿದೆ.)ಪ್ರಪಂಚದ ಕೆಲವು ದೇಶಗಳಲ್ಲಿ ಪೊಲೀಸರಿಗೆ (ಲಂಡನ್‌ನಲ್ಲಿ ಪೊಲೀಸರಿಗೆ ಮೂರೂವರೆ ಲಕ್ಷ ಮಾಸಿಕ ವೇತನ ದೊರೆಯುತ್ತಿದೆ)ಉತ್ತಮ ವೇತನ ಸೌಲಭ್ಯ ದೊರೆಯುತ್ತಿದೆ.ಆದರೆ ರಾಜ್ಯದಲ್ಲಿ ಪೊಲೀಸ್ ಇಲಾಖೆ ಸೇರಿ 10 ವರ್ಷ ಸೇವೆ ಸಲ್ಲಿಸಿದ ಬಳಿಕ ಅವರಿಗೆ 18 ಸಾವಿರ ರೂ ಸಂಬಳ ನೀಡಲಾಗುತ್ತಿದೆ .ಇದನ್ನು ಹೆಚ್ಚಿಸಬೇಕು ಎನ್ನುವ ಬೇಡಿಕೆಯ ಬಗ್ಗೆ ಸರಕಾರ ಸೂಕ್ತವಾಗಿ ಸ್ಪಂಧಿಸಬೇಕಾಗಿದೆ.ಅವರಿಗೆ ವಸತಿ ಇತರ ಸೌಲಭ್ಯಗಳನ್ನು ನೀಡುವಲ್ಲಿ ಗಮನಹರಿಸಬೇಕಾಗಿದೆ.ಅವರು ಮುಷ್ಕರ ನಡೆಸಲು ಹೊರಟಾಗ ಅವರ ಮೇಲೆ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಹೇಳಿಕೆ ನೀಡುವ ಬದಲು ಅವರ ನ್ಯಾಯ ಬದ್ಧವಾದ ಬೇಡಿಕೆಗಳನ್ನು ಮಾನವೀಯ ನೆಲೆಯಲ್ಲಿ ಪರಿಹರಿಸಲು ಸರಕಾರ ಮುಂದಾಗಬೇಕು ಎಂದು ಜನಾರ್ದನ ಪೂಜಾರಿ ಸಲಹೆ ನೀಡಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಹಾಬಲ ಮಾರ್ಲ, ಟಿ.ಕೆ.ಸುಧೀರ್, ಉಮೇಶ್ಚಂದ್ರ,ರಾಧಾಕೃಷ್ಣ,ಅಜಿತ್ ಕುಮಾರ್,ರಮಾನಂದ ಪೂಜಾರಿ,ಕರುಣಾಕರ ಶೆಟ್ಟಿ,ನಿರಜ್ ಪಾಲ್,ಚೇತನ ಬೆಂಗ್ರೆ,ಸ್ಟಾನಿ ಆಳ್ವಾರೀಸ್,ಮೋಹನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News