ಸಂತ್ರಸ್ತರಿಗೆ ಪರಿಹಾರಧನ ವಿತರಿಸುವಲ್ಲಿ ವಿಳಂಬ : ಬಿಜೆಪಿ ಮುಖಂಡರಿಂದ ಬಂಟ್ವಾಳ ತಹಶೀಲ್ದಾರ್ ಕಛೇರಿಗೆ ಮುತ್ತಿಗೆ
ವಿಟ್ಲ : ಬಂಟ್ವಾಳ ತಾಲೂಕಿನಾದ್ಯಂತ ಮೇ 17 ರಂದು ಬೀಸಿದ ಬಿರುಗಾಳಿಗೆ ಮನೆ, ಅಡಿಕೆ ತೋಟ ಮೊದಲಾದ ಅಪಾರ ಪ್ರಮಾಣದ ಸೊತ್ತು ನಾಶಗೊಂಡ ಸಂತ್ರಸ್ತರಿಗೆ ಪರಿಹಾರಧನ ವಿತರಿಸುವಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಬಂಟ್ವಾಳ ತಹಶೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ ಆನಂದ ಅವರು ಪ್ರಕೃತಿ ವಿಕೋಪದಲ್ಲಿ ನೈಜ ಸಂಸತ್ರಸ್ತರಾದವರಿಗೆ ಕೂಡಲೇ ಪರಿಹಾರಧನ ವಿತರಿಸಬೇಕು. ಇಲ್ಲದಿದ್ದಲ್ಲಿ ಪರಿಹಾರ ಕೇಳಿ ಸಲ್ಲಿಸಿದ ಅರ್ಜಿಗಳನ್ನು ವಾಪಾಸು ಕೊಡಿ ಎಂದು ಆಗ್ರಹಿಸಿದರು.
ಘಟನೆ ನಡೆದು ಸುಮಾರು 10 ದಿನ ಕಳೆದರೂ ಅರ್ಹರಿಗೆ ತ್ವರಿತ ಪರಿಹಾರ ಧನ ವಿತರಿಸುವಲ್ಲಿ ಕಂದಾಯ ಇಲಾಖೆ ವಿಫಲವಾಗಿದ್ದು, ಅಧಿಕಾರಿಗಳು ರಾಜಕೀಯ ಪ್ರೇರಿತವಾಗಿ ವರ್ತಿಸುತ್ತಿದ್ದಾರೆ ಎಂದು ಜಿ ಪಂ ಸದಸ್ಯ ತುಂಗಪ್ಪ ಬಂಗೇರ ಆರೋಪಿಸಿದರು.
ಪ್ರಮುಖರಾದ ರಾಮದಾಸ್ ಬಂಟ್ವಾಳ, ದೇವಪ್ಪ ಪೂಜಾರಿ, ರೊನಾಲ್ಡ್ ಡಿಸೋಜ, ಸದಾನಂದ ನಾವೂರು, ವಿಜಯ ನಾವೂರು, ಯೋಗೀಶ ಪೂಜಾರಿ, ಜನಾರ್ದನ ಪೂಜಾರಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ರಾಜಕೀಯ ಬೇಳೆ ಬೇಯಿಸುವ ಪ್ರತಿಭಟನೆ : ಕಾಂಗ್ರೆಸ್ ತಾಲೂಕಿನಲ್ಲಿ ಮೇ 17 ರಂದು ಬೀಸಿದ ಬಿರುಗಾಳಿಯ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರು ಬೆಂಗಳೂರಿನಲ್ಲಿದ್ದರೂ ತಕ್ಷಣ ಮಂಗಳೂರು ಸಹಾಯಕ ಆಯುಕ್ತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಕ್ಷಣದಿಂದಲೇ ಸಂತ್ರಸ್ತರ ಬಳಿಗೆ ತೆರಳಿ ಪರಿಶೀಲನೆ ನಡೆಸಬೇಕು. ಈ ಬಗ್ಗೆ ಶೀಘ್ರ ವರದಿ ತಯಾರಿಸಿ ತ್ವರಿತ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಕಂದಾಯ ಅಧಿಕಾರಿಗಳಿಗೆ ಸೂಚಿಸುವಂತೆ ಆದೇಶ ನೀಡಿದ್ದರು.ಸಚಿವರ ಆದೇಶಕ್ಕೆ ಸ್ಪಂದಿಸಿದ ಎಸಿ ಅವರು ಮರುದಿವಸ ಬೆಳಿಗ್ಗೆಯೇ ಘಟನಾ ಸ್ಥಳಗಳಿಗೆ ಖುದ್ದು ಹಾಜರಾಗಿ ಪರಿಶೀಲನೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಲು ನೇತೃತ್ವ ನೀಡಿದ್ದರು.
ಬಿರುಗಾಳಿಗೆ ಸಂತ್ರಸ್ತರಾದವರ ನೆರವಿಗೆ ಧಾವಿಸಿದ ಸಚಿವ ರೈ ಅವರು ತಕ್ಷಣ ಸರಕಾರದಿಂದ ಪರಿಹಾರ ಮೊತ್ತವನ್ನೂ ಬಿಡುಗಡೆಗೊಳಿಸಿ, ವಿತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಮೂರು ಹಂತಗಳಲ್ಲಿ ಒಟ್ಟು 37.19 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಸಂತ್ರಸ್ತರಿಗೆ ಸಚಿವರು ವಿತರಿಸಿದ್ದಾರೆ. ಇನ್ನುಳಿದ ಸಂತ್ರಸ್ತರಿಗೆ ಮುಂದಿನ ಒಂದೆರಡು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪರಿಹಾರ ವಿತರಿಸುವ ಪ್ರಕ್ರಿಯೆಗಳೂ ಭರದಿಂದ ಸಾಗಿದೆ.
ಸಚಿವರ ಹಾಗೂ ಕಾಂಗ್ರೆಸ್ ಸರಕಾರದ ಈ ಎಲ್ಲಾ ಸಾಧನೆಗಳನ್ನು ಕಂಡು ಸಹಿಸದ ಬಿಜೆಪಿಗರು ಕೈಲಾಗವ ಮೈ ಪರಚಿಕೊಂಡ ಎಂಬ ಗಾದೆ ಮಾತಿನಂತೆ ಚಡಿಪಡಿಕೆ ಆರಂಭವಾಗಿ ಇದೀಗ ರಾಜಕೀಯ ಕಾರಣಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಮುಖರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.