ಆರ್ಥಿಕ ಹಿಂದುಳಿದವರಿಗೆ ಕಾನೂನು ನೆರವಿಗೆ ಚಿಂತನೆ: ಎಸ್.ಪಿ.ಚಂಗಪ್ಪ
ಮಂಗಳೂರು, ಮೇ 28: ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಆರೋಪಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾನೂನು ನೆರವು ನೀಡುವ ಅಗತ್ಯವಿದ್ದು, ಈ ಬಗ್ಗೆ ಚಿಂತಿಸಲಾಗುವುದು ಎಂದು ದ.ಕ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚಂಗಪ್ಪ ತಿಳಿಸಿದ್ದಾರೆ.
ಅವರು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಐಓ) ದ.ಕ. ಜಿಲ್ಲಾ ಸಮಿತಿ ವತಿಯಿಂದ ನಗರದ ಖಾಸಗಿ ಹೊಟೇಲ್‌ನಲ್ಲಿ ಇಂದು ಏರ್ಪಡಿಸಲಾದ ಅಝರುದ್ದೀನ್ ಪಿಲಕೊಡನ್ ನಿರ್ದೇಶನದ ‘ಅನ್‌ಸಾಲ್ವ್‌ಡ್ ಸ್ಟೋರಿ ಆಫ್ ದಿ ಅನ್‌ಹರ್ಡ್’ ಎಂಬ ಸಾಕ್ಷ ಚಿತ್ರ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ವಿವಿಧ ಕಾರಣಗಳಿಂದಾಗಿ ಜೈಲಿಗಟ್ಟಲ್ಪಟ್ಟಿರುವ ಬಡ ವರ್ಗದ ಹಾಗೂ ಆರ್ಥಿಕವಾಗಿ ಹಿಂದುಳಿದ ಆರೋಪಿಗಳು ಕಾನೂನು ಹೋರಾಟಕ್ಕಾಗಿ ಸಂಕಷ್ಟಪಡಬೇಕಾದ ಪರಿಸ್ಥಿತಿ ಇದೆ. ಕಾನೂನು ನೆರವು ಪಡೆಯಲು ವಕೀಲರಿಗೆ ಹೆಚ್ಚಿನ ಹಣ ಇವರಿಗೆ ಸಾಧ್ಯವಾಗದಿರುವುದರಿಂದ ಕೆಲವು ವಕೀಲರಿಂದ ಇಂತಹ ಆರೋಪಿಗಳು ಅವಗಣನೆಗೆ ಒಳಗಾತ್ತಿದ್ದಾರೆ ಎಂದರು.
ಜೈಲಿನಲ್ಲಿರುವವರ ಪೈಕಿ ಹೆಚ್ಚಿನರು ಅಲ್ಪಸಂಖ್ಯಾತರ, ಹಿಂದುಳಿದ ಮತ್ತು ದಲಿತ ವರ್ಗಕ್ಕೆ ಸೇರಿದವರು. ಇಂತಹವರಿಗೆ ನ್ಯಾಯಾಲಯಗಳಲ್ಲಿ ನ್ಯಾಯ ಸಿಗುವುದು ವಿಳಂಬವಾಗುತ್ತಿದೆ. ಆತನ ನಿರಪಾಧಿತ್ವ ಸಾಬೀತುಪಡಿಸಲು ನ್ಯಾಯಾಲಯಗಳಲ್ಲಿ ವರ್ಷಗಟ್ಟಲೆ ಕಾಯಬೇಕು. ಅಷ್ಟರವರೆಗೆ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿ ಜೈಲಿನಲ್ಲಿ ಮಾನಸಿಕ ಆಘಾತಕ್ಕೊಳಗಾಗುತ್ತಾನೆ. ಆರೋಪ ಮುಕ್ತಗೊಂಡು ಹೊರಬಂದಾಗಲೂ ಸಮಾಜವು ಆತನನ್ನು ಅಗೌರವದಿಂದ ನೋಡುತ್ತದೆ. ರಸ್ತೆ, ಕೇರಿಗಳಲ್ಲಿ ನಡೆದಾಗಲೂ ಅನುಮಾನದಿಂದ ನೋಡಲಾಗುತ್ತದೆ. ಇದಕ್ಕೆ ನ್ಯಾಯದಾನದಲ್ಲಾಗುವ ವಿಳಂಬವೇ ಕಾರಣವಾಗಿದೆ ಎಂದರು.
ಸ್ವಾಮೀಜಿಯೊಬ್ಬರ ಅತ್ಯಾಚಾರ ಪ್ರಕರಣ, ರಾಜಕೀಯ ನಾಯಕರು, ಚಿತ್ರನಟರಾದ ಸಲ್ಮಾನ್ ಖಾನ್, ಸಂಜಯ್ ದತ್ತ್ ಅವರಿಗೆ ಶೀಘ್ರ ನ್ಯಾಯ ಒದಗುವುದಾದರೆ, ಆರೋಪಿ ಸ್ಥಾನದಲ್ಲಿದ್ದು, ಹಲವು ವರ್ಷಗಳಿಂದ ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಜೈಲಿನಲ್ಲಿ ಕಳೆಯುತ್ತಿರುವವರಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಚಂಗಪ್ಪ ಪ್ರಶ್ನಿಸಿದರು.
ಆದ್ದರಿಂದ ಜಿಲ್ಲೆಯಲ್ಲಿ ಹಲವು ಮಂದಿ ಅಲ್ಪಸಂಖ್ಯಾತರ ವಕೀಲರಿದ್ದು, ಅವರನ್ನೆಲ್ಲ ಒಗ್ಗೂಡಿಸಿ ದುರ್ಬಲರ, ಆರ್ಥಿಕ ಹಿಂದುಳಿದವರ ಶೀಘ್ರ ನ್ಯಾಯದಾನಕ್ಕೆ ಕಾನೂನು ನೆರವು ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸುವುದಾಗಿ ಅವರು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಎಸ್‌ಐಓ ರಾಜ್ಯಾಧ್ಯಕ್ಷ ಸಬೀದ್ ಶಾಫಿ, ಮಾಧ್ಯಮಗಳು ಕಡೆಗಣಿಸಿರುವ ವಾಸ್ತವಗಳನ್ನು, ಸತ್ಯ ಸಂಗತಿಗಳನ್ನು ಸಾಕ್ಷ ಚಿತ್ರದಲ್ಲಿ ತೋರಿಸಲಾಗಿದೆ ಎಂದರು.
ರಾಜ್ಯದ ಕೆಲವೆಡೆಗಳಿಂದ ಭಯೋತ್ಪಾದನೆ ಆರೋಪದಲ್ಲಿ ಬಂಧನಕ್ಕೊಳಗಾಗಿ ದೋಷಮುಕ್ತಗೊಂಡು ಬಿಡುಗೊಂಡಿರುವವರ ಹಾಗೂ ಈಗಾಗಲೇ ಜೈಲಿನಲ್ಲಿರುವ ಅಮಾಯಕರ ಕುಟುಂಬದ ಪೋಷಕರನ್ನು ಅವರ ಕುಟುಂಬ ಸದಸ್ಯರನ್ನು ಸಂದರ್ಶಿಸಿ ವಾಸ್ತವ ಸಂಗತಿಗಳನ್ನು ಸಂಗ್ರಹಿ ಈ ಸಾಕ್ಷ ಚಿತ್ರದಲ್ಲಿ ತೋರಿಸಲಾಗಿದೆ. ಕಳೆದ ಎಂಟು ತಿಂಗಳುಗಳಿಂದ ಬೆಂಗಳೂರು, ಬಾಗಲಕೋಟೆ, ಹುಬ್ಬಳ್ಳಿ, ರಾಯಚೂರು, ಬಿಜಾಪುರ ಮೊದಲಾದ ಕಡೆಗಳಿಗೆ ಸಂಚರಿಸಿ ಒಟ್ಟು 18 ಮಂದಿಯನ್ನು ಭೇಟಿ ಮಾಡಿ, ವಾಸ್ತವ ವಿಷಯವನ್ನು ಸಂಗ್ರಹಿಸಿ ಈ ಚಿತ್ರದಲ್ಲಿ ತೋರಿಸಲಾಗಿದೆ.
ಅಝರುದ್ದೀನ್ ಪಿಲಕೊಡನ್ ‘ಅನ್‌ಸಾಲ್ವ್‌ಡ್ ಸ್ಟೋರಿ ಆಫ್ ದಿ ಅನ್‌ಹರ್ಡ್’ ಸಾಕ್ಷ ಚಿತ್ರದ ನಿರ್ದೇಶಕ