ಟ್ರಂಪ್ ರ್ಯಾಲಿಯಲ್ಲಿ ಮತ್ತೆ ಮಾರಾಮಾರಿ
ಸ್ಯಾನ್‌ಡಿಯೆಗೊ, ಮೇ 28: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೇವಿಡ್ ಟ್ರಂಪ್ ವಿರುದ್ಧ ಮತ್ತೊಮ್ಮೆ ಪ್ರತಿಭಟನೆಯ ಕಿಡಿ ಹೊತ್ತಿಕೊಂಡಿದೆ. ಮೆಕ್ಸಿಕೊ ಗಡಿ ಸಮೀಪದ ನಗರವೊಂದರಲ್ಲಿ ನಡೆದ ರ್ಯಾಲಿಯಲ್ಲಿ ಟ್ರಂಪ್ ಪರ ಹಾಗೂ ವಿರೋಧಿ ಗುಂಪುಗಳ ನಡುವೆ ಶುಕ್ರವಾರ ಘರ್ಷಣೆ ನಡೆದಿರುವುದಾಗಿ ವರದಿಯಾಗಿದೆ. ಅಮೆರಿಕಕ್ಕೆ ಮೆಕ್ಸಿಕೊ ನಾಗರಿಕರ ವಲಸೆಯನ್ನು ತಡೆಯಲು,ತಾನು ಅಧ್ಯಕ್ಷನಾದಲ್ಲಿ ಮೆಕ್ಸಿಕೊ ಗಡಿಯಲ್ಲಿ ಗೋಡೆಯೊಂದನ್ನು ನಿರ್ಮಿಸುವುದಾಗಿ ಟ್ರಂಪ್ ಘೋಷಿಸಿರುವುದು ಈ ಪ್ರದೇಶದಲ್ಲಿ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ.
ರ್ಯಾಲಿಯಲ್ಲಿ ಟ್ರಂಪ್ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ‘ಪೆಪ್ಪರ್‌ಸ್ರ್ಪೇ’ ಎರಚಿದರು. ರ್ಯಾಲಿಯ ಆರಂಭದಲ್ಲಿ ಶಾಂತಿಯುವಾಗಿ ವರ್ತಿಸಿದ್ದ ಜನರ ಗುಂಪೊಂದು, ಬಳಿಕ ಹಿಂಸೆಗಿಳಿಯಿತೆಂದು, ಸ್ಯಾನ್‌ಡಿಯಾಗೊಂದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ನಡೆದ ಟ್ರಂಪ್ ರ್ಯಾಲಿಯಲ್ಲಿ ಸಭಾಭವನದ ಹೊರಗೆ ಜಮಾಯಿಸಿದ್ದ ಪ್ರತಿಭಟನಕಾರರಲ್ಲಿ ಕೆಲವರು ತಡಬೇಲಿಯನ್ನು ಹತ್ತಿ, ಪೊಲೀಸರ ಮೇಲೆ ನೀರಿನ ಬಾಟಲಿಗಳನ್ನು ಎಸದರು. ಘಟನೆಯಲ್ಲಿ ಓರ್ವನನ್ನು ಬಂಧಿಸಲಾಗಿದ್ದು, ಇತರರನ್ನು ಪೊಲೀಸರು ಚದುರಿಸುವ ಮೂಲಕ ಸಂಭಾವ್ಯ ಘರ್ಷಣೆಯನ್ನು ತಪ್ಪಿಸಿದರು. ಟ್ರಂಪ್ ರ್ಯಾಲಿ ಕೊನೆಗೊಂಡ ಬಳಿಕ, ಸ್ಯಾನ್‌ಡಿಯಾಗೊ ನಗರದ ವಿವಿಧೆಡೆ ಟ್ರಂಪ್ ಪರ ಹಾಗೂ ವಿರೋಧಿಗುಂಪುಗಳು ಪರಸ್ಪರ ಘರ್ಷಣೆಗಿಳಿದವೆಂದು ಪೊಲೀಸರು ತಿಳಿಸಿದ್ದಾರೆ.
ಇದೇ ಸಂದರ್ಭ ಸ್ಯಾನ್‌ಡಿಯಾಗೊದಲ್ಲಿ ನಡೆದ ಟ್ರಂಪ್ ವಿರೋಧಿ ರ್ಯಾಲಿಯಲ್ಲಿ ಅಮೆರಿಕ ಹಾಗೂ ಮೆಕ್ಸಿಕೊದ ಧ್ವಜಗಳನ್ನು ಹಿಡಿದ ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.ಅಮೆರಿಕ ಹಾಗೂ ಮೆಕ್ಸಿಕೊ ಗಡಿಯಲ್ಲಿರುವ ಸ್ಯಾನ್‌ಡಿಯಾಗೊ ನಗರದಲ್ಲಿ ಪ್ರತಿ ದಿನ ಸುಮಾರು 3 ಲಕ್ಷ ಮಂದಿ ಕಾನೂನು ಪ್ರಕಾರವಾಗಿ ಉದ್ಯೋಗ ಇತ್ಯಾದಿ ಕಾರಣಗಳಿಗಾಗಿ ಗಡಿದಾಟುತ್ತಿದ್ದಾರೆ.