ಝಿಕಾ ವೈರಸ್ ಭೀತಿ: ಒಲಿಂಪಿಕ್ ಸ್ಥಳಾಂತರಕ್ಕೆ ವಿಜ್ಞಾನಿಗಳ ಆಗ್ರಹ

Update: 2016-05-28 17:20 GMT

ರಿಯೋಡಿಜನೈರೋ,ಮೇ 28: ಝಿಕಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ, ಬ್ರೆಜಿಲ್ ರಾಜಧಾನಿ ರಿಯೋಡಿಜನೈರೋದಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದ ಸ್ಥಳವನ್ನು ಬದಲಾಯಿಸಬೇಕೆಂದು, ಆರೋಗ್ಯ ತಜ್ಞರು ವಿಶ್ವ ಆರೋಗ್ಯ ಸಂಸ್ಥೆಯನ್ನು ಆಗ್ರಹಿಸಿದ್ದಾರೆ. ಅಂತಾರಾಷ್ಟೀಯ ಮಟ್ಟದ ಪ್ರಸಿದ್ಧ ವಿಜ್ಞಾನಿಗಳು, ಪ್ರೊಫೆಸರ್‌ಗಳು ಹಾಗೂ ಆರೋಗ್ಯ ತಜ್ಞರನ್ನೊಳಗೊಂಡ 150 ಮಂದಿ ಸಹಿಹಾಕಿರುವ ಪತ್ರವೊಂದರಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯನ್ನು ಒತ್ತಾಯಿಸಲಾಗಿದೆ. ಆರೋಗ್ಯ ಹಾಗೂ ನೈರ್ಮಲ್ಯ ಪಾಲನೆಯಲ್ಲಿ ಬ್ರೆಝಿಲ್‌ನ ದಯನೀಯವಾದ ವೈಫಲ್ಯ ಕಂಡಿದೆಯೆಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಅಮೆರಿಕ, ಬ್ರಿಟನ್,ಜಪಾನ್, ಕೆನಡ,ಜಪಾನ್, ಲೆಬನಾನ್,ಟರ್ಕಿ ಮತ್ತಿತರ ದೇಶಗಳ ತಜ್ಞರು ಈ ಪತ್ರಕ್ಕೆ ಸಹಿಹಾಕಿದ್ದಾರೆ. ಬ್ರೆಝಿಲ್, ಝಿಕಾ ವೈರಸ್ ಪೀಡಿತ ದೇಶಗಳ ಪೈಕಿ ಮುಂಚೂಣಿಯಲ್ಲಿದೆ.

  ಝಿಕಾ ವೈರಸ್ ಮೆದುಳಿನ ಬೆಳವಣಿಗೆ ಕುಂಠಿತ ಸೇರಿದಂತೆ ನವಜಾತ ಶಿಶುಗಳ ದೈಹಿಕ ಆರೋಗ್ಯ ಗಂಭೀರವಾದ ಅಪಾಯವನ್ನುಂಟು ಮಾಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯಸಂಸ್ಥೆಯ ಅಧಿಕಾರಿಗಳು, ಒಲಿಂಪಿಕ್ ಕ್ರೀಡಾಕೂಟ ನಡೆಯುವ ರಿಯೋ ಡಿ ಜನೈರೋಗೆ ಭೇಟಿ ನೀಡಿ ಪರಿಸ್ಥಿತಿಯ ಪರಾಮರ್ಶೆ ನಡೆಸಬೇಕೆಂದು ತಜ್ಞರು ಪತ್ರದಲ್ಲಿ ಆಗ್ರಹಿಸಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟವನ್ನು ವೀಕ್ಷಿಸಲು ಜಗತ್ತಿನೆಲ್ಲೆಡೆಯಿಂದ 5 ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗಮಿಸಲಿರುವುದರಿಂದ ಝೈಕಾ ವೈರಸ್ ವಿಶ್ವದಾದ್ಯಂತ ಇನ್ನಷ್ಟು ವೇಗವಾಗಿ ಹರಡುವ ಸಾಧ್ಯತೆಯಿದೆಯೆಂದು ಅವರು ಹೇಳಿದ್ದಾರೆ.

 ಸ್ಥಳಾಂತರವಿಲ್ಲ: ಡಬ್ಲು ಎಚ್‌ಓ ಸ್ಪಷ್ಟನೆ ಝಿಕಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಒಲಿಂಪಿಕ್ ಕ್ರೀಡಾಕೂಟದ ಸಮಯ ಅಥವಾ ಸ್ಥಳದಲ್ಲಿ ಬದಲಾವಣೆ ಮಾಡಬೇಕೆಂಬ ವಿಜ್ಞಾನಿಗಳ ಆಗ್ರಹವನ್ನು ವಿಶ್ವ ಆರೋಗ್ಯ ಸಂಸ್ಥೆ ತಳ್ಳಿಹಾಕಿದೆ. ಒಲಿಂಪಿಕ್ಸ್‌ನಿಂದಾಗಿ ಝಿಕಾ ವೈರಸ್ ವಿಶ್ವವ್ಯಾಪಿಯಾಗಿ ಹರಡುವ ಸಾಧ್ಯತೆಯಿದೆಯೆಂಬ ತಜ್ಞರ ವಾದವನ್ನು ಅದು ಅಲ್ಲಗಳೆದಿದೆ.

ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟವು ರಿಯೋಡಿ ಜನೈರೋದಲ್ಲಿ ಆಗಸ್ಟ್ 5ರಿಂದ ಸೆಪ್ಟೆಂಬರ್ 18ರ ತನಕ ನಡೆಯಲಿದೆ. ಈ ಅವಧಿಯು ಬ್ರೆಝಿಲ್‌ನಲ್ಲಿ ಚಳಿಗಾಲವಾಗಿರುವುದರಿಂದ, ಸೊಳ್ಳೆಗಳು ಸಂಖ್ಯೆ ತುಂಬಾ ಕಡಿಮೆಯಿರುತ್ತದೆಯೆಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News