×
Ad

ಮಂಗಳೂರು ವಿವಿಯಲ್ಲಿ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಉದ್ಘಾಟನೆ

Update: 2016-05-28 23:01 IST

 ಕೊಣಾಜೆ: ಇಂದಿನ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಕಡೆಗೆ ಆಸಕ್ತಿ ಕಡಿಮೆಯಾಗಿರುವುದರ ಜೊತೆಗೆ ಬಾಷಾ ಪಠಣದ ಸ್ಪಷ್ಟತೆ ಕೊರತೆ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಕನ್ನಡ ಭಾಷಾ ಶುದ್ಧೀಕರಣಕ್ಕೆ ಕನಿಷ್ಟ ಹತ್ತು ಅಂಕಗಳನ್ನಾದರೂ ಮೀಸಲಿಡಬೇಕಿದ್ದು, ಈ ಕಾರ್ಯ ಪ್ರಾರ್ಥಮಿ ಮತ್ತು ಪ್ರೌಢ ಶಾಲಾ ಮಟ್ಟದಿಂದಲೇ ನಡೆಯಬೇಕು. ಇದರಿಂದ ಭಾಷಾ ಪ್ರೌಢಿಮೆ, ಭಾಷಾ ಸ್ಪಷ್ಟತೆಯ ಅರಿವಿನ ಜೊತೆಗೆ ಜ್ಞಾನ ಭಂಡಾರವನ್ನು ವಿಸ್ತರಿಸಿಕೊಳ್ಳಲು ಸಾಧ್ಯ ಎಂದು ಪದ್ಮವಿಭೂಷಣ ರಾಜರ್ಷಿ ಡಾ.ವೀರೇಂದ್ರ ಹೆಗ್ಡೆ ಅವರು ಅಭಿಪ್ರಾಯ ಪಟ್ಟರು.

   ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಶನಿವಾರ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಸಾಹಿತಿಗಳು ಹುಟ್ಟುವ ಮೊದಲೇ ಸಾಹಿತ್ಯ ಹುಟ್ಟುತ್ತವೆ. ಇಂದಿನ ಸಾಹಿತಿಗಳಿಗೆ ಪ್ರಚಾರ ಸಿಗುತ್ತದೆ, ಅದ್ಯಾವುದೂ ಇಲ್ಲದ ಇಲ್ಲದ ಕಾರಣ ಹಿಂದೆ ಸಾಕಷ್ಟು ಸಾಹಿತಿಗಳಿಗೆ ಬೆಂಬಲ ಸಿಗಲಿಲ್ಲ. ಆದ್ದರಿಂದ ಸಮಕಾಲಿನ ಯುಗದಲ್ಲಿ ಸಾಧನೆ ಮಾಡಿದ ಸಾಹಿತಿಗಳನ್ನೂ ಗುರುತಿಸಿ ಅವರ ಸಾಹಿತ್ಯ ಸಾಧನೆಯನ್ನು ಬೆಳಕಿಗೆ ತರುವ ಕೆಲಸ ಆಗಬೇಕು ಎಂದು ಹೇಳಿದರು. ಧರ್ಮವನ್ನು ಅಂತರಂಗದ ದೃಷ್ಟಿಯಿಂದ ಪ್ರಕಟಿಸಿದ್ದು ಕವಿ ರತ್ನಾಕರವರ್ಣಿ ಕವಿ ಒಬ್ಬನೇ. ಅವನು ಒಬ್ಬ ವಿಶ್ವಸಾಹಿತಿಯಾಗಿದ್ದಾನೆ. ಇಂದು ಭೋಗದ ಬಗ್ಗೆ ಪರಿಚಯ ಸಿಗುತ್ತದೆಯಾದರೂ ಯೋಗದ ಬಗ್ಗೆ ಸಿಗುತ್ತಿಲ್ಲ, ಆದರೆ ರತ್ನಾಕರವರ್ಣಿ ತಮ್ಮ ಸಾಹಿತ್ಯದ ಮೂಲಕ ಯೋಗ, ಭೋಗ, ಬಾಹುಬಲಿಗಿಂತ ಭರತನನ್ನು ವಿಶೇಷ ರೀತಿಯಲ್ಲಿ ಪರಿಚಯಿಸಿದರು. ಮಂಗಳೂರು ವಿವಿಯಲ್ಲಿ ಸ್ಥಾಪನೆಯಾಗಿರುವ ರತ್ನಾಕರವರ್ಣಿ ಅಧ್ಯಯನ ಪೀಠದ ಮೂಲಕ ಕವಿಯ ಸಾಹಿತ್ಯದ, ಸಂಶೋಧನೆಯ ಕೆಲಸ ಉತ್ತಮವಾಗಿ ಮಾದರಿಯಾಗಲಿ ಎಂದು ಹಾರೈಸಿದರು.

  ಹಿರಿಯ ಸಾಹಿತಿ, ಚಿಂತಕ ನಾಡೋಜ ಪ್ರೊ.ಹಂಪ ನಾಗರಾಜಯ್ಯ ಮಾತನಾಡಿ, ಹಳೆಗನ್ನಡ ಸಾಹಿತ್ಯವನ್ನು ಓದುವವರ ಸಂಖ್ಯೆ ಕಡಿಮೆಯಾಗಿ ಇಂದು ಹಳೆಕನ್ನಡ ಸಾಹಿತ್ಯಕ್ಕೆ ಕೆಟ್ಟ ಕಾಲ ಬಂದಿದೆ. ಕನ್ನಡದ ಬೇರು ಇರುವಂತಹದ್ದು ಹಳೆಗನ್ನಡದಲ್ಲಿ. ಆದ್ದರಿಂದ ಹಳೆಕನ್ನಡವನ್ನು ಪ್ರೀತಿಸುವ ಕೆಲಸವನ್ನು ಇಂದಿನ ಜನರು ಮಾಡಬೇಕಾದ ಅಗತ್ಯ ಇದೆ ಎಂದು ಹೇಳಿದರು.

ಹಿಂದೆ ದೇಶದಲ್ಲಿದ್ದ ಎಲ್ಲಾ ಭಾಷೆಗಳ ಮೇಲೆ ಪರಸ್ಪರ ಗೌರವ, ಭಾಷಾ ಸಾಮರಸ್ಯ ಇತ್ತು. ಕರಣಾನಿಧಿಯನ್ನು ಓಲೈಸುವ ನಿಟ್ಟಿನಲ್ಲಿ ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿದ ಪರಿಣಾಮ ತೆಲುಗು ಮತ್ತು ಕನ್ನಡ ಭಾಷಿಕರು ಹೋರಾಟ ಆರಂಭಿಸಿದ್ದರಿಂದ ಭಾಷಾ ಸಾಮರಸ್ಯ ಮರೆಯಾಯಿತು. ಎಲ್ಲಾ ಭಾಷೆಗಳನ್ನು ಸಮಾನವಾಗಿ ಕಾಣಬೇಕು ಎನ್ನುವುದು ತುಳುನಾಡಿನ ರತ್ನಾಕರವರ್ಣಿ ಸಂದೇಶವಾಗಿದೆ. ಅಂತಹ ಭಾಷಾ ಸಾಮರಸ್ಯ ಕರಾವಳಿ ಭಾಗದಲ್ಲಿ ಕಾಣಲು ಸಾಧ್ಯವಿದೆ ಎಂದರು.

     ಮಾಜಿ ಕೇಂದ್ರ ಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ ಮಾತನಾಡಿ, ಕೇವಲ ಪೀಠ ಸ್ಥಾಪಿಸಿದರೆ ಸಾಲದು, ರತ್ನಾಕರವರ್ಣಿ ಅಸಹನೆಯಿಂದ ತಮ್ಮ ಧರ್ಮವನ್ನೂ ತ್ಯಜಿಸಬೇಕಾದ ಪ್ರಸಂಗ ಬಂದಿತ್ತು. ಈ ಬಗ್ಗೆಯೂ ವಿಮರ್ಶೆ ನಡೆಯಬೇಕು. ರತ್ನಾಕರವರ್ಣಿ ಅವರು ತಮ್ಮ ಸಾಹಿತ್ಯದ ಮೂಲದ ಜಗತ್ತಿಗೆ ಶಾಂತಿಯ ಸಂದೇಶವನ್ನು ನೀಡಿದ್ದಾರೆ. ಮಂಗಳೂರು ವಿವಿಯಲ್ಲಿ ಮಹಾಕವಿ ರತ್ನಾಕರವರ್ಣಿ ಪೀಠ ಉದ್ಘಾಟನೆಗೊಂಡಿರುವಂತೆಯೇ ಇದೀಗ ಇನ್ನೋರ್ವ ಪ್ರಮುಖರಾದ ಮುದ್ದಣ್ಣ ಕವಿಯ ಪೀಠ ಸ್ಥಾಪನೆ ಒತ್ತಾಯ ಕೇಳಿ ಬಂದಿರುವುದರಿಂದ ಈ ಬಗ್ಗೆ ಮುಖ್ಯಮಂತ್ರಿಯವರಲ್ಲಿ ಚರ್ಚಿಸಿ ಆದಷ್ಟು ಬೇಗ ಮುದ್ದಣ್ಣ ಪೀಠ ಸ್ಥಾಪನೆಗೂ ಶ್ರಮಿಸುತ್ತೇನೆ ಎಂದರು.

ಮಂಗಳೂರು ವಿವಿ ಉಪಕುಲಪತಿ ಪ್ರೊ.ಕೆ.ಬೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಚಿವ ಕೆ.ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಕನ್ನಡ ವಿಭಾಗ ಪ್ರಾಧ್ಯಾಪಕ ಪ್ರೊ.ಸೋಮಣ್ಣ ಸ್ವಾಗತಿಸಿದರು. ಪರಿಕ್ಷಾಂಗ ಕುಲಸಚಿವ ಪ್ರೊ.ಎ.ಎಂ.ಖಾನ್ ವಂದಿಸಿದರು. ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News