×
Ad

ಕೇವಲ 10 ಪೈಸೆಗೆ 1ಲೀ ಶುದ್ಧ ಕುಡಿಯುವ ನೀರು....

Update: 2016-05-28 23:05 IST

ಬನ್ನಡ್ಕ,ಮೇ 28 :ಸಾಧನೆಯೆಂದರೆ ಮಾರುಕಟ್ಟೆಯಲ್ಲಿ ಇತರರನ್ನು ಹಿಂದಿಕ್ಕಿ ಮುನ್ನಡೆಯುವುದಲ್ಲ. ಸಮಾಜಕ್ಕೆ ಅಗತ್ಯವಿರುವ ವಿಶಿಷ್ಠ ಕೊಡುಗೆಯನ್ನು ನೀಡುವ ಮೂಲಕ ಗಮನಾರ್ಹವೆನಿಸುವುದು ಇದು ದ.ಕ ಜಿಲ್ಲೆಯ ಬನ್ನಡ್ಕ ವನ್ನು ಆಹಾರ ಧಾನ್ಯ ಸಂಸ್ಕರಣೆಯ ಬಾಯ್ಲರ್ಸ್‌ ಆ್ಯಂಡ್ ಡ್ರಯರ್ಸ್‌ನಲ್ಲಿ ವಿಶ್ವದ 18 ದೇಶಗಳಿಗೆ ರಫ್ತು ಮಾಡಿ ಮಾರುಕಟ್ಟೆಯಲ್ಲಿ ಕಿಂಗ್ ಎನಿಸಿರುವ ಎಸ್.ಕೆ.ಎಫ್. ಉದ್ಯಮದ ಹೆಗ್ಗಳಿಕೆ. ಸ್ವಪರಿಶ್ರಮದಿಂದ ಸ್ವದೇಶೀ ಚಿಂತನೆಯಿಂದ ಸ್ವಾವಲಂಬಿಯಾಗಿ ಬೆಳೆದು ನಿಂತ ಸಾಧಕ ಜಿ.ರಾಮಕೃಷ್ಣ ಆಚಾರ್ ಅವರ ಉತ್ಸಾಹ ಇಷ್ಟಕ್ಕೇ ಸೀಮಿತವಾಗಿಲ್ಲ. ಜೀವ ಜಲ ಶುದ್ಧವಾಗಿ ಸೇವಿಸಿದಾಗ ಶೇ 50 ರಷ್ಟು ಕಾಯಿಲೆಗಳೇ ಕಾಡಲಾರವು ಎನ್ನುವ ವಾಸ್ತವದ ನೆಲೆಯಲ್ಲಿ ಪ್ರಧಾನಿಯವರ ಮೇಕ್ ಇನ್ ಇಂಡಿಯಾದ ಕನಸಿಗೆ ಪೂರಕವಾಗಿ ಈಗ ಎಸ್.ಕೆ.ಎಫ್. ಕೇವಲ 10 ಪೈಸೆಗೆ 1ಲೀ ಶುದ್ಧ ಕುಡಿಯುವ ನೀರು ಒದಗಿಸುವ ಮೂಲಕ ಶುದ್ಧಜಲ ಕ್ರಾಂತಿಗೆ ಮುಂದಾಗಿದೆ.

ಶುದ್ಧ ಕುಡಿಯುವ ನೀರು ಇಂದು ಬರೇ ಶ್ರೀಮಂತರಿಗೆ ಎನ್ನುವಂತಾಗಿದೆ. ಕೇವಲ 40 ಅಡಿ ಆಳದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಸಿಗುತ್ತಿದ್ದ ಜೀವ ಜಲ ಇಂದು 2 ಸಾವಿರ ಅಡಿ ಆಳಕ್ಕೆ ತಲುಪಿದೆ. ಅಲ್ಲಿ ದೊರೆಯುವುದೂ ಕೆಮಿಕಲ್ ವಾಟರ್. ಜಲ ಮೂಲವೂ ಅಂತರ್ಜಲವೂ ಮಲಿನವಾಗಿದೆ. ಸುಮಾರು 90% ಜನರು ಜಲ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಿನರಲ್ ವಾಟರ್ ದುಬಾರಿಯಾಗುತ್ತಿದೆ. ನಕಲಿ ವಾಟರ್ ಬಾಟಲ್‌ಗಳ ಹಾವಳಿ, ವಾರ್ಷಿಕ 1.86 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯದ ಆತಂಕವೂ ಜತೆಗಿದೆ. ಇದಕ್ಕೆಲ್ಲ ಪರಿಹಾರ ಎಂಬಂತೆ ಎಲಿಕ್ಸರ್ ( ಅರ್ಥಾಥ್ ಅಮೃತ)

ಶುದ್ಧಜಲ ಉತ್ಪಾದನಾ ಘಟಕಗಳನ್ನು ಪರಿಚಯಿಸುತ್ತಿದೆ.

ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ಥಾನ, ಆಫ್ರಿಕಾ, ನೇಪಾಳದಂತಹ ರಾಷ್ಟ್ರಗಳಲ್ಲಿ ಶುದ್ಧನೀರಿನ ಅವಶ್ಯಕತೆ ಇದೆ. ಕಡಿಮೆ ದರದಲ್ಲಿ ಜನಸಾಮಾನ್ಯರಿಗೂ ಶುದ್ಧಕುಡಿಯವ ನೀರು ಒದಗಿಸುವ ನಿಟ್ಟಿನಲ್ಲಿ ಹಲವು ದೇಶಗಳಲ್ಲಿ ಬಹಳ ಬೇಡಿಕೆಯಿರುವ ಎಲಿಕ್ಸರ್ ಸುಜಲ ಘಟಕಗಳನ್ನು ಎಸ್.ಕೆ.ಎಫ್ ಆವಿಷ್ಕರಿಸಿದೆ. ಈ ಉದ್ಯಮದ ಮೂಲಕ ವಾರ್ಷಿಕ 35 ಕೋಟಿ ರೂಪಾಯಿ ವ್ಯವಹಾರ ನಡೆಸುವ ಗುರಿ ಹೊಂದಿದೆ.

  ಎಲಿಕ್ಸರ್ ಜನರ ಅಗತ್ಯತೆಗಳಿಗೆ ತಕ್ಕಂತೆ ನೋವೆಲ್ ಹಾಟ್, ಕೋಲ್ಡ್, ವಾರ್ಮ್ ಆಯ್ಕೆಯೊಂದಿಗೆ ಡೊಮೆಸ್ಟಿಕ್ ವಾಟರ್ ಪ್ಯೂರಿಫೈಯರ್ಸ್‌ನಿಂದ ಹಿಡಿದು 10 ಸಾವಿರ ಲೀ ಬೃಹತ್ ನೀರು ಶುದ್ಧೀಕರಣ ಘಟಕಗಳನ್ನು ವಿನ್ಯಾಸಗೊಳಿಸಿದೆ. ಡೊಮೆಸ್ಟಿಕ್ ಡಿಸ್ಪೆನ್ಸರ್ಸ್‌ನಿಂದ ಎಫ್ಲುಯೆಂಟ್ ಟ್ರೀಟ್ ಮೆಂಟ್ ಪ್ಲಾಂಟ್‌ವರೆಗೆ ಸಂಪೂರ್ಣ ನೀರು ಶುದ್ಧೀಕರಣ ಘಟಕಗಳನ್ನು ಪೂರೈಸುವ ದೇಶದ ಏಕೈಕ ಸಂಸ್ಥೆ ಎನ್ನುವುದು ಎಸ್.ಕೆ.ಎಫ್ ಎಲಿಕ್ಸರ್ ಹೆಗ್ಗಳಿಕೆ.

ಮೇಕ್ ಇನ್ ಇಂಡಿಯಾ...

 ಸ್ವಚ್ಛ ಭಾರತ, ಸ್ಕಿಲ್ ಇಂಡಿಯಾ, ಮತ್ತು ಮೇಕ್ ಇನ್ ಇಂಡಿಯಾ ಇವು ಭಾರತದ ಪ್ರಗತಿಗೆ ಪ್ರಧಾನಿ ಮೋದಿಯವರ ಕನಸಿನ ಯೋಜನೆಗಳು. ಎಲಿಕ್ಸರ್ ಶುದ್ಧಜಲ ಕ್ರಾಂತಿಯ ಹಿನ್ನೆಲೆಯೂ ಇದಕ್ಕೆ ಪೂರಕವಾಗಿದೆ. ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಭಾರತ, ಸ್ವದೇಶೀ ಉತ್ಪಾದನೆ, ತಂತ್ರಜ್ಞಾನ, ಅಭಿವೃದ್ಧಿಗೆ ಎಲಿಕ್ಸರ್ ಪೂರಕವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎಲಿಕ್ಸರ್ ಶುದ್ಧಜಲ ಯಂತ್ರಗಳು ಬದಲಾವಣೆಯ ಗಾಳಿ ಬೀಸಲಿವೆ ಎನ್ನುವುದು ರಾಮಕೃಷ್ಣ ಆಚಾರ್ ಅವರ ಧೃಡ ವಿಶ್ವಾಸ. ಬಾಟಲಿ ನೀರಿನ ದರಕ್ಕೆ ಹೋಲಿಸಿದರೆ 256 ಪಟ್ಟು ಕಡಿಮೆ ದರದಲ್ಲಿ ಪರಿಶುದ್ಧ ನೀರು ಜನತೆಗೆ ಲಭ್ಯ. ಈ ಯಂತ್ರಗಳ ಮೂಲಕ ಗ್ರಾಮೀಣ ಭಾರತವೂ ತಮ್ಮ ಜಲಮೂಲದಿಂದ ಮಿತವ್ಯಯದಲ್ಲಿ ಶುದ್ಧ ನೀರನ್ನು ಸೇವಿಸಬಹುದು ಎನ್ನುವುದು ಯೋಜನೆಯ ಹಿಂದಿರುವ ಸದಾಶಯ.

ಲಂಕೆಗೆ ಹೊರಟು ನಿಂತ ಎಲಿಕ್ಸರ್..

ಶ್ರೀಲಂಕಾದ ಕೊಲಂಬೋಗೆ ರಫ್ತಾಗಲಿರುವ ‘ಎಲಿಕ್ಸರ್ ಸುಜಲ’ ಘಟಕಗಳನ್ನು ಹೊತ್ತ ಕಂಟೈನರ್‌ಗೆ ಸಂಸದ ನಳಿನ್ ಕುಮಾರ್ ಕಟೀಲು ಶನಿವಾರ ಬನ್ನಡ್ಕ ಎಸ್.ಕೆ.ಎಫ್ ಆವರಣದಲ್ಲಿ ಹಸಿರು ನಿಶಾನೆ ತೋರಿದರು. ಸ್ಥಳೀಯ ನೀರನ್ನೇ ಬಳಸಿ ಶುದ್ಧೀಕರಿಸಿ ಜನರಿಗೆ ನೀಡುವ ಎಲಿಕ್ಸರ್ ಸುಜಲ ಸ್ವಚ್ಛಭಾರತ್ ಯೋಜನೆಗೆ ಅಮೂಲ್ಯ ಕೊಡುಗೆಯಾಗಿದೆ. ಈ ಮಹತ್ವದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಆದರ್ಶ ಗ್ರಾಮ ಕಲ್ಪನೆಗೂ ಬಳಸಿ ಗಮನ ಸೆಳೆಯಲಾಗುವುದು ಎಂದ ಅವರು ಸ್ವದೇಶೀ ಉದ್ಯಮಿಗಳಿಗೆ ಅನುಕೂಲವಾಗುವಂತೆ ಜಿಎಸ್‌ಟಿಯನ್ನು ಮುಂದಿನ ದಿನಗಳಲ್ಲಿ ಶೀಘ್ರ ಕೇಂದ್ರ ಸರಕಾರವು ಅನುಷ್ಠಾನಕ್ಕೆ ತರಲಿದೆ ಎಂದರು.

 ಮುಖ್ಯ ಅತಿಥಿಯಾಗಿದ್ದ ಸಚಿವ ಕೆ. ಅಭಯಚಂದ್ರ ಜೈನ್ ಶಿಕ್ಷಣ, ಧಾರ್ಮಿಕ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೂಡುಬಿದಿರೆಯ ಹೆಸರನ್ನು ಎಸ್.ಕೆ.ಎಫ್ ಉದ್ಯಮ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ ಎಂದರು. ವೇ.ಮೂ. ಪಂಜ ಭಾಸ್ಕರ್ ಭಟ್ ಆಶೀರ್ವಚನ ನೀಡಿ ಭಾರತದ ಸಂಸ್ಕೃತಿ ಬೆಳೆದದ್ದೇ ಶುದ್ಧ ನೀರಿನ ಮೂಲದಲ್ಲಿ. ನೀರು ಜೀವಜಲ. ಜನರಿಗೆ ಶುದ್ಧ ನೀರು ಒದಗಿಸುವ ಮೋದಿಯವರ ಸಂಕಲ್ಪವನ್ನು ಎಸ್‌ಕೆಎಫ್ ಸುಜಲ ಮೂಲಕ ಸಾಕಾರಗೊಳಿಸುತ್ತಿದೆ ಎಂದು ಶ್ಲಾಘಿಸಿದರು. ಟ್ರಸ್ಟಿ ಪ್ರಜ್ವಲ್ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ, ಪಡುಮಾರ್ನಾಡು ಗ್ರಾ.ಪಂ.ಅಧ್ಯಕ್ಷ ಶ್ರೀನಾಥ್ ಸುವರ್ಣ, ಬೆಳುವಾಯಿ ಗ್ರಾ.ಪಂ.ಅಧ್ಯಕ್ಷ ಭಾಸ್ಕರ ಆಚಾರ್ಯ, ಉದ್ಯಮಿ ದಯಾನಂದ ಪೈ , ಎಸ್.ಕೆ.ಎಫ್ ಐಟಿಐ ಪ್ರಾಚಾರ್ಯಪ್ರದೀಪ್ ಕುಮಾರ್, ಉಪನ್ಯಾಸಕ ಶರತ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News