ಎನ್‌ಎಂಪಿಟಿ ಖಾಸಗೀಕರಣಕ್ಕೆ ಕೇಂದ್ರದ ಸಂಚು: ಸಚಿವ ರೈ
ಮಂಗಳೂರು, ಮೇ 28: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಎರಡು ವರ್ಷಗಳ ಅಭಿವೃದ್ಧಿ ಶೂನ್ಯವಾಗಿದ್ದು, ಎನ್‌ಎಂಪಿಟಿಯನ್ನು ಅದಾನಿಗೆ ನೀಡುವ ಮೂಲಕ ಖಾಸಗೀಕರಣಕ್ಕೆ ಸಂಚು ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಆರೋಪಿಸಿದ್ದಾರೆ. ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಎರಡು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೆ ಪಡುಬಿದ್ರೆ ಉಷ್ಣ ವಿದ್ಯುತ್ ಸ್ಥಾವರವನ್ನು ವಿರೋಸಿದವರು ಇಂದು ಅದಾನಿಯ ಕೈಗೆ ಕೊಟ್ಟು ವಿಸ್ತರಣೆ ಮಾಡುತ್ತಿದ್ದಾರೆ. ಅದರ ಜತೆಯಲ್ಲೇ ಎನ್‌ಎಂಪಿಟಿಯನ್ನೂ ಅದಾನಿಗೆ ನೀಡಲು ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದರು. ಚುನಾವಣೆ ಪ್ರಚಾರ ಸಂದರ್ಭದಲ್ಲಿ ಅಂಗೈಯಲ್ಲಿ ಆಕಾಶ ತೋರಿಸಿದ್ದ ಬಿಜೆಪಿ, ಎರಡು ವರ್ಷದಲ್ಲಿ ಯಾವುದೇ ಸಾಧನೆ ಮಾಡಿಲ್ಲ. ಅಕಾರಕ್ಕೆ ಬಂದು 100 ದಿನದಲ್ಲಿ ಕಪ್ಪು ಹಣ ತರುತ್ತೇವೆ, ಪ್ರತಿಯೊಬ್ಬ ವ್ಯಕ್ತಿಯ ಖಾತೆಗೆ 15 ಲಕ್ಷ ರೂ. ಜಮಾ ಮಾಡುತ್ತೇವೆ ಎಂದು ಆಮಿಷ ತೋರಿಸಿ ಜನರನ್ನು ವಂಚಿಸಿದೆ ಎಂದವರು ಆಪಾದಿಸಿದರು. ಮುಡಾ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಜಿಪಂ ಸದಸ್ಯರಾದ ಎಂ.ಎಸ್.ಮುಹಮ್ಮದ್, ಶಾಹುಲ್ ಹಮೀದ್, ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ಮಹಾಬಲ ಮಾರ್ಲ, ಅಪ್ಪಿ, ಎ.ಸಿ.ವಿನಯರಾಜ್, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಕಾಂಗ್ರೆಸ್ ಮುಖಂಡರಾದ ಎ.ಸಿ.ಭಂಡಾರಿ, ಸದಾಶಿವ ಉಳ್ಳಾಲ್, ಪದ್ಮನಾಭ ನರಿಂಗಾನ, ಬಾಲಕೃಷ್ಣ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.