ರಿಯಲ್ ಮ್ಯಾಡ್ರಿಡ್‌ಗೆ 11ನೆ ಚಾಂಪಿಯನ್ಸ್ ಲೀಗ್ ಕಿರೀಟ
ಪೆನಾಲ್ಟಿ ಶೂಟೌಟ್‌ನಲ್ಲಿ ಅಟ್ಲೆಟಿಕೊ ಔಟ್
ಮಿಲನ್, ಮೇ 29: ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್ ತಂಡವನ್ನು 5-3 ಗೋಲುಗಳ ಅಂತರದಿಂದ ಮಣಿಸಿದ ರಿಯಲ್ ಮ್ಯಾಡ್ರಿಡ್ ತಂಡ 11ನೆ ಬಾರಿ ಚಾಂಪಿಯನ್ಸ್ ಲೀಗ್ ಕಿರೀಟವನ್ನು ಧರಿಸಿತು.
ಫೈನಲ್‌ನಲ್ಲಿ ಎಡವಿದ ಅಟ್ಲೆಟಿಕೊ ತಂಡ ಕಳೆದ ಮೂರು ವರ್ಷಗಳಲ್ಲಿ ಎರಡನೆ ಬಾರಿ ಚಾಂಪಿಯನ್ಸ್ ಟ್ರೋಫಿ ಜಯಿಸುವ ಅವಕಾಶದಿಂದ ವಂಚಿತವಾಯಿತು. ಎರಡನೆ ಬಾರಿ ರಿಯಲ್ ಮ್ಯಾಡ್ರಿಡ್ ವಿರುದ್ಧ ಫೈನಲ್‌ನಲ್ಲಿ ಎಡವಿತು.
ಶನಿವಾರ ಇಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಉಭಯ ತಂಡಗಳು ನಿಗದಿತ 90 ನಿಮಿಷಗಳಲ್ಲಿ 1-1 ರಿಂದ ಸಮಬಲ ಸಾಧಿಸಿದ್ದವು. ರಿಯಲ್ ಮ್ಯಾಡ್ರಿಡ್‌ನ ನಾಯಕ ಸೆರ್ಗಿಯೊ ರಾಮೊಸ್ 15ನೆ ನಿಮಿಷದಲ್ಲಿ ಗೋಲು ಖಾತೆ ತೆರೆದರು. ಅಟ್ಲೆಟಿಕೊ ತಂಡದ ಬದಲಿ ಆಟಗಾರ ಯಾನಿಕ್ ಕರಾಸ್ಕೊ 80ನೆ ನಿಮಿಷದಲ್ಲಿ ಗೋಲು ಬಾರಿಸಿ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು. ಸ್ಕೋರ್ ಸಮಬಲಗೊಂಡ ಹಿನ್ನೆಲೆಯಲ್ಲಿ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ಗೆ ಮೊರೆ ಹೋಗಲಾಯಿತು.
ಪೆನಾಲ್ಟಿ ಶೂಟೌಟ್‌ನಲ್ಲಿ ಅಟ್ಲೆಟಿಕೊ 3 ಗೋಲು ಬಾರಿಸಿದರೆ, ರಿಯಲ್ ಮ್ಯಾಡ್ರಿಡ್ 5 ಗೋಲು ಬಾರಿಸಿ ಜಯ ಸಾಧಿಸಿತು. ತಂಡದ ಪರ ವಿಜಯದ ಗೋಲು ಬಾರಿಸಿದ ಮೂರು ಬಾರಿ ವಿಶ್ವದ ಆಟಗಾರ ಪ್ರಶಸ್ತಿ ವಿಜೇತ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಾನು ಧರಿಸಿದ್ದ ಜರ್ಸಿಯನ್ನು ಕೈಯಿಂದ ಹರಿದು ಸಂಭ್ರಮ ವ್ಯಕ್ತಪಡಿಸಿದರು.
2014ರಲ್ಲಿ ಈ ಎರಡು ತಂಡಗಳು ಫೈನಲ್‌ನಲ್ಲಿ ಸೆಣಸಾಡಿದ್ದವು. ಆ ಪಂದ್ಯದಲ್ಲೂ 90 ನಿಮಿಷಗಳ ಆಟದ ಬಳಿಕ ಉಭಯ ತಂಡಗಳು 1-1 ರಿಂದ ಸಮಬಲ ಸಾಧಿಸಿದ್ದವು. ಅಂತಿಮವಾಗಿ ರಿಯಲ್ ಮ್ಯಾಡ್ರಿಡ್ ಪಂದ್ಯವನ್ನು ಜಯಿಸಿತ್ತು.
ಚಾಂಪಿಯನ್ಸ್ ಲೀಗ್ ಹೈಲೈಟ್ಸ್
*ಚಾಂಪಿಯನ್ಸ್ ಲೀಗ್‌ನಲ್ಲಿ ಫೈನಲ್ ಪಂದ್ಯವು 8ನೆ ಬಾರಿ ಹೆಚ್ಚುವರಿ ಸಮಯಕ್ಕೆ ವಿಸ್ತರಣೆಗೊಂಡಿತು. ಏಳನೆ ಬಾರಿ ಪೆನಾಲ್ಟಿ ಶೂಟೌಟ್‌ನ್ನು ಅಳವಡಿಸಲಾಯಿತು.
*ಝೈನುದ್ದೀನ್ ಝಿದಾನೆ ರಿಯಲ್ ಮ್ಯಾಡ್ರಿಡ್‌ನ ಆಟಗಾರ ಹಾಗೂ ಮ್ಯಾನೇಜರ್ ಆಗಿ ಯುರೋಪಿಯನ್ ಕಪ್/ಚಾಂಪಿಯನ್ಸ್ ಲೀಗ್‌ನ್ನು ಜಯಿಸಿದ ಎರಡನೆ ವ್ಯಕ್ತಿ. ಈ ಹಿಂದೆ ಮಿಗುಯೆಲ್ ಮುನೊಝ್ ಈ ಸಾಧನೆ ಮಾಡಿದ್ದರು.
*ಝಿದಾನೆ ಚಾಂಪಿಯನ್ಸ್ ಲೀಗ್ ಜಯಿಸಿರುವ ಫ್ರೆಂಚ್‌ನ ಮೊದಲ ಮ್ಯಾನೇಜರ್.
* ಸೆರ್ಗಿಯೊ ರಾಮೊಸ್ ಎರಡು ಪ್ರತ್ಯೇಕ ಚಾಂಪಿಯನ್ಸ್ ಲೀಗ್ ಫೈನಲ್ಸ್‌ನಲ್ಲಿ ಸ್ಕೋರ್ ಗಳಿಸಿದ ಐದನೆ ಆಟಗಾರ ಹಾಗೂ ಮೊದಲ ಡಿಫೆಂಡರ್. ಫೈನಲ್‌ನಲ್ಲಿ ಸ್ಕೋರ್ ಗಳಿಸಿದ ಆಟಗಾರರೆಂದರೆ: ರಾವುಲ್, ಸ್ಯಾಮುಯೆಲ್ ಎಟೂ, ಲಿಯೊನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ.