×
Ad

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಬೆಳ್ಳಿ ಹಬ್ಬ

Update: 2016-05-29 10:13 IST

 ಮುಲ್ಕಿ, ಮೇ 29: ಕೃಷಿ ಆಶ್ರಿತ ಉಪ ಕಸುಬುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮತ್ತು ಎಳವೆಯಲ್ಲಿಯೇ ಮಕ್ಕಳಿಗೆ ಕೃಷಿಯ ಬಗ್ಗೆ ಒಲವು ಮೂಡಿಸುವ ಉದ್ದೇಶ ದಿಂದ ಪ್ರತಿಷ್ಠಾನದ ವತಿಯಿಂದ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ವಿಜಯಾ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ನಾಗೇಶ್ವರ ರಾವ್ ವೈ. ತಿಳಿಸಿದರು.
 ಮಲ್ಕಿಯ ಅನ್ನಪೂರ್ಣೇಶ್ವರಿ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಪ್ರತಿಷ್ಠಾನದ ಬೆಳ್ಳಿ ಹಬ್ಬ ಸಂಭ್ರಮ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಕೃಷಿಕರಿಗೆ ತರಕಾರಿ ಬೀಜ ವಿತರಣೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.

ಪ್ರತಿಷ್ಠಾನ ಕೃಷಿಯನ್ನು ಮೂಲ ಉದ್ದೇಶವಾಗಿಟ್ಟುಕೊಂಡು ಅದಕ್ಕೆ ಪೂರಕವಾದ ಮಾಹಿತಿಗಳನ್ನು ನೀಡುವ ಜೊತೆಗೆ ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಒಲವು ಮೂಡಿಸುವ ಮತ್ತು ಅವರ ವಿದ್ಯಾಭ್ಯಾಸಕ್ಕೆ ಪ್ರತಿಷ್ಠಾನ ಮಹತ್ತರ ಕೊಡುಗಳನ್ನು ನೀಡುತ್ತಿದೆ ಎಂದರು.

ಗ್ರಾಮೀಣ ಪ್ರದೇಶದ ಕೃಷಿಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಷ್ಠಾನದ ವತಿಯಿಂದ ಸುಮಾರು 34 ಗ್ರಾಮೀನಾಭಿವೃದ್ಧಿ ಸಮಿತಿಗಳನ್ನು ರಚಿಸಿಕೊಂಡು ಜಿಲ್ಲಾಧ್ಯಂತ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಧಾನ ಕಚೇರಿಯ ಮಹಾ ಪ್ರಬಂಧಕ ಸತೀಶ್ ಬಳ್ಳಾಲ್ ತಿಳಿಸಿದರು.

ಇದೇ ವೇಳೆ ಮಂಗಳೂರು ಬ್ಯಾಂಕರ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಂಟಿ ನಿದೇಶಕಿ ಕಾಮಾಕ್ಷಿ ಪೈ ಬೆಳ್ಳಿಹಬ್ಬದ ವಿಶೇಷ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಇದೇ ವೇಳೆ ಪ್ರತಿಷ್ಠಾನ ನಡೆಸಿದ್ದ ರೇಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮ ಅಂಕಗಳಿಸಿದ್ದ ಕುಮಾರಿ ಸೌಮ್ಯಾ ಹಾಗೂ ಪಿಂಟೋ ವಿದ್ಯಾರ್ಥಿಗಳನ್ನು ಲ್ಯಾಪ್‌ಟಾಪ್ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ, ಭಾರತೀಯ ವಿಕಾಸ ಟ್ರಸ್ಟ್‌ನ ವತಿಯಿಂದ ಕೃಷಿಕರಿಗೆ ತರಕಾರಿ ಬೀಜಗಳನ್ನು ವಿತರಿಸಲಾಯಿತು.

ಸಭಾ ಕಾರ್ಯಕ್ರಮಕ್ಕೂ ಮೊದಲು ವಿಜಯಾ ಬ್ಯಾಂಕ್‌ನ ನವೀಕೃತ ಕಟ್ಟಡವನ್ನು ಅತಿಥಿಗಳು ಉದ್ಘಾಟಿಸಿದರು. ಸಮಾರಂಭದಲ್ಲಿ ಭಾರತೀಯ ಬವಿಕಾಸ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಂ. ಉಡುಪ, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಆಡಳಿತ ನಿರ್ದೇಶಕ ವಿ.ಕೆ.ಶೆಟ್ಟಿ, ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಡಾ. ಹರೀಶ್ ಶೆಣೈ, ಮಂಗಳೂರು ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೇಮ್‌ನಾಥ್ ಆಳ್ವ, ಪ್ರತಿಷ್ಠಾನದ ಕಾರ್ಯದರ್ಶಿ ರಾಜೇಂದ್ರ ರೈ, ಮಂಗಳೂರು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಒಷ್ಠಾನದ ಮಹಾ ಪ್ರಬಂಧಕ ಸುರೇಂದ್ರ ಹಗ್ಡೆ, ದುರ್ಗಾ ಪರಮೇಶ್ವರಿ ಟ್ರಸ್ಟ್‌ನ ಮನೋಹರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News