14 ವರ್ಷದ ಘನೀಮ್ ಅಲ್ ಮುಫ್ತಾಗೆ ಇನ್ಸ್ಟಾಗ್ರಾಮ್ ನಲ್ಲಿ 9 ಲಕ್ಷ ಫಾಲೋವರ್ಸ್ !

Update: 2016-05-29 06:36 GMT

ಕತಾರ್, ಮೇ 29: ಇಲ್ಲಿನ ಹದಿನಾಲ್ಕರ ಹರೆಯದ ಘನೀಮ್ ಅಲ್ ಮುಫ್ತಾ ಎಂಬ ವಿಶೇಷ ಸಾಮರ್ಥ್ಯದ ಯುವಕನಿಗೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಒಂಬತ್ತು ಲಕ್ಷ ಅಭಿಮಾನಿಗಳಿದ್ದಾರೆ.

ಹುಟ್ಟಿನಿಂದಲೇ ದೇಹದ ನಾಲ್ಕನೇ ಒಂದು ಭಾಗವನ್ನಷ್ಟೇ ಹೊಂದಿರುವ ಈ ಬಾಲಕ ತನ್ನ ಜೀವನದ ದಾಖಲೆಗಳನ್ನು ಈ ಜಾಲತಾಣದಲ್ಲಿ ಪ್ರಸ್ತುತಪಡಿಸಿದ್ದಾನೆ. ಬಾಲಕನ ತಾಯಿ ಘನೀಮ್ ಅಲ್ ಮುಫ್ತಾನ್ ಗರ್ಭಿಣಿಯಾಗಿದ್ದಾಗ, ವೈದ್ಯರು ತಪಾಸಣೆ ನಡೆಸಿ, ಗರ್ಭದಲ್ಲಿರುವ ಅವಳಿ ಮಕ್ಕಳ ಪೈಕಿ ಒಂದು ಮಗುವಿಗೆ ತೀವ್ರ ಸಮಸ್ಯೆ ಇರುವುದಾಗಿ ಹೇಳಿದ್ದರು. ಆದರೂ ಆಕೆ ಗರ್ಭಪಾತ ಮಾಡಿಸಿಕೊಳ್ಳಲು ನಿರಾಕರಿಸಿದ್ದರು. ಇದೀಗ ಈ ವಿಶೇಷ ಬಾಲಕ ತನ್ನ ಸವಾಲಿನ ಬದುಕಿನ ಪ್ರತಿ ಕ್ಷಣವನ್ನೂ ಅನುಭವಿಸುತ್ತಿರುವ ಬಗೆಗಿನ ವೀಡಿಯೊ ಹಾಗೂ ಫೋಟೊಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕುತ್ತಾ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾನೆ. ಸದಾ ನಗುಮುಖದ ಈತ ಖ್ಯಾತನಾಮರ ಜತೆಗೆ ಇರುವ ವೈವಿಧ್ಯಮಯ ಚಿತ್ರಗಳನ್ನು ಹಾಕುತ್ತಾ ಜನಪ್ರಿಯತೆ ಗಳಿಸಿದ್ದಾನೆ.

ಒಂದು ಚಿತ್ರದಲ್ಲಿ ಕುವೈತ್‌ನ ಅಮೀರ್ ಸಬಾಹ್ ಅಹ್ಮದ್ ಅಲ್ ಜಬೇರ್ ಅಲ್ ಸಬಹ್ ತಂದೆಯ ಪ್ರೀತಿಯಿಂದ ಮಗುವಿನ ಕೆನ್ನೆಗೆ ಮುತ್ತಿಕ್ಕುವ ಫೋಟೊ ಹಾಕಿದ್ದರೆ, ಇನ್ನೊಂದು ವೀಡಿಯೊದಲ್ಲಿ ಹಾಸಿಗೆಯ ಮೇಲೆ ಕುಣಿದಾಡುವ ಚಿತ್ರದ ಮೂಲಕ ಗಮನ ಸೆಳೆದಿದ್ದಾನೆ.

ಗಲ್ಫ್ ದೇಶಗಳಲ್ಲೇ ಅತ್ಯಂತ ಎತ್ತರದ ಪರ್ವತ ಎನಿಸಿದ ಓಮನ್‌ನ ಜೆಬೆಲ್ ಶಾಮ್ಸ್ ಪರ್ವತವನ್ನು ಏರುವ ಸಾಹಸದ ಚಿತ್ರವನ್ನು ಜಾಲತಾಣದಲ್ಲಿ ಹಾಕಿದ್ದ. ಇದು ಸುಮಾರು 10 ಕಿಲೋಮೀಟರ್ ಎತ್ತರದ ಪರ್ವತ. ಇತ್ತೀಚೆಗೆ ನೀಡಿದ ಸಂದರ್ಶನವೊಂದಲ್ಲಿ, ತನ್ನ ಧನಾತ್ಮಕ ಮನೋಭಾವ ಹಾಗೂ ಸದಾ ಸಂತಸವಾಗಿರುವುದೇ ಚೈತನ್ಯಕ್ಕೆ ಸ್ಫೂರ್ತಿ ಎಂದು ಹೇಳಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News