×
Ad

ಉಳ್ಳಾಲ: ಸರ್ವಧರ್ಮ ಒಕ್ಕೂಟದಿಂದ ದರ್ಗಾ ಅಧ್ಯಕ್ಷರಿಗೆ ಅಭಿನಂದನೆ

Update: 2016-05-29 18:10 IST

ಉಳ್ಳಾಲ, ಮೇ 29: ಸರ್ವಧರ್ಮ ಒಕ್ಕೂಟದ ವತಿಯಿಂದ ಉಳ್ಳಾಲ ನಗರಸಭೆ ಮೈದಾನದಲ್ಲಿ ದರ್ಗಾ ಅಧ್ಯಕ್ಷರಿಗೆ ಅಭಿನಂದನಾ ಸಭೆ ಶನಿವಾರ ನಡೆಯಿತು.

ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ದರ್ಗಾ ಅಧಿಕೃತ ಅಧ್ಯಕ್ಷ ಎಂದು ಅಬ್ದುಲ್ ರಶೀದ್ ಅವರನ್ನು ಘೋಷಿಸಿ ಗೊಂದಲಕ್ಕೆ ತೆರೆ ಎಳೆದ ದಿನವೇ ರಾತ್ರಿ ಸರ್ವಧರ್ಮ ಒಕ್ಕೂಟದಿಂದ ಬೃಹತ್ ಅಭಿನಂದನಾ ಸಮಾವೇಶ ಅಯೋಜಿಸಲಾಗಿತ್ತು.

ಸಭೆಯಲ್ಲಿ ಎಲ್ಲಾ ಧರ್ಮ, ಜಾತಿಯ ಮುಖಂಡರು ಭಾಗವಹಿಸಿ ‘ಉಳ್ಳಾಲದಲ್ಲಿ ಮರುಶಾಂತಿ ಸ್ಥಾಪಿಸಿ, ದಿ.ಯು.ಕೆ.ಇಬ್ರಾಹೀಂ ಅವರಂತೆ ಸಮರ್ಥ ಆಡಳಿತ ನೀಡಿ. ಹಿಂದೂ, ಮುಸ್ಲಿಮರಲ್ಲಿ ಪರಸ್ಪರ ನಂಬಿಕೆ ಮೂಡಿಸುವ ಕೆಲಸ ಮಾಡಿ, ನಾವೂ ಜೊತೆಗಿದ್ದೇವೆ’ ಎನ್ನುವ ಮಹದಾಸೆಯನ್ನು ಮುಂದಿಟ್ಟರು.

ಎಲ್ಲರೂ ಉಳ್ಳಾಲದಲ್ಲಿ ಸೌಹಾರ್ದತೆ ಬಯಸಿ ವೇದಿಕೆಯಲ್ಲಿದ್ದಾರೆ. ಆದರೂ ಕೋಮು ಸೂಕ್ಷ್ಮ ಪ್ರದೇಶ ಎನ್ನುವ ಕೆಟ್ಟ ಹೆಸರು ಬಂದಿದೆ. ಮತ್ತೆ ಶಾಂತಿ, ಸೌಹಾರ್ದತೆ ಮರುಕಳಿಸುವ ಪ್ರಯತ್ನ ನಡೆಯಬೇಕು ಎಂದು ತೊಕ್ಕೊಟ್ಟು ಸಂತ ಸೆಬಾಸ್ತಿಯನ್ ಕಾಲೇಜು ಪ್ರಾಂಶುಪಾಲ ಎಡ್ವಿನ್ ಮಸ್ಕರೇನಸ್ ಅಭಿಪ್ರಾಯಪಟ್ಟರು.

ನಮ್ಮನ್ನು ಕೇವಲ ಅಭಿನಂದನಾ ಸಭೆ ಮಾತ್ರ ಸೀಮಿತಗೊಳಿಸದಿರಿ, ಉಳ್ಳಾಲದಲ್ಲಿ ಸೌಹಾರ್ದತೆ ಚಿರಗೊಳಿಸುವ ಉದ್ದೇಶದಿಂದ ತಿಂಗಳಿಗೊಂದು ಸಭೆ ನಡೆಸಿ, ನಾವೂ ಬರುತ್ತೇವೆ. ಪರಸ್ಪರ ಸಹೋದರತೆಗೆ ಒತ್ತು ನೀಡಿ. ಉದ್ದಿಮೆಗಳನ್ನು ಆಹ್ವಾನಿಸಿ. ಯುವಕರಿಗೆ ಇಲ್ಲಿಯೇ ಉದ್ಯೋಗಾವಕಾಶ ಕಲ್ಪಸೋಣ ಎನ್ನುವ ಆಶಯವನ್ನು ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್ ವ್ಯಕ್ತಪಡಿಸಿದರು.

ದರ್ಗಾ ಸಮಿತಿ ನಾಮನಿರ್ದೇಶಿತ ಸದಸ್ಯ ಫಾರೂಕ್ ಉಳ್ಳಾಲ್ ಮಾತನಾಡಿ, ಅಪರೂಪ ಎನ್ನುವಂತೆ ಉಳ್ಳಾಲದಲ್ಲಿ ಎಲ್ಲಾ ಧರ್ಮದ ಭಾರೀ ಸಂಖ್ಯೆಯ ಜನ ಸೇರಿದ್ದು ಸಂತಸ ತಂದಿದೆ ಎಂದರು.

ಹಲವು ಯೋಜನೆಗಳ ಘೋಷಣೆ

ಅಭಿನಂದನೆ ಸ್ವೀಕರಿಸಿದ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ಉಳ್ಳಾಲದಲ್ಲಿ ಸೌಹಾರ್ದತೆ ನೆಲೆಸುವ ಸಲುವಾಗಿ ಸರ್ವದರ್ಮ ಮುಖಂಡರ ಸಭೆ ತಿಂಗಳಿಗೊಮ್ಮೆ ಪ್ರತ್ಯೇಕ ಜಾಗದಲ್ಲಿ ಕರೆಯಲಾಗುವುದು ಎಂದರು. ಬಾಬು ಬಂಗೇರ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು ಸನ್ಮಾನಿಸಿದರು.

ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಅಧ್ಯಕ್ಷ ಶ್ರೀಕರ ಕಿಣಿ, ವೀರಭದ್ರ ದೇವಸ್ಥಾನದ ಅಧ್ಯಕ್ಷ ಐತಪ್ಪ ಶೆಟ್ಟಿಗಾರ್, ಶ್ರೀ ಕ್ಷೇತ್ರ ಉಳಿಯತ್ತಾಯ ಉಳಿಯ ಇದರ ಸಂಜೀವ ಉಳಿಯ, ದಲಿತ ಹಿತರಕ್ಷಣಾ ಸಮಿತಿ ಅದ್ಯಕ್ಷ ರೋಹಿತ್ ಉಳ್ಳಾಲ್, ನಗರಸಭಾ ಸದಸ್ಯರಾದ ಬಾಝಿಲ್ ಡಿಸೋಜ, ಇಸ್ಮಾಯೀಲ್ ಪೊಡಿಮೋನು, ಮುಹಮ್ಮದ್ ಹನೀಫ್ ಕೋಟೆಪುರ, ಮುಸ್ತಫಾ ಅಬ್ದುಲ್ಲಾ, ಮುಖಂಡರಾದ ರವೀಂದ್ರರಾಜ್ ಉಳ್ಳಾಲ್, ಯು.ಕೆ.ಯೂಸುಫ್, ಅನ್ವರ್ ಇಮ್ತಿಯಾಝ್, ಸತೀಶ್ ಉಳ್ಳಾಲ್, ಫೈರೋಜ್ ಅಹ್ಮದ್, ಯು.ಕೆ.ನಝೀರ್, ಇಕ್ಬಾಲ್ ಕೆನರಾ, ಫೆಲಿಕ್ಸ್ ಡಿಸೋಜ, ಅಶ್ರಫ್ ಕೋಡಿ, ದರ್ಗಾ ಪ್ರಧಾನ ಕಾರ್ಯದರ್ಶಿ ತ್ವಾಹ ಹಾಜಿ, ಉಪಾಧ್ಯಕ್ಷ ಯು.ಟಿ.ಇಲ್ಯಾಸ್, ಇತರ ಮುಖಂಡರು, ದರ್ಗಾ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ನಗರಸಭೆ ಸದಸ್ಯ ಯು.ಎ.ಇಸ್ಮಾಯೀಲ್ ಸ್ವಾಗತಿಸಿದರು. ಅಝೀಝ್ ಹಕ್ ಅಭಿನಂದನಾ ಪತ್ರ ಓದಿದರು. ಅಯೂಬ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

ಯಾವುದೇ ಶಾಲೆಗಳು ಆಯಾ ಧರ್ಮೀಯರಿಗೆ ಸೀಮಿತವಾಗಬಾರದು, ದರ್ಗಾ ಅಧೀನದಲ್ಲಿರುವ ಶಾಲೆ, ಕಾಲೇಜುಗಳಲ್ಲಿ ಅನ್ಯಧರ್ಮೀಯ ಬಡಮಕ್ಕಳು ಬರುವುದಾದರೆ ಉಚಿತ ಶಿಕ್ಷಣ ನೀಡುತ್ತೇವೆ. ದರ್ಗಾದಲ್ಲಿ ಪದಾಧಿಕಾರಿಯಾಗಿ ಜನಸೇವೆ, ಸೌಹಾರ್ದತೆಗೆ ಆದ್ಯತೆ ನೀಡಿದ ದಿ.ಹಾಜಿ ಯು.ಕೆ.ಇಬ್ರಾಹೀಂ ಹಾಗೂ ಇತರರ ಹೆಸರಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಅವರ ಹೆಸರು ಚಿರಾಯುವನ್ನಾಗಿಸುವ ಪ್ರಯತ್ನ ಮಾಡುತ್ತೇವೆ.

ಅಬ್ದುರ್ರಶೀದ್, ದರ್ಗಾ ನೂತನ ಅಧ್ಯಕ್ಷರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News