ಸುಳ್ಯ: ಕಲ್ಲಪಳ್ಳಿಯ 32 ಕುಟುಂಬಗಳಿಗೆ ಕುಡಿಯುವ ನಳ್ಳಿ ನೀರಿನ ಕೊಡುಗೆ

Update: 2016-05-29 13:57 GMT

ಸುಳ್ಯ, ಮೇ 29: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇರುವುದು ಸ್ವಾವಲಂಬಿ ಬದುಕಿಗೆ ಒತ್ತು ನೀಡುವುದಕ್ಕಾಗಿ. ದುಡಿಯಲು ಶಕ್ತಿ ಇರುವವರು ದುಡಿಯಬೇಕು. ಆಗ ಸ್ವಾವಲಂಬನೆಯ ಬದುಕು ಸಾಧ್ಯ. ಆದರೆ ಇದಕ್ಕೆಲ್ಲ ಪ್ರೇರಣೆಯಾಗಿ ಸ್ವಾವಲಂಬಿ ಬದುಕು ಕಟ್ಟಿಕೊಟ್ಟಿರುವುದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಎಂದು ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್.ಮಂಜುನಾಥ್ ಹೇಳಿದ್ದಾರೆ.

ಅವರು ಬಡ್ಡಡ್ಕ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಂಪಾಜೆ ವಲಯ, ದಶಮಾನೋತ್ಸವ ಸಮಿತಿ ಆಲೆಟ್ಟಿ ಬಿ ಒಕ್ಕೂಟ ಇದರ ವತಿಯಿಂದ ಆಲೆಟ್ಟಿ ಧ.ಗ್ರಾ.ಯೋಜನೆ ಬಿ ಒಕ್ಕೂಟ ದಶಮಾನೋತ್ಸವ ನೆನಪಿಗೆ ಕಲ್ಲಪಳ್ಳಿಯ 32 ಕುಟುಂಬಗಳಿಗೆ ಕುಡಿಯುವ ನಳ್ಳಿ ನೀರಿನ ಕೊಡುಗೆಯ ಉದ್ಘಾಟನೆಯನ್ನು ನೆರವೇರಿಸಿ ಹಾಗೂ ಸಂಪಾಜೆ ವಲಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಇಲ್ಲಿನ ಧ.ಗ್ರಾ.ಯೋಜನೆಯ ಒಕ್ಕೂಟ ಮೂಲಕ ಸುಮಾರು 6ಲಕ್ಷ ವೆಚ್ಚದಲ್ಲಿ ಕಲ್ಲಪಳ್ಳಿಯ 32 ಮನೆಗಳಿಗೆ ಕುಡಿಯುವ ನಳ್ಳಿ ನೀರನ್ನು ಕೊಡುಗೆಯಾಗಿ ನೀಡಿರುವುದು ಇಡೀ ರಾಷ್ಟ್ರಕ್ಕೆ ಮಾದರಿ. ಈ ಯೋಜನೆಯನ್ನು ರೂಪಿಸಿರುವುದು ರಾಷ್ಟ್ರೀಯ ಏಕೀಕರಣಕ್ಕೂ ಕಾರಣವಾಗಿದೆ. ಅಲ್ಲದೆ, ಕೇರಳ ಮತ್ತು ಕರ್ನಾಟಕ ಜನರ ಸಂಬಂಧ ಬೆಳೆಸುವಲ್ಲಿ ಕಾರಣವಾಗಿದೆ. ಸಾಮಾನ್ಯ ಜನರು ಸಣ್ಣ ಸಣ್ಣ ಕ್ಷೇತ್ರದಲ್ಲಿ ಕೆಲಸ ಮಾಡಿದಾಗ ಜಗತ್ತನ್ನೆ ಬದಲಾವಣೆ ಮಾಡಲು ಸಾಧ್ಯ ಎಂದು ಡಾ. ಮಂಜುನಾಥ್ ಹೇಳಿದರು.

ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿ, ಹಿಂದೆ ಕೆಲವೇ ಜನರು ಮಾತ್ರ ಶ್ರೀಮಂತರಾಗಿದ್ದರು. ಆದರೆ ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂದ ಮೇಲೆ ಎಲ್ಲ ಸಾಮಾನ್ಯ ಬಡ ಕುಟುಂಬ ನೆಮ್ಮದಿಯಿಂದ ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಅವರಷ್ಟೆ ಹೆಣ್ಮಕ್ಕಳು ಸ್ವಾವಲಂಬಿಯಾಗಿದ್ದಾರೆ ಎಂದರು.

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಿ.ಬಿ.ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು. ಬಡ್ಡಡ್ಕ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕಿ ವೇದಾವತಿ ಅನಂತ ಗೌರವ ಉಪಸ್ಥಿತರಿದ್ದರು.

ಆಲೆಟ್ಟಿ ಬಿ ಒಕ್ಕೂಟ ನೂತನ ಅಧ್ಯಕ್ಷ ರತ್ನಾಕರ ಪೆರುಮುಂಡ, ನಿಕಟಪೂರ್ವ ಅಧ್ಯಕ್ಷರಾದ ಜಗದೀಶ್ ಪೆರುಮುಂಡ, ಯಶೋಧರ ಕೊಡಗು ಜಿಲ್ಲಾ ಧ.ಗ್ರಾ.ಯೋಜನೆಯ ನಿರ್ದೇಶಕ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಲ್ಲಪಳ್ಳಿಯ 32 ಕುಟುಂಬಗಳಿಗೆ ಕುಡಿಯುವ ನಳ್ಳಿ ನೀರಿನ ಕೊಡುಗೆಯಾಗಿ ನೀಡಲು ಯೋಜನೆ ರೂಪಿಸಿದ ಜಗದೀಶ ಪೆರುಮುಂಡ, ರಾಜೇಶ್ ಮಕ್ಕೆಟ್ಟಿ ಹಾಗೂ ದೇವಿಪ್ರಸಾದ್ ಬಡ್ಡಡ್ಕ, ಕುಂಞಿಆಲಿ ಇವರನ್ನು ಸನ್ಮಾನಿಸಲಾಯಿತು.

ಸುಳ್ಯ ತಾಲೂಕು ಧ.ಗ್ರಾ.ಯೋಜನೆ ಯೋಜನಾಧಿಕಾರಿ ಯುವರಾಜ್ ಜೈನ್ ಸ್ವಾಗತಿಸಿ, ಪುಟ್ಟಣ್ಣ ವರದಿ ವಾಚಿಸಿದರು. ಮರ್ಕಂಜ ಗ್ರಾಮದ ಸೇವಾಪ್ರತಿನಿಧಿ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News