×
Ad

ಮಧ್ಯ ರೈಲ್ವೆಯಿಂದ ಮಹಿಳಾ ಬೋಗಿಯಲ್ಲಿ ಸುರಕ್ಷಾ ‘ಅಪಾಯದ ಗುಂಡಿ’ ವ್ಯವಸ್ಥೆ

Update: 2016-05-29 23:58 IST

ಮುಂಬೈ, ಮೇ 29: ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ, ತುರ್ತು ಸಂದರ್ಭದಲ್ಲಿ ಅಧಿಕಾರಿಗಳನ್ನು ಎಚ್ಚರಿಸುವ ‘ಅಪಾಯದ ಗುಂಡಿ’ ವ್ಯವಸ್ಥೆಯನ್ನು ಮಧ್ಯ ರೈಲ್ವೆ ಅಳವಡಿಸಿದೆ.

4 ಮಹಿಳಾ ಬೋಗಿಗಳಲ್ಲಿ ‘ಕೆಂಪು ಒತ್ತು ಗುಂಡಿ’ಯ ಈ ಸುರಕ್ಷಾ ವ್ಯವಸ್ಥೆಯಿರುವ ಸ್ಥಳೀಯ ರೈಲೊಂದಕ್ಕೆ ಕಳೆದ ವಾರ ಪ್ರಾಯೋಗಿಕ ನೆಲೆಯಲ್ಲಿ ಚಾಲನೆ ನೀಡಲಾಗಿದೆಯೆಂದು ಮಧ್ಯರೈಲ್ವೆಯ ಹಿರಿಯಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ಪ್ರಸ್ತುತ, ಮಹಿಳಾ ಪ್ರಯಾಣಿಕರು ತುರ್ತು ಸಂದರ್ಭದಲ್ಲಿ ಕರೆ ಅಥವಾ ಎಸ್‌ಎಂಎಸ್ ಮೂಲಕ ಸಹಾಯವಾಣಿ ಅಥವಾ ಸರಪಳಿ ಎಳೆಯುವುದನ್ನು ಅವಲಂಬಿಸಬೇಕಾಗಿದೆ. ಆದರೆ, ಈ ವ್ಯವಸ್ಥೆಯ ಮೂಲಕ ತಕ್ಷಣವೇ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆಯೆಂದು ಅವರು ಹೇಳಿದ್ದಾರೆ.
ತುರ್ತು ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರು ಈ ಕೆಂಪುಗುಂಡಿಯನ್ನು ಒತ್ತಬಹುದು. ಅದು ಅಪಾಯ ಸರಪಳಿಯ ಪಕ್ಕದಲ್ಲಿರುತ್ತದೆ. ಅದು ಬೋಗಿಯ ಹೊರಗೆ ಒದಗಿಸಲಾಗಿರುವ ಫ್ಲಾಶರ್ ಯುನಿಟ್‌ನ ಮೇಲೆ ದೃಶ್ಯ-ಶ್ರಾವ್ಯ ಸೂಚನೆಯೊಂದನ್ನು ನೀಡುತ್ತದೆ. ಆ ಮೂಲಕ ಅದು ಪ್ಲಾಟ್‌ಫಾರ್ಮ್‌ನಲ್ಲಿರುವ ಪ್ರಯಾಣಿಕರು ಹಾಗೂ ಅಧಿಕಾರಿಗಳನ್ನು ಎಚ್ಚರಿಸುತ್ತದೆ.
ದೃಶ್ಯ-ಶ್ರಾವ್ಯ ಸೂಚನೆಯೊಂದು ರೈಲಿನ ಚಾಲಕ, ಸಿಬ್ಬಂದಿ ಹಾಗೂ ನಿಯಂತ್ರಣ ಕೊಠಡಿಗೂ ಲಭಿಸುತ್ತದೆ. ದೃಶ್ಯ-ಶ್ರಾವ್ಯ ಅಲರಾಂನೊಂದಿಗೆ ರೀಸೆಟ್ ಗುಂಡಿಯನ್ನು ಒದಗಿಸಲಾಗಿದೆ. ಇದನ್ನು ಅಲರಾಂ ಸೂಚನೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ಬಳಸಬಹುದೆಂದು ಮಧ್ಯರೈಲ್ವೆಯ ಪತ್ರಿಕಾ ಪ್ರಕಟನೆಯೊಂದು ವಿವರಿಸಿವೆ.
ಮಾತುಂಗದ ರೈಲು ಬೋಗಿಗಳ ಕಾರ್ಖಾನೆಯಲ್ಲಿ ಈ ವ್ಯವಸ್ಥೆಯ ಅಳವಡಿಕೆ ಕಾರ್ಯ ನಡೆದಿದೆ.
ಮಹಿಳಾ ಪ್ರಯಾಣಿಕರ ಸುರಕ್ಷೆಯತ್ತ ಇದೊಂದು ಮಧ್ಯ ರೈಲ್ವೆಯ ಸ್ವಾಗತಾರ್ಹ ಕ್ರಮವೆಂದು ರೈಲ್ವೆ ಪರಿಣತರು ಶ್ಲಾಘಿಸಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News