ಕೆದ್ದಳಿಕೆ ಸರಕಾರಿ ಶಾಲೆಯಲ್ಲಿ ವಿಶಿಷ್ಟ ರೀತಿಯ ಪ್ರಾರಂಭೋತ್ಸವ
ಬಂಟ್ವಾಳ, ಮೇ 30: ಶೈಕ್ಷಣಿಕ ವರ್ಷದ ಮೊದಲ ದಿನವಾದ ಸೋಮವಾರ ಬಂಟ್ವಾಳ ತಾಲೂಕಿನ ಕೆದ್ದಳಿಕೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ’ತಾಯಿ ಮಡಿಲಿನಿಂದ ಶಾಲೆಯ ತೊಟ್ಟಿಲಿಗೆ’ ಎಂಬ ಘೋಷವಾಕ್ಯದೊಂದಿಗೆ ಶಾಲಾ ಪ್ರಾರಂಭೋತ್ಸವವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ 1ನೆ ತರಗತಿಗೆ ಸೇರ್ಪಡೆಯಾದ ಮಕ್ಕಳಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸುವ ಮೂಲಕ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
1ನೆ ತರಗತಿಗೆ ಸೇರ್ಪಡೆಗೊಂಡ ಮಕ್ಕಳನ್ನು ವಾದ್ಯ, ಬ್ಯಾಂಡ್, ವಿವಿಧ ವೇಷ ಭೂಷಣಗಳ ಕುಣಿತ, ಘೋಷಣೆಗಳೊಂದಿಗೆ ಶಾಲೆಯಿಂದ 300 ಮೀಟರ್ ದೂರ ಇರುವ ಕೆದ್ದಳಿಕೆ ಅಂಗನವಾಡಿ ಕೇಂದ್ರದಿಂದ ಮೆರವಣಿಗೆ ಮೂಲಕ ಶಾಲೆಗೆ ಕರೆತರಲಾಯಿತು. ಮೆರವಣಿಗೆಯಲ್ಲಿ ಬಂದ ಮಕ್ಕಳನ್ನು ಶಾಲಾ ಬಳಿ ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಪನ್ನೀರು ಸಿಂಪಡಿಸಿ, ಹೂ ಹಾಕಿ ಸ್ವಾಗತಿಸಿದರು. ಅಲ್ಲದೆ 1ನೆ ತರಗತಿಯ ಮಕ್ಕಳಿಗೆ ಆರತಿ ಬೆಳಗಿ, ಹಣ್ಣು ಹಂಪಲು ನೀಡಿ ಗೌರವಿಸಲಾಯಿತು.
ಬಳಿಕ ಮಾತನಾಡಿದ ಚಂದ್ರಹಾಸ ಕರ್ಕೇರಾ, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಶೈಕ್ಷಣಿಕ ಪ್ರಗತಿಗೆ, ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಉನ್ನತ ಶಿಕ್ಷಣ ಪಡೆಯುವಂತಾಗಬೇಕು ಎಂದು ಹೇಳಿದರು.
ಇದೆ ವೇಳೆ ಅವರು ಶಾಲೆಯ ಹೊರೆ ಕಾಣಿಕೆ ಉಗ್ರಾಣವನ್ನು ಉದ್ಘಾಟಿಸಿದರು.
ಊರವರಿಂದ ತರಕಾರಿಗಳು, ಅಕ್ಕಿ, ತೆಂಗಿನಕಾಯಿ ಮೊದಲಾದ ಹೊರೆಕಾಣಿಕೆ ಶಾಲೆಗೆ ಸಮರ್ಪಣೆಯಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ಜಿಪಂ ಸದಸ್ಯ ಬಿ.ಪದ್ಮಶೇಖರ ಜೈನ್, ಬಂಟ್ವಾಳ ತಾ. ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾಪಂ ಸ್ಥಾಯಿ ಸಮಿತಿ ಸದಸ್ಯೆ ಧನಲಕ್ಷ್ಮಿೀ ಬಂಗೇರ, ಶಿಕ್ಷಣ ಸಂಪನ್ಮೂಲಾಧಿಕಾರಿ ರಾಜೇಶ್, ಅಕ್ಷರದಾಸೋಹ ಅಧಿಕಾರಿ ಶ್ರೀಕಾಂತ್ ಶುಭ ಹಾರೈಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ದಿವಾಕರ ದಾಸ್, ಗ್ರಾಪಂ ಅಧ್ಯಕ್ಷ ಸಂತೋಷ್ ಪೂಂಜ, ಉಪಾಧ್ಯಕ್ಷೆ ಚಂದ್ರಾವತಿ, ಸದಸ್ಯರಾದ ಮೋಹನ ಆಚಾರ್ಯ, ಸತೀಶ್ ಪಡಂತ್ರಬೆಟ್ಟು, ಶಾಲಾ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.
ಉದಯ ಕುಮಾರ್ ಜ್ಯೋತಿ ಗುಡ್ಡೆ ನೀರಿನ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಲೇಖನ ಪುಸ್ತಕಗಳನ್ನು ವಿತರಿಸಲಾಯಿತು.
ಮುಖ್ಯ ಶಿಕ್ಷಕ ರಮೇಶ ನಾಯಕ್ ರಾಯಿ ಸ್ವಾಗತಿಸಿದರು. ಶಾಲಾ ಸಂಪನ್ಮೂಲ ವ್ಯಕ್ತಿ ಗೋಪಾಲ ಅಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಚಂದಪ್ಪ ವಂದಿಸಿದರು. ರಂಗ ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.