ಹೃದಯಾಘಾತದಿಂದ ಜಾರ್ಖಂಡ್ ಮೂಲದ ಕಾರ್ಮಿಕ ಮೃತ್ಯು
Update: 2016-05-30 17:22 IST
ಪುತ್ತೂರು, ಮೇ 30: ಜಾರ್ಖಂಡ್ ಮೂಲದ ಕಾರ್ಮಿಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ರವಿವಾರ ರಾತ್ರಿ ಪುತ್ತೂರು ತಾಲೂಕಿನ ಪಾಣಾಜೆ ಸಮೀಪದ ಸೂರಂಬೈಲು ಎಂಬಲ್ಲಿ ನಡೆದಿದೆ.
ಸೂರಂಬೈಲು ನಿವಾಸಿ ಆನಂದ ರೈ ಎಂಬವರ ತೋಟದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಅರವಿಂದ್ ಕುಮಾರ್(28) ಮೃತಪಟ್ಟ ವ್ಯಕ್ತಿ.
ಕಳೆದ ಸುಮಾರು 6 ತಿಂಗಳಿನಿಂದ ಜಾರ್ಖಂಡ್ ಮೂಲದ ಐವರು ವ್ಯಕ್ತಿಗಳು ತೋಟದ ಕಾರ್ಮಿಕರಾಗಿ ದುಡಿಯುತ್ತಿದ್ದರು. ಈ ತಂಡದಲ್ಲಿದ್ದ ಅರವಿಂದ್ ಕುಮಾರ್ ಅಡುಗೆ ಕೆಲಸ ಮಾಡುತ್ತಿದ್ದರು. ರವಿವಾರ ರಾತ್ರಿ ಅರವಿಂದ್ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯರು ಪರೀಕ್ಷೆ ನಡೆಸುತ್ತಿದ್ದ ಸಂದರ್ಭ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿತ್ತು.
ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.