×
Ad

ಪುತ್ತೂರು ನಗರಸಭೆ: ಮೇ.31ರಿಂದ ಜೂ.4ರವರೆಗೆ ಕಡತ ವಿಲೇವಾರಿ ಅಭಿಯಾನ

Update: 2016-05-30 19:45 IST

ಪುತ್ತೂರು, ಮೇ 30: ನಗರಸಭೆಯಲ್ಲಿ ಬಾಕಿಯಿರುವ ಕಡತಗಳನ್ನು ಶೀಘ್ರ ವಿಲೇವಾರಿ ಮಾಡುವ ಉದ್ದೇಶದಿಂದ ಮೇ 31ರಿಂದ ಜೂ.4ರವರೆಗೆ ಕಡತ ವಿಲೇವಾರಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಹೇಳಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟಡ ಪರವಾನಿಗೆ, ಉದ್ಯಮ ಪರವಾನಿಗೆ, ಆಸ್ತಿ ಖಾತಾ ರಿಜಿಸ್ಟರ್, ಆಸ್ತಿ ವರ್ಗಾವಣೆ, ನೀರಿನ ಸಂಪರ್ಕ ಮೊದಲಾದ ಕಾರ್ಯಗಳನ್ನು ಅಭಿಯಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ನಗರಸಭೆ ಕಚೇರಿಯ ಸಿಬ್ಬಂದಿ ಕಚೇರಿಯಲ್ಲಿ ಇದ್ದು, ಕಡತ ವಿಲೇವಾರಿ ಮಾಡಲಿದ್ದಾರೆ. ಈ ದಿನಗಳಲ್ಲಿ ಸಾರ್ವಜನಿಕರಿಗೆ ನೀರಿನ ವಿಭಾಗ, ಆರೋಗ್ಯ ವಿಭಾಗ, ಸಕಾಲ, ಜನನ- ಮರಣ ವಿಭಾಗ, ಟಪ್ಪಾಲು ಅರ್ಜಿ ಸ್ವೀಕಾರ ವಿಭಾಗಗಳಿಗೆ ಎಂದಿನಂತೆ ಪ್ರವೇಶ ಇರುತ್ತದೆ. ಮೇಲಂತಸ್ಥಿನಲ್ಲಿರುವ ನಗರಸಭೆಯ ಕಚೇರಿಗೆ ಮಧ್ಯಾಹ್ನ 2ರಿಂದ 3ರವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ ಎಂದು ಹೇಳಿದರು.

ಕಟ್ಟಡ ಪರವಾನಿಗೆ, ಉದ್ಯಮ ಪರವಾನಿಗೆ, ಆಸ್ತಿ ಖಾತಾ ರಿಜಿಸ್ಟರ್, ಆಸ್ತಿ ವರ್ಗಾವಣೆ, ನೀರಿನ ಸಂಪರ್ಕ ಮೊದಲಾದ ಕಾರ್ಯಗಳನ್ನು ಆನ್‌ಲೈನ್ ತಂತ್ರಾಂಶದ ಮೂಲಕ ನಿರ್ವಹಿಸಲು ಸರಕಾರ ನಿರ್ದೇಶನ ನೀಡಿದೆ. ಇದು ಈಗಾಗಲೇ ಅನುಷ್ಠಾನಗೊಂಡಿದೆ. ಈ ಎಲ್ಲಾ ವಿಭಾಗಗಳ ಸೇವೆಗಳನ್ನು ತಂತ್ರಾಂಶದಲ್ಲಿ ದಾಖಲಿಸುವ ಅಗತ್ಯವಿದೆ. ನಗರಸಭೆಯಲ್ಲಿ ಸೂಕ್ತ ಉಪಕರಣಗಳ ಕೊರತೆ ಇದ್ದುದರಿಂದ ಇದುವರೆಗೆ ಕಡತ ವಿಲೇವಾರಿಗೆ ಬಾಕಿ ಇದೆ. ಹೆಚ್ಚುವರಿಯಾಗಿ 8 ಸ್ಕಾೃನರ್‌ಗಳನ್ನು ತರಿಸಿಕೊಂಡಿದ್ದು, ಐದು ದಿನಗಳಲ್ಲಿ ವಿಲೇವಾರಿ ಕೆಲಸ ನಡೆಯಲಿದೆ ಎಂದರು.

ಪೌರಾಯುಕ್ತೆ ರೇಖಾ ಜೆ. ಶೆಟ್ಟಿ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 2 ಸಾವಿರಕ್ಕೂ ಮಿಕ್ಕಿ ಆಸ್ತಿಗಳಿವೆ. ಕಟ್ಟಡ ರಚನೆ ಪ್ರತ್ಯೇಕವಿದೆ. ಉಳಿಕೆ ಜಾಗದ ಖಾತಾ ನಿರ್ವಹಣೆಯೂ ಆಗಬೇಕಾಗಿದೆ. ಇದುವರೆಗೆ ಕೇಳಿದ ಆಸ್ತಿಗಳನ್ನು ಮಾತ್ರ ಖಾತಾಗೆ ಸೇರಿಸಲಾಗಿದೆ. ನಗರಸಬೆಗೆ 284 ಸಿಬ್ಬಂದಿ ಅಗತ್ಯವಿದ್ದು, ಕೇವಲ 46 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಅಭಿಯಾನ ಕೈಗೊಳ್ಳುವ ಅಗತ್ಯ ಎದುರಾಗಿದೆ. ಮಹಿಳಾ ಸಿಬ್ಬಂದಿ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ರಾತ್ರಿ ಮಹಿಳಾ ಸಿಬ್ಬಂದಿಯನ್ನು ಮನೆಗೆ ಕಳುಹಿಸಲು ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಮುಹಮ್ಮದ್ ಅಲಿ, ಅನ್ವರ್ ಖಾಸಿಂ, ಮುಖೇಶ್ ಕೆಮ್ಮಿಂಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News