×
Ad

ಬ್ಯಾಂಕ್ ವಿರುದ್ಧ ಭಾರತೀಯ ದಂಪತಿಯಿಂದ 10,082 ಕೋಟಿ ಪರಿಹಾರ ದಾವೆ

Update: 2016-05-30 19:54 IST

ಮೆಲ್ಬರ್ನ್, ಮೇ 30: ಆಸ್ಟ್ರೇಲಿಯದ ಭಾರತೀಯ ಮೂಲದ ದಂಪತಿಯೊಂದು ಎಎನ್‌ಝಡ್ ಬ್ಯಾಂಕ್‌ನಿಂದ 150 ಕೋಟಿ ಡಾಲರ್ (ಸುಮಾರು 10,082 ಕೋಟಿ ರೂಪಾಯಿ) ಪರಿಹಾರ ಕೋರಿ ಇಂದು ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಇದು ಆಸ್ಟ್ರೇಲಿಯದ ನ್ಯಾಯಾಂಗ ಇತಿಹಾಸದಲ್ಲೇ ಪರಿಹಾರ ಕೋರಿ ಹೂಡಲಾದ ಅತಿ ದೊಡ್ಡ ದಾವೆಯಾಗಿದೆ.

ಸಾಲ ವಸೂಲಾತಿಯ ವೇಳೆ, ತನ್ನ ರಸಗೊಬ್ಬರ ಕಂಪೆನಿಯ ಶೇರುಗಳಿಗೆ ಕಡಿಮೆ ಬೆಲೆ ನಿಗದಿಪಡಿಸಿ ಹೆಚ್ಚು ಸಾಲವನ್ನು ಬ್ಯಾಂಕ್ ವಸೂಲು ಮಾಡಿದೆ ಎಂದು ಈ ದಂಪತಿ ಆರೋಪಿಸಿದೆ.

ಪಂಕಜ್ ಮತ್ತು ರಾಧಿಕಾ ಓಸ್ವಾಲ್ ವಿಕ್ಟೋರಿಯ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ವೆಸ್ಟರ್ನ್ ಆಸ್ಟ್ರೇಲಿಯದಲ್ಲಿರುವ ಓಸ್ವಾಲ್ ದಂಪತಿಯ ಕಂಪೆನಿ ಬಾರುಪ್ ಫರ್ಟಿಲೈಝರ್ಸ್‌ನ್ನು 2010ರಲ್ಲಿ ರಿಸೀವರ್‌ಗಳು ಮುಟ್ಟುಗೋಲು ಹಾಕಿದ ಬಳಿಕ ಕಂಪೆನಿಯನ್ನು ಮಾರಾಟ ಮಾಡುವಂತೆ ಒತ್ತಡ ಹೇರಲಾಗಿತ್ತು ಎನ್ನುವುದು ಮೊಕದ್ದಮೆಯ ಪ್ರಮುಖ ಅಂಶವಾಗಿದೆ.

ಆಸ್ಟ್ರೇಲಿಯ ಆ್ಯಂಡ್ ನ್ಯೂಝಿಲ್ಯಾಂಡ್ ಬ್ಯಾಂಕಿಂಗ್ ಗ್ರೂಪ್ (ಎಎನ್‌ಎಝ್) ಮತ್ತು ರಿಸೀವರ್ ಪಿಪಿಬಿ ತಮ್ಮ ರಸಗೊಬ್ಬರ ಉದ್ಯಮದ ಶೇರುಗಳಿಗೆ 150 ಕೋಟಿ ಡಾಲರ್‌ನಷ್ಟು ಕಡಿಮೆ ವೌಲ್ಯ ನಿಗದಿಪಡಿಸಿವೆ ಎಂದು ದಂಪತಿ ಆರೋಪಿಸಿದ್ದಾರೆ.

2010ರಲ್ಲಿ ಎಎನ್‌ಝಡ್ ಬ್ಯಾಂಕ್ ಬಾರುಪ್ ಕಂಪೆನಿಗಳ ಸಮೂಹಕ್ಕೆ ರಿಸೀವರ್‌ಗಳನ್ನು ನೇಮಿಸಿತ್ತು.

ಬಾರುಪ್ ಹೋಲ್ಡಿಂಗ್ಸ್‌ನಲ್ಲಿ ತಾವು ಹೊಂದಿದ್ದ 65 ಶೇಕಡ ಶೇರುಗಳನ್ನು 2012ರಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿತ್ತು ಎಂದು ಒಸ್ವಾಲ್ಸ್ ದಂಪತಿ ಆರೋಪಿಸಿದ್ದಾರೆ.

ಕಂಪೆನಿಯ ಆಧಾರದಲ್ಲಿ ತಾವು ಪಡೆದುಕೊಂಡಿದ್ದ 90 ಕೋಟಿ ಡಾಲರ್ (ಸುಮಾರು 6,050 ಕೋಟಿ ರೂಪಾಯಿ) ಸಾಲವನ್ನು ವಸೂಲು ಮಾಡುವುದಕ್ಕಾಗಿ ಎಎನ್‌ಝಡ್ ಬ್ಯಾಂಕ್, ಬಾರುಪ್‌ನಲ್ಲಿ ತಾವು ಹೊಂದಿದ್ದ ಶೇರುಗಳನ್ನು ಕಡಿಮೆ ಬೆಲೆಗೆ ಮಾರಲಾಗಿತ್ತು ಎಂದು ಹೇಳಿದ್ದಾರೆ. ವಾಸ್ತವವಾಗಿ ತಮ್ಮ ಶೇರುಗಳು 250 ಕೋಟಿ ಡಾಲರ್ (16,804 ಕೋಟಿ ರೂಪಾಯಿ) ಬೆಲೆ ಬಾಳುತ್ತಿದ್ದವು ಎಂದು ಅವರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News