ಬೆಳ್ತಂಗಡಿ: ಮಹಿಳೆಯ ಚಿನ್ನಾಭರಣ ಕಳವು
ಬೆಳ್ತಂಗಡಿ, ಮೇ 30: ಪುದುವೆಟ್ಟು ಗ್ರಾಮದ ಮಿಯಾರಿನಲ್ಲಿರುವ ತನ್ನ ಮನೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ವೇಳೆ ಮಹಿಳೆಯೋರ್ವರ ಕೈಯಲ್ಲಿದ್ದ ಸುಮಾರು 16 ಪವನ್ ಚಿನ್ನದ ಆಭರಣಗಳು ಕಳ್ಳತನವಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಮಿಯಾರು ನಿವಾಸಿ ನಝೀರ್ ಎಂಬವರ ಪತ್ನಿ ಸಫರಾಬಿ ಚಿನ್ನ ಕಳೆದುಕೊಂಡ ಮಹಿಳೆ.
ಇವರು ರವಿವಾರ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಿಂದ ಬೆಳ್ತಂಗಡಿಗೆ ಹೋಗುತ್ತಿದ್ದ ವೇಳೆ ಉಜಿರೆ ಪೇಟೆಯಲ್ಲಿ ಚಿನ್ನ ಕಳೆದುಹೋಗಿದೆ. ಮಿಯಾರಿನಿಂದ ಜೀಪಿನಲ್ಲಿ ಬಂದ ಇವರು ಜೀಪು ಚಾಲಕನಿಗೆ ಹಣ ಕೊಟ್ಟಿದ್ದರು. ಆಗ ವ್ಯಾನಿಟಿ ಬ್ಯಾಗಿನಲ್ಲಿ ಇದ್ದ ಪರ್ಸ್‌ನಲ್ಲಿ ಚಿನ್ನವಿತ್ತು. ಅಲ್ಲಿಂದ ಬಂದು ಬೆಳ್ತಂಗಡಿಯ ಬಸ್‌ಗೆ ಹತ್ತಿ ಬ್ಯಾಗ್ ತೆಗೆದಾಗ ಚಿನ್ನ ನಾಪತ್ತೆಯಾಗಿತ್ತು. ಕೂಡಲೆ ಸ್ಥಳೀಯರಿಗೆ ಮಾಹಿತಿ ನೀಡಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಬ್ಯಾಗಿನಲ್ಲಿ ಸುಮಾರು 16 ಪವನ್ ಚಿನ್ನವಿತ್ತು ಎನ್ನಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.