×
Ad

ಆರ್ಥಿಕ ನೀತಿಗಳ ವಿರುದ್ಧ ಹೋರಾಡಲು ವಸಂತ ಆಚಾರಿ ಕರೆ

Update: 2016-05-30 21:25 IST

ಮಂಗಳೂರು, ಮೇ 30: ಕೇಂದ್ರ ಸರಕಾರವು ಕಾರ್ಮಿಕರ ಪರವಾದ ಕಾನೂನುಗಳನ್ನು ದುರ್ಬಲಗೊಳಿಸಿ, ಮಾಲಕರು ಹಾಗೂ ಬಂಡವಾಳಶಾಹಿಗಳ ಪರವಾದ ನೀತಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ಅವಕಾಶ ಮಾಡಿಕೊಟ್ಟಿದೆ. ಕಾರ್ಮಿಕ ಪರವಾದ 44 ಕಾನೂನುಗಳನ್ನು 6 ಘಟಕಗಳಲ್ಲಿ ಸಂಯೋಜಿಸಿ ಮಾಲಕರ ಪರವಾಗಿ ತಿದ್ದುಪಡಿಗೊಳಿಸಲಾಗುತ್ತಿದೆ. ಪ್ರೊವಿಡೆಂಟ್ ಫಂಡ್ ರದ್ದುಗೊಳಿಸಿ, ಅಭದ್ರ ನೂತನ ಪಿಂಚಣಿ ಯೋಜನೆಯನ್ನು ಕಾರ್ಮಿಕರಿಗೆ ಜಾರಿಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಹೇಳಿದ್ದಾರೆ.

ಅವರು ಮಂಗಳೂರಿನ ಬೋಳಾರ ಟೈಲ್ ವರ್ಕರ್ಸ್ ಯೂನಿಯನ್ ಸಭಾಂಗಣದ ಕಾಂ.ರಾಮಚಂದ್ರ ಬೋಳಾರ ವೇದಿಕೆಯಲ್ಲಿ ಜರಗಿದ ಸಿಐಟಿಯು 2ನೆ ಮಂಗಳೂರು ನಗರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಎರಡು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರವು ಹಿಂದಿನ ಸರಕಾರದ ಆರ್ಥಿಕ ನೀತಿಗಳನ್ನು ಸಂಪೂರ್ಣವಾಗಿ ಕೈಬಿಡುವುದಾಗಿಯೂ, ಕಾರ್ಮಿಕರ ಹಾಗೂ ಬಡಜನರ ಪರವಾದ ಆಡಳಿತ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ ಹಿಂದಿನ ಕಾಂಗ್ರೆಸ್ ಸರಕಾರದ ನವಉದಾರವಾದೀ ನೀತಿಗಳನ್ನು ಈಗಿನ ಕೇಂದ್ರ ಸರಕಾರ ಜಾರಿ ಮಾಡುತ್ತಿದೆ ಎಂದರು.

ಸರಕಾರಗಳು ಜನತೆಗೆ ನೀಡುವ ವಿವಿಧ ಸಬ್ಸಿಡಿಗಳನ್ನು ನಿಲ್ಲಿಸಬೇಕು. ಕಾರ್ಮಿಕರಿಗೆ ನೀಡುವ ಸಾಮಾಜಿಕ ಭದ್ರತೆಯನ್ನು ಅನುತ್ಪಾದಕ ವೆಚ್ಚ ಎಂದು ಪರಿಗಣಿಸಿ ಅದನ್ನು ಕೈಬಿಡಲು ಒತ್ತಾಯಿಸುತ್ತದೆ. ಈ ನೀತಿಗಳಿಂದಾಗಿ ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ಬೆಲೆಯೇರಿಕೆಗೆ ನಿಯಂತ್ರಣವಿಲ್ಲ. ಕಾರ್ಮಿಕ ವರ್ಗ ಇಂಥ ನೀತಿಗಳ ವಿರುದ್ಧ ಹೋರಾಡುತ್ತಿರುವಾಗ, ಸರಕಾರಗಳು ಕಾರ್ಮಿಕರ ಮೇಲೆ ಹಲವು ರೀತಿಯಲ್ಲಿ ದಾಳಿ ಮಾಡುತ್ತಿದೆ ಎಂದು ಅವರು ಎಚ್ಚರಿಕೆ ನೀಡಿದರು.

ನಿಜವಾಗಿ ಬಹುಸಂಖ್ಯಾತರಾಗಿರುವ ಕಾರ್ಮಿಕರು ಒಗ್ಗೂಡುವುದನ್ನು ಆಳುವ ಕೇಂದ್ರ ಸರಕಾರ ಸಹಿಸುತ್ತಿಲ್ಲ. ಹಾಗಾಗಿ ಹಿಂದುತ್ವದ ವಿಚಾರವನ್ನು ವಿಶೇಷವಾಗಿ ಪ್ರಚಾರಗೊಳಿಸಿ, ಕಾರ್ಮಿಕರ ಒಗ್ಗಟ್ಟನ್ನು ಮುರಿಯಲು ಯತ್ನಿಸಲಾಗುತ್ತಿದೆ. ಕಾರ್ಮಿಕ ವರ್ಗವನ್ನು ರಾಷ್ಟ್ರ ವಿರೋಧಿಗಳೆಂದೂ, ಹಿಂದುತ್ವವಾದಿಗಳನ್ನು ರಾಷ್ಟ್ರಪ್ರೇಮಿಗಳೆಂದೂ ನಿರೂಪಿಸಲಾಗುತ್ತಿದೆ. ಕಾರ್ಮಿಕರ ಒಗ್ಗಟ್ಟನ್ನು ಮುರಿಯುವ, ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸುವ ಕೇಂದ್ರ ಸರಕಾರದ ನೀತಿಗಳ ವಿರುದ್ಧ ತೀವ್ರ ಥರದ ಹೋರಾಟವನ್ನು ಕಾರ್ಮಿಕ ವರ್ಗ ನಡೆಸಬೇಕಾಗುತ್ತದೆ ಎಂದು ವಸಂತ ಆಚಾರಿ ಹೇಳಿದರು.

ಸಪ್ಟೆಂಬರ್ 2ರಂದು ಅಖಿಲ ಭಾರತ ಮುಷ್ಕರವನ್ನು ಕಾರ್ಮಿಕ ಸಂಘಟನೆಗಳು ಸಂಯುಕ್ತವಾಗಿ ಹಮ್ಮಿಕೊಂಡಿದ್ದು, ಮಂಗಳೂರು ನಗರದ ಕಾರ್ಮಿಕ ಸಂಘಟನೆಗಳು ಈ ಮುಷ್ಕರವನ್ನು ಯಶಸ್ವಿಗೊಳಿಸಿ, ಕೇಂದ್ರ ಸರಕಾರ ತನ್ನ ಕಾರ್ಮಿಕ ವಿರೋಧಿ ನೀತಿಯನ್ನು ಕೈಬಿಡುವಂತೆ ಮಾಡಲು ವಸಂತ ಆಚಾರಿ ಕರೆ ನೀಡಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಸಿಐಟಿಯು ನಗರ ಅಧ್ಯಕ್ಷರಾದ ಜಯಂತಿ ಬಿ. ಶೆಟ್ಟಿ ಅವರು ವಹಿಸಿದ್ದರು.

ಸಿಐಟಿಯು ನಗರ ಸಮಿತಿಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಮುಖಂಡರಾದ ಬಾಬು ದೇವಾಡಿಗ, ಭಾರತಿ ಬೋಳಾರ, ಯೋಗೀಶ್ ಜಪ್ಪಿನಮೊಗರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News