ಮೂಡುಬಿದಿರೆ: ಬ್ಲ್ಯಾಕ್‌ಮೇಲ್ ಪ್ರಕರಣದ ಆರೋಪಿಗಳಿಗೆ ಜಾಮೀನು
ಮೂಡುಬಿದಿರೆ, ಮೇ 30: 2 ಲಕ್ಷ ರೂ.ಗಾಗಿ ಪುತ್ತಿಗೆ ಗುಡ್ಡೆಯಂಗಡಿಯ ಪುರೋಹಿತ ರಾಘವೇಂದ್ರ ಪೂಜಾರಿ ಎಂಬವರಿಗೆ ಬ್ಲ್ಯಾಕ್ ಮೇಲ್ ಮಾಡಿದ ಆರೋಪದಲ್ಲಿ ಶನಿವಾರ ಪೊಲೀಸರಿಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ನಾಲ್ವರು ಬಜರಂಗದಳ ಕಾರ್ಯಕರ್ತರಿಗೆ ಮೂಡುಬಿದಿರೆ ಕೋರ್ಟ್ ಸೋಮವಾರ ಜಾಮೀನು ನೀಡಿದೆ.
ಪ್ರಕರಣದಲ್ಲಿ ಮಂಗಳೂರಿನ ವಿಶ್ವನಾಥ್ ಮತ್ತು ರೋಹಿತ್ ಕುಮಾರ್, ಬಂಟ್ವಾಳದ ಗುರುರಾಜ್ ಹಾಗೂ ಮೂಡುಬಿದಿರೆಯ ಸಂತೋಷ್ ಪೂಜಾರಿ ಬಂಧಿತರಾಗಿದ್ದು, ಸೋಮವಾರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ಬೆಳ್ತಂಗಡಿ ಶಿಶಿಲದ ರೋಹಿತ್ ಇನ್ನೂ ತಲೆಮರೆಸಿಕೊಂಡಿದ್ದಾನೆ.
ಕೋರ್ಟ್‌ಗೆ ಅಫಿದಾವಿತ್ ಸಲ್ಲಿಸಿದ ದೂರುದಾರ
ನನ್ನ ಮೊಬೈಲ್‌ಗೆ ಕರೆ ಮಾಡಿ ರೂ 2 ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿದ್ದರೆಂದು ರಾಘವೇಂದ್ರ ಪೂಜಾರಿ ನೀಡಿದ ದೂರಿನಂತೆ ಪೊಲೀಸರು ಶನಿವಾರ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ ನಂತರ ನಡೆದ ಬೆಳವಣಿಗೆಯೊಂದರಲ್ಲಿ ದೂರುದಾರ ರಾಘವೇಂದ್ರ ಅವರು ದೂರಿನಲ್ಲಿ ಸಂತೋಷ್ ಪೂಜಾರಿ ಅವರ ಹೆಸರನ್ನು ತಪ್ಪು ಮಾಹಿತಿಯಿಂದ ಸೇರಿಸಲಾಗಿದ್ದು ಪ್ರಕರಣದಲ್ಲಿ ಅವರ ಪಾತ್ರ ಇಲ್ಲ ಎಂದು ವಕೀಲ ಚೇತನ್ ಕುಮಾರ್ ಶೆಟ್ಟಿ ಮೂಲಕ ಕೋರ್ಟ್‌ಗೆ ಅಫಿದಾವಿತ್ ಸಲ್ಲಿಸಿದ್ದರು.