×
Ad

ಆದಿರಪಲ್ಲಿ ಜಲವಿದ್ಯುತ್ ಯೋಜನೆ

Update: 2016-05-30 23:40 IST

ಕೊಚ್ಚಿ, ಮೇ 30: ಕೇರಳದ ಜೈವಿಕ ಸೂಕ್ಷ್ಮ ಆದಿರಪಲ್ಲಿಯಲ್ಲಿ ಸುದೀರ್ಘ ಸಮಯದಿಂದ ಬಾಕಿಯಿರುವ ಜಲ ವಿದ್ಯುತ್ ಯೋಜನೆಯನ್ನು ಮುಂದುವರಿಸುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ನಿರ್ಧಾರವನ್ನು ಹಿರಿಯ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಇಂದು ಟೀಕಿಸಿದ್ದಾರೆ. ಇದು ಜೈವಿಕ ವಿನಾಶಕ್ಕೆ ಸರಿಯಾದ ಮದ್ದೆಂದು ಅವರು ವ್ಯಾಖ್ಯಾನಿಸಿದ್ದಾರೆ.

ಪರಿಸರವಾದಿಗಳು ಹಾಗೂ ಅವರ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ, ಚಾಲಕ್ಕುಡಿ ನದಿಯಲ್ಲಿ ಪ್ರಸ್ತಾವಿತ ಯೋಜನೆಯನ್ನು ನೂತನ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರಕಾರ ಜಾರಿಗೊಳಿಸಲಿದೆಯೆಂದು ಹೇಳಿದ್ದ ರಾಜ್ಯದ ವಿದ್ಯುತ್ ಸಚಿವ ಕಡಕಂಪಲ್ಲಿ ಸುರೇಂದ್ರನ್‌ರನ್ನು ವಿಜಯನ್ ಬೆಂಬಲಿಸಿದ ಬಳಿಕ ಮಾಜಿ ಪರಿಸರ ಸಚಿವರ ಈ ಟೀಕೆ ಹೊರಬಿದ್ದಿದೆ.
ಆದಿರಪಲ್ಲಿ ಯೋಜನೆಯ ಜೈವಿಕ ವಿನಾಶಕ್ಕೆ ಹೇಳಿ ಮಾಡಿಸಿದುದಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳ ಹಾಗೂ ದೇಶವನ್ನು ಸರ್ವನಾಶ ಮಾಡುತ್ತಾರೆಂದು ಜೈರಾಂ ರಮೇಶ್ ಪಿಟಿಐಗೆ ಹೇಳಿದ್ದಾರೆ.
 ನಿನ್ನೆ ದಿಲ್ಲಿಯಲ್ಲಿ ಪತ್ರಕರ್ತರೊಡನೆ ಮಾತನಾಡಿದ್ದ ಮುಖ್ಯಮಂತ್ರಿ, ದಶಕದ ಹಿಂದೆ ಅರಣ್ಯ ಪ್ರದೇಶದಲ್ಲಿ ಪ್ರಸ್ತಾವಿಸಲಾಗಿದ್ದ 163 ಮೇ.ವಾ. ಯೋಜನೆಯ ಅಲ್ಲಿನ ಜಲಪಾತಕ್ಕೆ ಏನೂ ತೊಂದರೆ ಮಾಡುವುದಿಲ್ಲ. ಆ ಬಗ್ಗೆ ಯಾವುದೇ ಕಳವಳ ಬೇಡ ಎಂದಿದ್ದರು.
ವಿವಿಧ ಇಲಾಖೆಗಳ ಹಸಿರು ನಿಶಾನೆ ದೊರೆತಿದ್ದರೂ ಯೋಜನೆಯು ಸರಣಿ ಕಾನೂನು ತೊಡಕುಗಳಲ್ಲಿ ಸಿಲುಕಿಕೊಂಡಿತ್ತೆಂದು ಅವರು ಹೇಳಿದ್ದರು.
2011ರಲ್ಲಿ ಯುಪಿಎ 2 ಸರಕಾರದ ಪರಿಸರ ಸಚಿವರಾಗಿದ್ದ ವೇಳೆ ಜೈರಾಂ ರಮೇಶ್, ಯೋಜನೆಗೆ ಅನುಮತಿ ನೀಡಲು ನಿರಾಕರಿಸಿದ್ದರು. ಆದಿರಪಲ್ಲಿ ಯೋಜನೆಯ ಕುರಿತು ತನ್ನ ನಿರ್ಧಾರ ಸ್ಪಷ್ಟ, ನಿಸ್ಸಂದಿಗ್ಧ ಹಾಗೂ ಖಚಿತವೆಂದು ಅವರು ತಿಳಿಸಿದ್ದಾರೆ.
ಮೂವರು ಮುಖ್ಯಮಂತ್ರಿಗಳ ಅವಧಿಯಲ್ಲಿ ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಅಧ್ಯಕ್ಷರಾಗಿದ್ದ ಪ್ರಧಾನ ಸಂರಕ್ಷಣಾಧಿಕಾರಿ ಟಿ.ಎಂ. ಮನೋಹರನ್ ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದರು. ಪ್ರದೇಶದ ವಾತಾವರಣ ಹಾಗೂ ಜೈವಿಕತೆಗಳಿಗೆ ಅದರಿಂದಾಗುವ ಹಾನಿಯನ್ನು ಪರಿಗಣಿಸಿ ಅವರು ಯೋಜನೆಯನ್ನು ವಿರೋಧಿಸಿದ್ದರೆಂದು ಜೈರಾಂ ರಮೇಶ್ ಹೇಳಿದ್ದಾರೆ.
ಬಿ.ಎಸ್.ವಿಜಯನ್ ನೇತೃತ್ವದ ಕೇರಳ ರಾಜ್ಯದ ಜೀವ ವೈವಿಧ್ಯ ಮಂಡಳಿಯ 2007ರ ವರದಿಯೊಂದು ಸಹ, ವಿದ್ಯುತ್ ಯೋಜನೆಯು ಪ್ರದೇಶದ ಜೈವಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದೆಂದು ಬೆಟ್ಟು ಮಾಡಿತ್ತೆಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಎಲ್‌ಡಿಎಫ್ ಸರಕಾರದ ಭಾಗಿದಾರ ಪಕ್ಷವಾಗಿರುವ ಸಿಪಿಐ, ಯೋಜನೆಗೆ ಮರು ಜೀವ ನೀಡುವ ಮುಖ್ಯಮಂತ್ರಿಯ ನಿರ್ಧಾರವನ್ನು ಬಹಿರಂಗವಾಗಿ ವಿರೋಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News